ಆಕ್ರಮಿತ ಪಶ್ಚಿಮ ದಂಡೆಯಲ್ಲಿ ವಸತಿ ಸಂಕೀರ್ಣಗಳಿಗೆ ಇಸ್ರೇಲ್ ಅನುಮೋದನೆ

Update: 2020-10-16 17:22 GMT

ಟೆಲ್ ಅವೀವ್ (ಇಸ್ರೇಲ್), ಅ. 16: ಆಕ್ರಮಿತ ಫೆಲೆಸ್ತೀನ್ ಭೂಭಾಗದಲ್ಲಿ ಇನ್ನೂ ಸಾವಿರಾರು ವಸತಿ ಸಂಕೀರ್ಣಗಳ ಸ್ಥಾಪನೆಗೆ ಅಂಗೀಕಾರ ನೀಡಲು ಇಸ್ರೇಲ್ ತೆಗೆದುಕೊಂಡಿರುವ ನಿರ್ಧಾರವನ್ನು ಯುರೋಪ್ ದೇಶಗಳು ಶುಕ್ರವಾರ ಖಂಡಿಸಿವೆ.

‘‘ಆಕ್ರಮಿತ ಪ್ರದೇಶಗಳಲ್ಲಿನ ವಸತಿ ಸಂಕೀರ್ಣಗಳ ವಿಸ್ತರಣೆಯು ಅಂತರ್‌ರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ ಹಾಗೂ ಇಸ್ರೇಲ್-ಫೆಲೆಸ್ತೀನ್ ಸಂಘರ್ಷಕ್ಕೆ ನ್ಯಾಯೋಚಿತ ಹಾಗೂ ಶಾಶ್ವತ ಪರಿಹಾರವಾಗಿರುವ ಎರಡು-ದೇಶಗಳ ಸ್ಥಾಪನೆಯ ಸಂಭವನೀಯತೆಯನ್ನು ಮೊಟಕುಗೊಳಿಸುತ್ತದೆ’’ ಎಂದು ಜರ್ಮನಿ, ಫ್ರಾನ್ಸ್, ಬ್ರಿಟನ್, ಇಟಲಿ ಮತ್ತು ಸ್ಪೇನ್ ದೇಶಗಳ ವಿದೇಶ ಸಚಿವರು ಹೊರಡಿಸಿರುವ ಜಂಟಿ ಹೇಳಿಕೆಯೊಂದು ತಿಳಿಸಿದೆ.

 ‘‘ಇಸ್ರೇಲ್ ತೆಗೆದುಕೊಂಡಿರುವ ಈ ನಿರ್ಧಾರವು, ಮಾತುಕತೆಯನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಉಭಯ ಬಣಗಳ ನಡುವೆ ವಿಶ್ವಾಸವನ್ನು ಮರುನಿರ್ಮಿಸುವ ಪ್ರಯತ್ನಗಳಿಗೆ ಅಡಚಣೆಯಾಗಿದೆ. ಇದನ್ನು ನಾವು ನೇರವಾಗಿ ಇಸ್ರೇಲ್ ಸರಕಾರಕ್ಕೆ ತಿಳಿಸಿದ್ದೇವೆ’’ ಎಂದು ಅವರು ಹೇಳಿದ್ದಾರೆ ಹಾಗೂ ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲಿ ವಸತಿ ಸಂಕೀರ್ಣಗಳನ್ನು ನಿರ್ಮಿಸುವುದನ್ನು ತಕ್ಷಣ ನಿಲ್ಲಿಸುವಂತೆ ಇಸ್ರೇಲನ್ನು ಒತ್ತಾಯಿಸಿದ್ದಾರೆ.

ಆಕ್ರಮಿತ ಪಶ್ಚಿಮ ದಂಡೆಯಾದ್ಯಂತ 3,000ಕ್ಕೂ ಅಧಿಕ ವಸತಿ ಸಂಕೀರ್ಣಗಳ ನಿರ್ಮಾಣಕ್ಕೆ ಇಸ್ರೇಲ್ ಈ ವಾರ ಅನುಮೋದನೆ ನೀಡಿದೆ. ಇದರೊಂದಿಗೆ, ವಸತಿ ಸಂಕೀರ್ಣಗಳ ವಿಸ್ತರಣೆಗೆ ನೀಡಲಾಗಿರುವ ಎಂಟು ತಿಂಗಳ ವಿರಾಮವನ್ನು ಅದು ಕೊನೆಗೊಳಿಸಿದೆ.

‘ನಕಾರಾತ್ಮಕ ಬೆಳವಣಿಗೆ’

ಇಸ್ರೇಲ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹರೈನ್ ದೇಶಗಳ ನಡುವೆ ಶಾಂತಿ ಒಪ್ಪಂದದಂಥ ಧನಾತ್ಮಕ ಬೆಳವಣಿಗೆಗಳು ಸಂಭವಿಸಿರುವ ಹಿನ್ನೆಲೆಯಲ್ಲಿ, ಆಕ್ರಮಿತ ಪ್ರದೇಶದಲ್ಲಿ ಇನ್ನಷ್ಟು ಇಸ್ರೇಲಿ ವಸತಿ ಸಂಕೀರ್ಣಗಳನ್ನು ನಿರ್ಮಿಸುವುದು ನಕಾರಾತ್ಮಕ ಕ್ರಮವಾಗಿದೆ ಎಂದು ಪ್ರಭಾವಿ ಐರೋಪ್ಯ ದೇಶಗಳ ವಿದೇಶ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಕೊಲ್ಲಿ ದೇಶಗಳೊಂದಿಗೆ ಸುಧಾರಿಸುತ್ತಿರುವ ಸಂಬಂಧಗಳು ಮತ್ತು ಅಮೆರಿಕದ ಟ್ರಂಪ್ ಆಡಳಿತದ ಅಂಧ ಬೆಂಬಲವನ್ನು ಇಸ್ರೇಲ್ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಫೆಲೆಸ್ತೀನ್ ಅಧ್ಯಕ್ಷರ ವಕ್ತಾರ ನಬೀಲ್ ಅಬು ರುಡೈನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News