ಹತ್ರಸ್ ಅತ್ಯಾಚಾರ ಪ್ರಕರಣ : ಆರೋಪಿಯ ಮನೆಯಲ್ಲಿ ರಕ್ತದ ಬಣ್ಣವಿದ್ದ ಬಟ್ಟೆ ಪತ್ತೆ ; ಸಿಬಿಐ ಹೇಳಿಕೆ

Update: 2020-10-16 16:02 GMT
ಸಾಂದರ್ಭಿಕ ಚಿತ್ರ

ಲಕ್ನೊ, ಅ.16: ಹತ್ರಸ್ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನ ಮನೆಯಲ್ಲಿ ರಕ್ತದ ಬಣ್ಣವಿದ್ದ ಬಟ್ಟೆಯೊಂದನ್ನು ಪತ್ತೆಹಚ್ಚಿರುವುದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

 ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಲವಕುಶ್ ಸಿಕಾರ್ವರ್ ಎಂಬಾತನ ಮನೆಯಲ್ಲಿ ರಕ್ತದ ಬಣ್ಣವಿದ್ದ ಬಟ್ಟೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಲವಕುಶ್‌ನ ಹಿರಿಯ ಸಹೋದರ ರವಿ ಸಿಕಾರ್ವರ್ ಫ್ಯಾಕ್ಟರಿಯೊಂದರಲ್ಲಿ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದು ಇದು ಆತನ ಬಟ್ಟೆ ಎಂದು ಆರೋಪಿಯ ಕುಟುಂಬದವರು ಹೇಳಿದ್ದಾರೆ. “ನನ್ನ ಹಿರಿಯ ಸಹೋದರ ರವಿ ಸಿಕಾರ್ವರ್ ಪೈಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಆತನ ಬಟ್ಟೆಗೆ ಕೆಂಪು ಕಲೆ ಅಂಟಿದೆ. ಆದರೆ ಇದು ರಕ್ತದ ಕಲೆ ಎಂದು ಭಾವಿಸಿರುವ ಸಿಬಿಐ ಅಧಿಕಾರಿಗಳು ಆ ಬಟ್ಟೆಯನ್ನು ಕೊಂಡೊಯ್ದಿದ್ದಾರೆ” ಎಂದು ಆರೋಪಿಯ ಕಿರಿಯ ಸಹೋದರ ಲಲಿತ್ ಸಿಕಾರ್ವರ್ ಹೇಳಿದ್ದಾನೆ.

ಹಾಥರಸ್ ಗ್ರಾಮದಲ್ಲಿ ಕಳೆದ 4 ದಿನದಿಂದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡ, ಗುರುವಾರ ಎಲ್ಲಾ ನಾಲ್ಕು ಆರೋಪಿಗಳ ಮನೆಗೂ ಭೇಟಿ ನೀಡಿ ವಿಚಾರಣೆ ನಡೆಸಿದೆ. ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಆಕೆಯ ತಂದೆ ಮತ್ತು ಸಹೋದರರ ಹೇಳಿಕೆ ಪಡೆದುಕೊಂಡಿದೆ. ಸಂತ್ರಸ್ತೆಯ ಒಬ್ಬ ಸಹೋದರನನ್ನು ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದು ಮಾಹಿತಿ ಕಲೆ ಹಾಕಿದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ, ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಗೆ ಉತ್ತರಪ್ರದೇಶ ಸರಕಾರ ರಚಿಸಿದ್ದ ವಿಶೇಷ ತನಿಖಾ ತಂಡ(ಸಿಟ್) ತನ್ನ ತನಿಖೆಯನ್ನು ಪೂರ್ಣಗೊಳಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News