‘ಕಾವೇರಿ ಕೂಗು’ ಯೋಜನೆ ವಿರುದ್ಧ ಪಿಐಎಲ್: ದುರ್ನಡತೆ ಹಿನ್ನೆಲೆಯಲ್ಲಿ ದೂರುದಾರನ ಕೈ ಬಿಟ್ಟ ಹೈಕೋರ್ಟ್

Update: 2020-10-16 17:05 GMT

ಬೆಂಗಳೂರು, ಅ. 16: ‘ಕಾವೇರಿ ಕೂಗು’ ಯೋಜನೆಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸದಂತೆ ಜಗ್ಗಿ ವಾಸುದೇವ್ ಅವರ ಇಶಾ ಪೌಂಡೇಶನ್‌ಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯಿಂದ ದೂರುದಾರ ಎ.ವಿ. ಅಮರ್‌ನಾಥನ್ ಅವರನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಶುಕ್ರವಾರ ಕೈಬಿಟ್ಟಿದೆ.

ದೂರುದಾರನ ನಡತೆ ಸಾರ್ವಜನಿಕ ಹಿತಾಸಕ್ತಿ ದಾವೆದಾರನಿಗೆ ಸೂಕ್ತವಾದುದಲ್ಲ ಎಂದು ಹೇಳಿರುವ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸ್ವಯಂ ಪ್ರೇರಿತ ಅರ್ಜಿಯಾಗಿ ಪರಿವರ್ತಿಸಿದೆ.

‘ಕಾವೇರಿ ಕೂಗು’ ಯೋಜನೆ ಕುರಿತು ಕಾರ್ಯಕ್ರಮ ಪ್ರಸಾರ ಮಾಡಿದರೆ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಬೆದರಿಕೆ ಒಡ್ಡಿ ಡಿಸ್ಕವರಿ ಚಾನೆಲ್‌ಗೆ ಇಮೇಲ್ ರವಾನಿಸಿದ ನಿಮ್ಮ ನಡತೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿನಾಗಿ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ಅಮರನಾಥನ್ ಅವರಲ್ಲಿ ಪ್ರಶ್ನಿಸಿತು. ಅಮರನಾಥನ್ ತನ್ನ ವರ್ತನೆಗೆ ಪಶ್ಚಾತಾಪಪಟ್ಟುಕೊಳ್ಳುವ ಬದಲು ಸಮರ್ಥಿಸಿಕೊಂಡಿರುವುದನ್ನು ನ್ಯಾಯಪೀಠ ಅಫಿಡಾವಿಟ್‌ನಲ್ಲಿ ಗುರುತಿಸಿದೆ.

‘‘ಆದುದರಿಂದ ದೂರುದಾರನನ್ನು ಸಾರ್ವಜನಿಕ ಹಿತಾಸಕ್ತಿ ದಾವೆದಾರನೆಂದು ಪರಿಗಣಿಸಿ ವಿಚಾರಣೆ ನಡೆಸಲು ನಾವು ಅವಕಾಶ ನೀಡುವುದಿಲ್ಲ’’ ಎಂದು ನ್ಯಾಯಪೀಠ ಹೇಳಿತು.

ದೂರಿನಲ್ಲಿ ಎತ್ತಲಾದ ವಿಷಯಗಳನ್ನು ಪರಿಶೀಲಿಸಬೇಕೆಂದು ಈ ನ್ಯಾಯಾಲಯ ಜಾರಿ ಮಾಡಿದ ಹಲವು ಆದೇಶಗಳಲ್ಲಿ ತಿಳಿಸಿದೆ. ಆದುದರಿಂದ ಈ ಅರ್ಜಿಯನ್ನು ಸ್ವಯಂಪ್ರೇರಿತ ದಾವೆ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿತು. ಇಂತಹ ಕಾರ್ಯಕ್ರಮವನ್ನು ಪ್ರಸಾರ ಮಾಡುವುದು ನ್ಯಾಯಾಂಗ ನಿಂದನೆ ಕಾರಣವಾಗುತ್ತದೆ ಎಂದು ಅಮರನಾಥ ನಿರ್ಧರಿಸಲು ಸಾಧ್ಯವಿಲ್ಲ. ಅಮರ್‌ನಾಥ ಅವರು ಸೂಕ್ತ ಪರಿಹಾರ ಕಂಡುಕೊಳ್ಳುವ ಬದಲು ಇಮೇಲ್ ಮೂಲಕ ಡಿಸ್ಕವರಿ ಚಾನೆಲ್‌ಗೆ ಬೆದರಿಕೆ ಒಡ್ಡಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News