ಮಥುರಾ: ಕೃಷ್ಣ ಜನ್ಮಸ್ಥಳದಲ್ಲಿರುವ ಮಸೀದಿ ತೆರವು ಕೋರಿದ ಅರ್ಜಿ ಸ್ವೀಕರಿಸಿದ ನ್ಯಾಯಾಲಯ

Update: 2020-10-16 16:20 GMT
ಫೈಲ್ ಚಿತ್ರ

ಲಕ್ನೊ, ಅ.16: ಉತ್ತರಪ್ರದೇಶದ ಮಥುರಾ ನಗರದಲ್ಲಿ ಕೃಷ್ಣ ಜನ್ಮಸ್ಥಳದ ಪಕ್ಕದಲ್ಲಿರುವ ಈದ್ಗಾ ಮಸೀದಿಯನ್ನು ಅಲ್ಲಿಂದ ತೆರವುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಮಥುರಾ ನ್ಯಾಯಾಲಯ ಸಮ್ಮತಿಸಿದೆ ಎಂದು Livelaw ವರದಿ ಮಾಡಿದೆ.

17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಝೇಬ್‌ ಆದೇಶದಂತೆ ಹಿಂದು ದೇವಾಲಯವನ್ನು ದ್ವಂಸಗೊಳಿಸಿ ಆ ಸ್ಥಳದಲ್ಲಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ, ಮಸೀದಿಯನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ಕೋರಿ ಗುಂಪೊಂದು ಸೆಪ್ಟಂಬರ್ 16ರಂದು ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

 ಕತ್ರ ಕೇಶವ್ ದೇವ್ ಎಂಬ ಚಾರಿತ್ರಿಕ ಹೆಸರುಳ್ಳ 13.37 ಎಕರೆ ವಿಸ್ತೀರ್ಣದ ಈ ಪ್ರದೇಶದ ಪ್ರತೀ ಇಂಚು ಸ್ಥಳವೂ ಶ್ರೀಕೃಷ್ಣ ದೇವರ ಭಕ್ತರಿಗೆ ಮತ್ತು ಹಿಂದು ಸಮುದಾಯದವರಿಗೆ ಪವಿತ್ರವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ನ ಸಮ್ಮತಿಯೊಂದಿಗೆ ಮಸೀದಿ ಟ್ರಸ್ಟ್‌ನ ಆಡಳಿತ ಸಮಿತಿ ಅಕ್ರಮವಾಗಿ ನಡೆಸಿರುವ ಒತ್ತುವರಿ ಹಾಗೂ ನಿರ್ಮಾಣಗಳನ್ನು ಸ್ಥಳಾಂತರಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ ಅಕ್ಟೋಬರ್ 2ರಂದು ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.

1991ರ ಪೂಜಾಸ್ಥಳಗಳ ಕಾಯ್ದೆಯಡಿ ಪ್ರಕರಣವನ್ನು ಸ್ವೀಕರಿಸಲು ಇರುವ ಪ್ರತಿಬಂಧವನ್ನು ನ್ಯಾಯಾಲಯದ ಆಜ್ಞೆಯಲ್ಲಿ ಉಲ್ಲೇಖಿಸಲಾಗಿತ್ತು. ಈ ಕಾಯ್ದೆಯ ಪ್ರಕಾರ, ಈಗಾಗಲೇ ನ್ಯಾಯಾಲಯದಲ್ಲಿರುವ ರಾಮಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣ ಹೊರತುಪಡಿಸಿ, ಉಳಿದ ಎಲ್ಲಾ ಧಾರ್ಮಿಕ ಕೇಂದ್ರ ಅಥವಾ ಪೂಜಾಕೇಂದ್ರಗಳು 1947ರ ಆಗಸ್ಟ್ 15ರ ಸಂದರ್ಭದಲ್ಲಿನ ಯಥಾಸ್ಥಿತಿಯಲ್ಲೇ ಮುಂದುವರಿಯಬೇಕು . (ಈ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಪ್ರತ್ಯೇಕ ದಾವೆ ಹೂಡಲಾಗಿದೆ). ಮಥುರಾ ಪ್ರಕರಣಕ್ಕೆ 1991ರ ಕಾಯ್ದೆಯನ್ನು ಅನ್ವಯಿಸುವಂತಿಲ್ಲ ಎಂದು ಇದೀಗ ಮಥುರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News