ಇಲ್ಲಿ ಯಾರೂ ಶುದ್ಧರಲ್ಲ, ಯಾರೂ ಅಶುದ್ಧರಲ್ಲ -ಡಿಎನ್‌ಎ ನುಡಿವ ಸತ್ಯ

Update: 2020-10-16 19:30 GMT

ಭಾಗ-2 

 ಹಿಮಯುಗ ಮುಗಿದು ಕೃಷಿ ಪ್ರಾರಂಭವಾದ ಮೇಲೆ ಪಶುಪಾಲನೆಯೂ ತೀವ್ರವಾಗಿ ಕ್ರಿಯಾಶೀಲಗೊಂಡಿತು. ಹೆಂಗಸರು ಕೃಷಿಯನ್ನು ನೋಡಿಕೊಂಡರೆ ಗಂಡಸರು ಪಶುಪಾಲನೆಯಲ್ಲಿ ತೊಡಗಿದರು. ಕೃಷಿ ನೆಲೆಸುವಿಕೆಯನ್ನು ಒತ್ತಾಯಿಸಿದರೆ ಪಶುಪಾಲನೆ ತಿರುಗುವಿಕೆಯನ್ನು ಬಯಸುತ್ತದೆ. ಅಲೆಮಾರಿ ಪಶುಪಾಲಕ ಗುಂಪುಗಳು ಯುರೋಪಿನ ಉತ್ತರದ ತುದಿಗೂ ಪೂರ್ವಕ್ಕೂ ದಕ್ಷಿಣಕ್ಕೆ ಭಾರತಕ್ಕೂ ಬಂದಿದ್ದಾರೆ. ಇದೇ ಪಶುಪಾಲಕ ಅಲೆಮಾರಿಗಳು ಸುಟ್ಟಮಡಕೆಗಳ ಮತ್ತು ಬೆಲ್ ಬೀಕರ್ ಎಂದು ಕರೆಯಲಾಗುವ ಸಂಸ್ಕೃತಿಗಳ ಹುಟ್ಟಿಗೆ ಕಾರಣವಾದರು. ಸ್ಟೆಪ್, ಯಾಮ್ನಾಯ ಪ್ರದೇಶದಿಂದ ಈ ಗುಂಪುಗಳೇ ಪ್ರಾಚೀನ ಸಂಸ್ಕೃತದಲ್ಲಿ ಋಗ್ವೇದದ ರಚನೆ ಮಾಡಿದರು. ಇಂದ್ರನ ನೇತೃತ್ವದಲ್ಲಿ ಸಿಂಧೂ ಕಣಿವೆಯ ಮೇಲೆ ದಾಳಿ ಮಾಡಿದವರು. ಪಶುಪಾಲನೆಗೆ ಅಡ್ಡಿಯಾದ ಪ್ರದೇಶಗಳು, ನಾಗರಿಕತೆಗಳನ್ನು ಶತ್ರುಗಳೆಂಬಂತೆ ಭಾವಿಸಿದವರು ಇವರೆ. ವಲಸೆ ಹೋದ ಕಡೆ ಗಂಡಸರನ್ನು ಕೊಂದರು ಅಥವಾ ಬೆರೆತು ಹೋದರು. ಸ್ಥಳೀಯ ಹೆಂಗಸರ ಜೊತೆ ಕೂಡುತ್ತಾ ಹೋದರು. ಹಾಗಾಗಿಯೇ ತಾಯಿಯ ಡಿಎನ್‌ಎ ಎಎಸ್‌ಐ ಇದ್ದರೂ, ತಂದೆಯ ಬಹುಪಾಲು ಕ್ರೋಮೋಸೋಮುಗಳು ಎಎನ್‌ಐ ಆಗಿರುವುದು. ಯುರೋಪಿನಲ್ಲೂ ಹೀಗೇ ಆಗಿದೆ. 2,000 ವರ್ಷಗಳ ಹಿಂದೆ ಇದ್ದ ಇಂಗ್ಲೆಂಡಿನವರೇ ಬೇರೆ ಇವತ್ತಿನವರೇ ಬೇರೆ ಎನ್ನಲಾಗುತ್ತದೆ. ಇದೇನೂ ಆಶ್ಚರ್ಯವಲ್ಲ. ಕೇವಲ 56 ಜನ ಸ್ಪೇನಿನ ಕಡಲುಗಳ್ಳರು/ಯುರೋಪಿನ ಪ್ರಕಾರ ಸಾಹಸಿಗಳು ಲ್ಯಾಟಿನ್ ಅಮೆರಿಕದ ಕೊಲಂಬಿಯಾಕ್ಕೆ ಹೋಗಿ ಅಲ್ಲಿನ ಗಂಡಸರನ್ನು ಕೊಂದು ಹಾಕಿದರು. ಹೆಂಗಸರನ್ನು ಕೂಡಿದರು. ಹಾಗಾಗಿ ಇವತ್ತಿನ ಕೊಲಂಬಿಯಾದ ಶೇ. 80ರಷ್ಟು ತಳಿ ಯುರೋಪ್ ಮೂಲದ ಗಂಡಸರದ್ದು. ಮೈಟೋಕಾಂಡ್ರಿಯಲ್ ಡಿಎನ್‌ಎ ಮಾತ್ರ ಅಲ್ಲಿನ ತಾಯಂದಿರದ್ದೆ. ಇದು ಇತಿಹಾಸ.

ಅದಕ್ಕೂ ಮೊದಲೇ ಬಂದ ಇರಾನಿ ಮೂಲದ ರೈತರು ಕೃಷಿಯ ಮೂಲಕ ದೊಡ್ಡ ಮಟ್ಟದ ಸಾಮರಸ್ಯವನ್ನು ಸಾಧಿಸಿದ್ದರು. ಇರಾನಿ ಮೂಲದ ಝಾಗ್ರೋಸ್ ಬೆಟ್ಟಗಳ ಮೂಲಕ ಬಂದ ಎಲಾಮೈಟ್ ಜನರು ಇವತ್ತಿನ ಸಿಂಧೂ, ಬಲೂಚಿಸ್ತಾನ, ಅಫ್ಘಾನಿಸ್ತಾನ, ಪಾಕಿಸ್ತಾನ, ಇರಾನ್ ಮುಂತಾದ ಪ್ರದೇಶಗಳಲ್ಲಿ ಆದಿ ದ್ರಾವಿಡ ಮತ್ತು ಆದಿ ಎಲಾಮೈಟ್ ಭಾಷಿಕ ಸಂಸ್ಕೃತಿಯೊಂದನ್ನು ಬೆಳೆಸಲು ಸಾಧ್ಯ ಮಾಡಿದರು. ಜೈವಿಕವಾಗಿ ನೋಡಿದರೂ ಸಹ ದ್ರಾವಿಡ ಭಾಷಿಕರು ಅಥವಾ ಎಎಸ್‌ಐ ಗುಂಪಿನಲ್ಲಿ ಶೇ. 25ರಷ್ಟು ಇರಾನಿ ಮೂಲದ ರೈತರ ಅಂಶಗಳಿವೆ. ಶೇ. 75ರಷ್ಟು ಅಂಡಮಾನಿಗರ ವಂಶಸ್ಥರ ಡಿಎನ್‌ಎ ದಕ್ಷಿಣ ಭಾರತೀಯರ ಮೂಲದಲ್ಲಿದೆ.

ಮೆಕಾಲ್ಪಿನ್, ಕಾಲ್ಡ್ ವೆಲ್ ಸೌತ್ ವರ್ಥ್, ಮೆಕಾರ್ಥಿ ಮತ್ತು ದ ಹಾರ್ಸ್‌, ದ ವ್ಹೀಲ್ ಮತ್ತು ದ ಲಾಂಗ್ವೇಜ್ ಪುಸ್ತಕ ಬರೆದ ಡೇವಿಡ್ ಆ್ಯಂಟನಿ ಮುಂತಾದವರ ರೋಮಾಂಚಕ ಭಾಷಿಕ, ಸಾಂಸ್ಕೃತಿಕ ಅನ್ವೇಷಣೆಗಳು ನಮಗೆ ಹೊಸಬೆಳಕನ್ನು ನೀಡುತ್ತವೆ. ಆದರೆ ನಾವು ಸ್ವರತಿ ಭಾವ ಹುಟ್ಟಿಸುವ ಕನ್ನಡಿಗಳನ್ನು ನೋಡುತ್ತಾ ಕೂರುವುದನ್ನು ಬಿಟ್ಟು ಕಿಟಕಿ, ಬಾಗಿಲುಗಳನ್ನು ತೆರೆದಿಟ್ಟು ಕಲಿತರೆ ಮಾತ್ರ ಕನ್ನಡ ವನ್ನು ಕಟ್ಟಿ ಬೆಳೆಸಲು ಸಾಧ್ಯ. ಶುದ್ಧತೆಯ ವ್ಯಸನಕ್ಕೆ ಬಿದ್ದರೆ ನಾಶ ಖಂಡಿತ. ಎಲ್ಲ ಭಾಷೆಗಳ ಸತ್ವಹೀರಿ ಬೆಳೆದ ಭಾಷೆ ಮಾತ್ರ ಬೆಳೆಯುತ್ತದೆ. ಜೈವಿಕವಾಗಿಯೂ ಇದು ನಿಜ. ಎಲ್ಲ ಸೊಪ್ಪು, ಹುಲ್ಲನ್ನು ತಿಂದ ಹಸುವಿಗೆ ಗರ್ಭನಿಲ್ಲುತ್ತದೆ. ಇಲ್ಲದಿದ್ದರೆ ಬಂಜೆಯಾಗಿ ಬಿಡುತ್ತದೆ. ಪಶುವೈದ್ಯರನ್ನು ಕೇಳಿ ನೋಡಿ ಬೇಕಿದ್ದರೆ.

 ತಳಿಶಾಸ್ತ್ರಜ್ಞರ ಊಹೆಗಳನ್ನೇ ಬುಡಮೇಲು ಮಾಡಿದ ಇನ್ನೊಂದು ಸಂಗತಿಯಿದೆ. ಈ ತಳಿಶಾಸ್ತ್ರಜ್ಞರು ಸ್ಟೆಪ್ ಜನರು ಮತ್ತು ಇರಾನಿ ರೈತರು ಮೊದಲು ಉತ್ತರ ಭಾರತದ ಬಯಲುಗಳಲ್ಲಿರುವ ಜನರ ಜತೆ ಸಂಕರಗೊಂಡಿದ್ದಾರೆ, ಆ ನಂತರ ದಕ್ಷಿಣದವರ ಜತೆ ಸಂಕರಗೊಂಡಿರಬೇಕು ಎಂದು ಊಹಿಸಿದ್ದರಂತೆ. ಆದರೆ ಸಂಶೋಧನೆಯ ಫಲಿತಾಂಶಗಳು ಮಾತ್ರ ಈ ಊಹೆಯನ್ನು ಸಂಪೂರ್ಣ ಉಲ್ಟಾ ಮಾಡಿವೆ. ಅವುಗಳ ಪ್ರಕಾರ ಮೇಲಿನ ಎರಡೂ ಗುಂಪುಗಳು ಮೊದಲು ಬೆರೆತಿರುವುದು ದಕ್ಷಿಣ ಭಾರತದಲ್ಲಿ ಇಂದು ನೆಲೆಸಿರುವ ಜನರ ಪೂರ್ವಿಕರೊಂದಿಗೆ. ಅಂದರೆ ಸಿಂಧೂ ಗಂಗಾ ಬಯಲುಗಳಲ್ಲಿ ಮತ್ತು ಅದಕ್ಕೂ ಮೇಲೆ ಬಲೂಚ್, ಹಿಂದೂ ಖುಷ್, ಸಿಂಧ್ ಪ್ರಾಂತಗಳಲ್ಲಿ ಸಂಕರವಾಗುವ ಹೊತ್ತಿನಲ್ಲಿದ್ದ ಜನರು ಇಂದು ದಕ್ಷಿಣಕ್ಕೆ ಒತ್ತಲ್ಪಟ್ಟ ಜನರೇ ಎಂದು ತಳಿಶಾಸ್ತ್ರವೂ ಹೇಳುತ್ತಿದೆ.

ಒಟ್ಟಾರೆ ಭಾರತ ಎಂದರೆ ಅಂಡಮಾನಿನ ಬುಡಕಟ್ಟು ಜನರ ವಂಶಸ್ಥರು, ಇರಾನಿ ರೈತರ ವಾರಸುದಾರರು ಮತ್ತು ಸ್ಟೆಪ್ ಪ್ರದೇಶಗಳ ಜನರ ಉತ್ತರಾಧಿಕಾರಿಗಳ ಸಮಗ್ರ ಸಂಕರ ಜಾತ್ರೆ ಎನ್ನಬಹುದು. ಎಎಸ್‌ಐ ಜನರಲ್ಲಿ ಶೇ. 25ರಷ್ಟು ಇರಾನಿ ರೈತರ ಡಿಎನ್‌ಎ ಅಂಶಗಳಿದ್ದರೆ, ಶೇ. 75ರಷ್ಟು ಜನರಲ್ಲಿ ಅಂಡಮಾನಿನ ಬೇಟೆ ಮತ್ತು ಸಂಗ್ರಹಕಾರರ ವಾರಸುದಾರಿಕೆಯ ಅಂಶಗಳಿವೆ. ಎಎನ್‌ಐಗಳಲ್ಲಿ ಶೇ. 50ರಷ್ಟು ಇರಾನಿ ರೈತಮೂಲದ ಜೀನುಗಳಿದ್ದರೆ, ಶೇ. 50ರಷ್ಟು ಸ್ಟೆಪ್ ಜನರ ಜೀನುಗಳಿವೆ. ಹಾಗಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ, ಬೌದ್ಧ, ಜೈನ, ಶೈವ ಹಾಗೂ ಬ್ರಾಹ್ಮಣ, ಚಮ್ಮಾರ, ಒಕ್ಕಲಿಗ, ಮಾರವಾಡಿ, ಕುರುಬ, ಗೊಲ್ಲ, ಠಾಕೂರ್ ಎಲ್ಲವೂ ಕೃತಕ ಮತ್ತು ರಾಜಕೀಯ ಅನಿವಾರ್ಯಕ್ಕಾಗಿ, ಸಂಪತ್ತಿನ ಒಡೆತನಕ್ಕಾಗಿ ಹುಟ್ಟಿಕೊಂಡ ದುಷ್ಟ ತತ್ವಗಳು. ಗಡಿಗಳು, ದೇಶಗಳು, ಭಾಷೆಗಳೂ ಸಹ ಹಾಗೆಯೇ. ಆದರೆ ಜಾತಿ, ಧರ್ಮಗಳು ರಕ್ತಗತವೆಂಬಂತೆ ನಂಬುತ್ತೇವೆ. ಜೆನೆಟಿಕ್ಸ್ ಹಾಗೆ ರಕ್ತಗತವಾಗುವ ವಿಚಾರ ಯಾವುದೂ ಇಲ್ಲವೆಂದು ಜೆನೆಟಿಕ್ಸ್ ಹೇಳುತ್ತದೆ. ಹಾಗಾಗಿ ನಾವೆಲ್ಲರೂ ಟಾಗೂರರು ಸೃಷ್ಟಿಸಿದ ಕಾದಂಬರಿಯ ಪಾತ್ರವಾದ ಗೋರಾಗಳೆ! ಒಣ ಅಹಮ್ಮಿನವರು ಗೋರಾನಂತೆ ಕಡುದುಃಖಿಗಳು ಮತ್ತು ನಿನ್ನೆಗಳಲ್ಲಿ ಬದುಕುವವರು. ವಿಶಾಲವಾದ ವೈಚಾರಿಕ, ವೈಜ್ಞಾನಿಕ ಮತ್ತು ಉದಾರವಾದಿ ಮಾನವೀಯ ರಾಜಕೀಯ ಪ್ರಜ್ಞೆ ಮಾತ್ರ ಮನುಕುಲವನ್ನು ಉಳಿಸಬಲ್ಲುದು. ಈ ವಿಚಾರಕ್ಕೆ ಬೆನ್ನು ತೋರಿಸಿದರೆ ನಮ್ಮ ದ್ವೇಷದ, ಸುಳ್ಳಿನ, ಮೂರ್ಖತನದ ಮತ್ತು ಹುಂಬುತನದ ಡಿಎನ್‌ಎಗಳನ್ನು ಸೃಷ್ಟಿಸಿ ನಮ್ಮ ಮಕ್ಕಳಿಗೆ ವರ್ಗಾವಣೆ ಮಾಡಿದ ಘೋರ ಪಾಪಕ್ಕೆ, ಪಾತಕಕ್ಕೆ ಗುರಿಯಾಗಬೇಕಾದ ಶಾಪಗ್ರಸ್ಥ ಜನರಾಗುತ್ತೇವೆ.

ಭಾರತದಲ್ಲೇ ಏಕೆ ಜಾತಿ ಬೆಳೆಯಿತು ಮತ್ತು ಉಳಿಯಿತು?

ಮೇಲೆ ನೋಡಿದ ಹಾಗೆ ಭಾರತ ಜಗತ್ತಿನ ಹಲವು ಜನ ಸಮುದಾಯಗಳ ಡಿಎನ್‌ಎಗಳನ್ನು ತನ್ನ ಮೈಯಲ್ಲಿರಿಸಿಕೊಂಡಿದೆ. ಜಾತಿಯು, ವರ್ಣ ವ್ಯವಸ್ಥೆಯ ಮೂಲಕ, ವೃತ್ತಿಗಳ ಮೂಲಕ, ಬುಡಕಟ್ಟು ಆಚರಣೆಯ ಮೂಲಕ ಇಳಿದು ಬಂದಿದೆ. ಈ ಮೂರೂ ಅಂಶಗಳು ಉಳಿದ ಸಂಸ್ಕೃತಿಗಳಲ್ಲೂ ಇವೆ. ನಾಗರಿಕತೆಗಳಲ್ಲೂ ಇವೆ. ಆದರೆ ವಿವಾಹ ಮತ್ತು ಆಹಾರ ಪದ್ಧತಿಯಲ್ಲಿ ಉಳಿದ ಸಂಸ್ಕೃತಿಗಳು ಉದಾರಗೊಂಡವು. ಅನಿಶ್ಚಿತ ರಾಜಕೀಯ ವ್ಯವಸ್ಥೆ ಮತ್ತು ಧಾರ್ಮಿಕ, ಸಾಮಾಜಿಕ, ರಾಜಕೀಯ ಸುಧಾರಣೆಗಳು ಉಳಿದ ಕಡೆ ಮನುಷ್ಯ ಸಮಾಜವನ್ನು ಮುಕ್ತವಾಗಿರಿಸಿತು. ಆದರೆ ಸ್ಟೆಪ್ ಪುರೋಹಿತರು, ನಾಗಾ ಪುರೋಹಿತರು ಹಾಗೂ ಉಳಿದ ಸಮುದಾಯಗಳಲ್ಲಿನ ಪುರೋಹಿತರು ತಮ್ಮ ಅನುಕೂಲಕ್ಕಾಗಿ ರೂಪಿಸಿಕೊಂಡ ಪ್ರಮೇಯಗಳನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಹುಲಿಗೆ ಸಿಕ್ಕಿದ ರಕ್ತದ ರುಚಿಯನ್ನು ಬಿಡುವುದು ಅದರ ಜೀವನ್ಮರಣದ ಪ್ರಶ್ನೆಯಂತಾಯಿತು. ಹಾಗಾಗಿ ಸಾಧ್ಯವಾದ ಕಡೆಗಳಲ್ಲೆಲ್ಲ ಭಿನ್ನತೆಗಳನ್ನು ಪ್ರೋತ್ಸಾಹಿಸಿ ಅದನ್ನು ಅನುಸರಿಸಲೇಬೇಕೆಂಬಂತೆ ನಿಯಮ ರೂಪಿಸಿದರು. ಹಾಗೆ ಮಾಡಿದವರಲ್ಲಿ ಮನು ಅತ್ಯಂತ ಮುಖ್ಯ ನಿಯಮಕಾರ. ಜಾತಿಗಳು ಉಳಿದು ಬಂದಿರುವುದೇ ಒಳಬಾಂಧವ್ಯ ವಿವಾಹಗಳಿಂದ, ಪ್ರತ್ಯೇಕತೆಗಳಿಂದ. ಭಾರತದಲ್ಲಿ ಇಂದು ಸುಮಾರು 40 ಸಾವಿರಕ್ಕೂ ಹೆಚ್ಚಿನ ಒಳಬಾಂಧವ್ಯ ವಿವಾಹದ ಗುಂಪುಗಳಿವೆ. ಖ್ಯಾತ ಮಾನವಶಾಸ್ತ್ರಜ್ಞರಾದ ಇರಾವತಿ ಕರ್ವೆಯವರು ‘‘ಸಾವಿರಾರು ವರ್ಷಗಳಿಂದ ಪ್ರತ್ಯೇಕತೆಯನ್ನು ಉಳಿಸಿಕೊಂಡ, ಪ್ರತ್ಯೇಕ ಆಚರಣೆಗಳುಳ್ಳ ಬುಡಕಟ್ಟುಗಳ ಕಾರಣಕ್ಕಾಗಿ ಜಾತಿ ಬಂದಿರಬಹುದು’’ ಎನ್ನುತ್ತಾರೆ. ಬಾಬಾಸಾಹೇಬರು ‘‘ಗೆದ್ದವರು ಮೇಲ್ಜಾತಿಗಳಿಗೂ ಸೋತವರು ದಮನಿತ ಜಾತಿಗಳಿಗೂ ಸೇರಿದರು. ಸೋತವರು ಶಾಶ್ವತವಾಗಿ ಅಧಿಕಾರ ಕೇಂದ್ರಗಳ ಬಳಿ ಸುಳಿಯದಂತೆ ಮಾಡಲು ಜಾತಿಗಳ ಥಿಯರಿಯನ್ನು ಹುಟ್ಟು ಹಾಕಿ ಈ ದೇಶದ ನಾಗರಿಕತೆಯನ್ನು ಹಾಳು ಮಾಡಿದರು’’ ಎಂಬ ರಾಜಕೀಯ ಆರ್ಥಿಕ ಪ್ರಮೇಯವನ್ನು ಮಂಡಿಸಿದರು.

ನಿಕೋಲಸ್ ಡಿರ್ಕ್ ರೀತಿಯ ಮಾನವಶಾಸ್ತ್ರಜ್ಞರು ‘‘ಬಹಳ ಹಿಂದಿನಿಂದಲೇ ಒಳಬಾಂಧವ್ಯ ವಿವಾಹಕ್ಕೆ ನಿಷೇಧವಿರಲಿಲ್ಲ. ಸಣ್ಣಮಟ್ಟದಲ್ಲಿದ್ದ ಈ ಪದ್ಧತಿ ಬ್ರಿಟಿಷರ ಕೆಟ್ಟ ಆಡಳಿತ ನೀತಿಗಳಿಂದಾಗಿ ಜಾತಿ ಪದ್ಧತಿ ಬಿಗಿಯಾಗಿ ಆಚರಣೆಗೆ ಒಳಗಾಗತೊಡಗಿತು’’ ಎನ್ನುತ್ತಾರೆ.

ಆದರೆ ತಳಿ ವಿಜ್ಞಾನ ಮಾತ್ರ ಬೇರೆಯ ಸತ್ಯವನ್ನೇ ಹೇಳುತ್ತಿದೆ. ಮೇಲೆ ದೀರ್ಘವಾಗಿ ಚರ್ಚಿಸಿದಂತೆ ಎಎಸ್‌ಐ ಮತ್ತು ಎಎನ್‌ಐಗಳ ನಡುವೆ ಏಳೆಂಟು ಸಾವಿರ ವರ್ಷಗಳಿಂದ ಮೂರು ಸಾವಿರ ವರ್ಷಗಳ ವರೆಗೆ ನಿರಂತರ ಸಂಕರಗಳು ನಡೆಯುತ್ತಲೇ ಇದ್ದವು. ನಿಷೇಧಗಳಿದ್ದರೆ ಸಂಕರ ಸಾಧ್ಯವಿಲ್ಲ. ಜಗತ್ತಿನಲ್ಲಿ ಈಗಲೂ ಆಷ್ಕೆನಾಜಿ ಯಹೂದಿಗಳು, ಫಿನ್ನಿಷ್ ಜನರಲ್ಲಿ ಹಾಗೂ ಭಾರತದಲ್ಲಿ ಮಾತ್ರ ಈ ಪದ್ಧತಿ ಇದೆ.

ಡಿಎನ್‌ಎ ಅಧ್ಯಯನಗಳ ಪ್ರಕಾರ ಭಾರತದಲ್ಲಿ ಬಹಳ ಕಾಲದಿಂದ ಸಂಕರಗೊಳ್ಳದೆ ಪ್ರತ್ಯೇಕತೆಯನ್ನು ಉಳಿಸಿಕೊಂಡ ಜಾತಿ ಆಂಧ್ರದ ವೈಶ್ಯರದು. ಸುಮಾರು 50 ಲಕ್ಷದಷ್ಟು ಜನಸಂಖ್ಯೆಯಿರುವ ವೈಶ್ಯರು ಸುಮಾರು 3ಸಾವಿರದಿಂದ 2ಸಾವಿರ ವರ್ಷಗಳ ಮಧ್ಯದಲ್ಲೇ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲು ಆರಂಭಿಸಿದ್ದಾರೆ. ಶೇ. 1ರಷ್ಟು ಜನರು ಮಾತ್ರ ಪ್ರತ್ಯೇಕವಾದ ಡಿಎನ್‌ಎ ಗುರುತನ್ನು ಅಳಿಸಿಕೊಂಡಿದ್ದಾರೆ. ನಗರ, ಪಟ್ಟಣಗಳಲ್ಲಿ ಹೆಚ್ಚು ಜನಸಂದಣಿಯ ಮಧ್ಯೆ, ಎಲ್ಲ ಜನ ಸಮುದಾಯಗಳ ಮಧ್ಯೆ ಬದುಕಿದ್ದರೂ ತಮ್ಮ ಸಾಮಾಜಿಕ ಆಚರಣೆಗಳ ಮೂಲಕ ಪ್ರತ್ಯೇಕತೆಯನ್ನು ಉಳಿಸಿಕೊಂಡಿದ್ದಾರೆ.

ಯಹೂದಿಗಳು ಮತ್ತು ವೈಶ್ಯರ ಉದಾಹರಣೆಗಳನ್ನು ನೋಡಿದರೆ ಮೇಲ್ನೋಟಕ್ಕೆ ಅರ್ಥವಾಗುವ ಸಂಗತಿ; ಸಂಪತ್ತಿಗೂ, ಆಸ್ತಿಯ ಉತ್ತರಾಧಿಕಾರಕ್ಕೂ ಪ್ರತ್ಯೇಕತೆಯ ನಿಯಮಗಳಿಗೂ ನೇರ ಸಂಬಂಧವಿರುವಂತಿದೆ. ಗುಟ್ಟುಗಳನ್ನು ಯಾರಿಗೂ ತಿಳಿಯದಂತೆ ಉಳಿಸಿ ತಮ್ಮವರಿಗೆ ಮಾತ್ರ ದಾಟಿಸುವ ಉದ್ದೇಶದಿಂದ ಭಾಷೆಗಳು ಪ್ರಾರಂಭವಾದವು. ಬುಡಕಟ್ಟುಗಳಿಗೆ ಸಂವಹನದಷ್ಟೆ ಮುಖ್ಯವಾಗಿ ಬೇಟೆಯ, ಆಹಾರದ, ಗೆಡ್ಡೆ ಗೆಣಸುಗಳಿರುವ ಜಾಗದ ಗುಟ್ಟುಗಳನ್ನು ತಿಳಿಸಲು ಕೋಡ್‌ವರ್ಡ್‌ಗಳ/ಸಂಕೇತಗಳ ಅಗತ್ಯವಿತ್ತು. ಅದಕ್ಕಾಗಿ ಭಾಷೆ ಸಂಕೀರ್ಣ ರೂಪದಲ್ಲಿ ಬಳಕೆಯಾಗತೊಡಗಿತು. ಪಾಲಿನೇಶಿಯನ್ ದ್ವೀಪಗಳಲ್ಲಿ ಪ್ರತಿ ಒಂದೂವರೆ ಕಿ.ಮೀ.ಗೆ ಒಂದರಂತೆ ಪ್ರತ್ಯೇಕ ಭಾಷೆ ಬಳಕೆಯಲ್ಲಿದೆ. ‘‘ಮನುಷ್ಯ ಮೊತ್ತಮೊದಲಿಗೆ ಕಂಡುಕೊಂಡ ಪ್ರಚಂಡ ತಂತ್ರಜ್ಞಾನ ಭಾಷೆ’’ ಎನ್ನುತ್ತಾನೆ ಎವರೆಟ್ಟಿ. ಈ ಡೇನಿಯಲ್ ಎವರೆಟ್ಟಿ ಎಂಬಾತ ಸುಮಾರು 45 ವರ್ಷಗಳಿಂದ ಅಮೆಝಾನ್ ಕಾಡುಗಳ ಬುಡಕಟ್ಟು ಜನರ ಭಾಷೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದಾನೆ. ಈ ಸಿದ್ಧಾಂತ ಭಾಷೆಗಳು ಯಾಕೆ ಭಿನ್ನವಾಗಿರುತ್ತವೆ ಎಂಬ ಇದುವರೆಗಿನ ತಿಳುವಳಿಕೆಗಳನ್ನು ಬುಡಮೇಲು ಮಾಡುತ್ತದೆ. ಭಾಷೆಯ ಹಾಗೆಯೇ ಒಳಬಾಂಧವ್ಯ ವ್ಯವಸ್ಥೆ ಕೂಡ. ವೈಶ್ಯರಂತೆ ಯಹೂದಿಗಳೂ ಕೂಡ ವರ್ತಕ ವೃತ್ತಿಯ, ಲೇವಾದೇವಿ ಮಾಡುವ ಸಮುದಾಯವೇ. ಸಿಂಧೂ ಕಣಿವೆ, ಮೆಸಪೊಟೇಮಿಯಾ ಮುಂತಾದ ಪ್ರಾಚೀನ ಸಂಸ್ಕೃತಿಗಳೂ ವಣಿಕ ಸಂಸ್ಕೃತಿಗಳೇ. ವಣಿಕ ಸಂಸ್ಕೃತಿಗಳು ಸುಲಭವಾಗಿ ಪುರೋಹಿತರ ಕಬ್ಜಾದಲ್ಲಿರುತ್ತವೆ. ಅವು ಒಂದಕ್ಕೊಂದು ಪೂರಕವಾಗಿ ದುಡಿಯುತ್ತಿರುತ್ತವೆ. ಖಾಸಗಿ ಆಸ್ತಿ ಗಳಿಸಿ ಉಳಿಸಲು ಬಹುಶಃ ಜಾತಿ ಪ್ರಾರಂಭವಾಗಿರಬಹುದೆನ್ನುವುದನ್ನು ತಳಿಶಾಸ್ತ್ರವೂ ಸಮರ್ಥಿಸುತ್ತದೆ.

ತಳಿ ಪ್ರತ್ಯೇಕತೆ ಮತ್ತು ರೋಗಗಳ ವಾರಸುದಾರಿಕೆ
 ತಳಿ ವಿಜ್ಞಾನದ ಹುಟ್ಟಿನ ಹಿಂದೆ ಮನುಷ್ಯನನ್ನು ಕಾಡುತ್ತಿರುವ ಭೀಕರ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶವೂ ಇತ್ತು. ಕೊರೋನ ರೋಗಕ್ಕೆ ಯಾವುದಾದರೂ ಜೀನುಗಳಲ್ಲಿ ಪ್ರತಿರೋಧ ಶಕ್ತಿ ಅಡಗಿದೆಯೇ ಎಂಬ ಹುಡುಕಾಟ ನಡೆಯುತ್ತಲೇ ಇದೆ. ಮನುಷ್ಯನನ್ನು ಇಂದು ಬಾಧಿಸುತ್ತಿರುವ ಅನೇಕ ರೋಗಗಳಲ್ಲಿ ಪೂರ್ವಜರ ಬಳುವಳಿಗಳೇ ಹೆಚ್ಚಿವೆ. ಮನುಷ್ಯರು ಹುಟ್ಟಿದಾಗಲೇ ಯಾವಾಗ ಸಾಯಬಹುದೆಂದು ಷರಾ ಬರೆಯಲಾಗಿರುತ್ತದೆ ಎನ್ನುವ ಜ್ಯೋತಿಷ್ಯಶಾಸ್ತ್ರದಂತೆ ತಳಿವಿಜ್ಞಾನವೂ ವರ್ತಿಸುತ್ತದೆ. ಪೂರ್ವಜರಿಗೆ ಯಾವ ರೋಗಗಳಿದ್ದವು? ಯಾವ ರೋಗಗಳು ನಮ್ಮನ್ನು ಬಾಧಿಸಬಹುದು? ಅವುಗಳಿಂದ ಬಿಡುಗಡೆ ಹೇಗೆ ಎಂದು ತಳಿವಿಜ್ಞಾನಿಗಳು ಮತ್ತು ವೈದ್ಯಕೀಯ ತಜ್ಞರು ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವಿಪರೀತ ಒಳಬಾಂಧವ್ಯ ವಿವಾಹಗಳಿಂದ ಕ್ಷೀಣಿಸುತ್ತಿರುವ ಆಷ್ಕೆನಾಜಿ ಯಹೂದಿಗಳು ಈಗ ತಮ್ಮ ಮಕ್ಕಳ ಡಿಎನ್‌ಎ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸುತ್ತಾರೆ.

ಮದುವೆಯಾಗಬೇಕಾದರೆ ಡಿಎನ್‌ಎ ಪರೀಕ್ಷೆಯ ಸರ್ಟಿಫಿಕೇಟ್ ಇರಲೇಬೇಕು. ಯಹೂದಿಗಳಿಗೆ ತಾಯ್- ಸ್ಯಾಕ್ ಎಂಬ ರೋಗ ಪೂರ್ವಜರಿಂದ ಬಳುವಳಿಯಾಗಿ ಬಂದಿದೆ. ಅದು ಬಂದವರು ನೋಡು ನೋಡುತ್ತಿದ್ದಂತೆ ಮೆದುಳಿನ ಕೋಶಗಳು ನಶಿಸುತ್ತಾ ಹೋಗಿ ಸತ್ತುಹೋಗುತ್ತಾರೆ. ಹಾಗೆಯೇ ಝೆಲ್‌ವೆಗರ್ ಸಿಂಡ್ರೋಮ್, ರಿಲೇ ಡೇ ಸಿಂಡ್ರೋಮ್, ಫೆಮಿಲಿಯಲ್ ಡಿಸಾಟೋಮಿಯಾ ಮುಂತಾದ ನೂರಾರು ಕಾಯಿಲೆಗಳು ಆಷ್ಕೆನಾಜಿ ಯಹೂದಿಗಳನ್ನು ಬಾಧಿಸುತ್ತಿವೆ. ವೈಶ್ಯರಲ್ಲೂ ಸಹ ನೂರಾರು ಸಿಂಡ್ರೋಮುಗಳು ಪೂರ್ವಜರಿಂದ ಬಳುವಳಿ ರೂಪದಲ್ಲಿ ಬಂದಿವೆ. ಪ್ರೋಟೀನು ಕಡಿಮೆಯಾಗಿ ಬರುವ ಸ್ನಾಯುಗಳ ಸೆಳೆತದಂತಹ ಕಾಯಿಲೆಗಳಿಗೆ ಆಧುನಿಕ ಔಷಧ ವಿಜ್ಞಾನದಲ್ಲಿ ಪರಿಹಾರ ಇಲ್ಲ. ಬದಲಾಗಿ ಈ ಜಾತಿಯ ವಿಶಿಷ್ಟ ಸಮಸ್ಯೆ ಗೊತ್ತಿರುವ, ಸ್ಥಳೀಯ ನರ್ಸ್‌ಗಳು, ವೈದ್ಯರು ಈ ಸಮಸ್ಯೆಯನ್ನು ಗುರುತಿಸಿ ವಾಸಿಮಾಡಲು ಪ್ರಯತ್ನಿಸುತ್ತಾರೆ. ಹೀಗೆಯೇ ಸಾವಿರಾರು ವರ್ಷ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುತ್ತಾ ಹೋದರೆ ಅತ್ಯಂತ ರೋಗಗ್ರಸ್ಥ ಜನಸಮೂಹ ತುಂಬಿಹೋಗುತ್ತದೆ. ನಿಧಾನಕ್ಕೆ ಮಕ್ಕಳೇ ಹುಟ್ಟದಿರುವ ಪರಿಸ್ಥಿತಿ ಉದ್ಭವವಾಗುತ್ತದೆ. ರಾಜಮನೆತನಗಳಲ್ಲಿ ಈಗಾಗಲೇ ಈ ಸಮಸ್ಯೆ ಇದೆ. ಇದನ್ನು ಬ್ಲ್ಯೂಬ್ಲಡ್ ಸಿಂಡ್ರೋಮ್ ಎಂದು ತಮಾಷೆ ಮಾಡುತ್ತಾರೆ.

 ತಳಿವಿಜ್ಞಾನ ಮನುಷ್ಯರ ಪ್ರತ್ಯೇಕತೆ, ಶ್ರೇಷ್ಠತೆಯ ಪ್ರಜ್ಞೆಗಳು ಮಾರಣಾಂತಿಕ ಹಾಗೂ ವಿನಾಶಕಾರಿ ಎಂಬ ಸತ್ಯವನ್ನು ನುಡಿಯುತ್ತದೆ ಎಂಬ ಮಾತನ್ನು ಕೇಳಿದ ವ್ಯಾಸ, ಕಾಳಿದಾಸ, ಬುದ್ಧ, ಬಸವಣ್ಣ, ಕುವೆಂಪು, ಷರೀಫ, ಕೈವಾರ ತಾತಯ್ಯ ಮುಂತಾದ ಅಸಂಖ್ಯಾತ ಅವಧೂತರು, ಆರೂಢರು ತಮ್ಮ ತಮ್ಮಲ್ಲೇ ನಗುತ್ತಿದ್ದಾರೆ. ವಶಿಷ್ಠರ, ಮನುಗಳ ಮುಖದಮೇಲೆ ಚಿಂತೆಗಳ ಆಳವಾದ ಗೆರೆಗಳು ಕಾಣಿಸುತ್ತಿವೆ..

Writer - ನೆಲ್ಲುಕುಂಟೆ ವೆಂಕಟೇಶ್

contributor

Editor - ನೆಲ್ಲುಕುಂಟೆ ವೆಂಕಟೇಶ್

contributor

Similar News