ಸಿಂಧೂ ನಾಗರಿಕತೆಯ ಗುಟ್ಟುಗಳನ್ನು ಬಯಲು ಮಾಡಿದ ತಳಿವಿಜ್ಞಾನ

Update: 2020-10-17 19:30 GMT

ಭಾಗ-3

ಡಾ. ವಸಂತ ಶಿಂಧೆ ಮತ್ತವರ ಸಂಗಡಿಗ ವಿಜ್ಞಾನಿಗಳು ರಾಖಿಗರಿಯಲ್ಲಿ ದೊರೆತ ಮೂಳೆಗಳಲ್ಲಿನ ಡಿಎನ್‌ಎಯನ್ನು ವಿಶ್ಲೇಷಣೆ ಮಾಡಿದಾಗ ಬೆಚ್ಚಿ ಬೀಳುವ ಸಂಗತಿಗಳು ಹೊರ ಬಿದ್ದವು. ಅದರ ಪ್ರಕಾರ 4,500 ವರ್ಷಗಳ ಹಿಂದೆ, ಸಿಂಧೂ ನಾಗರಿಕತೆ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಹೂತ ದೇಹಗಳ ಡಿಎನ್‌ಎ ಅದು. ಅದು ಅಂಡಮಾನಿನ ಬುಡಕಟ್ಟು ಜನರಿಗೆ ಮತ್ತು ನೀಲಗಿರಿ ಬೆಟ್ಟದ ಬುಡಕಟ್ಟು ಜನರ ಡಿಎನ್‌ಎಗೆ ತಾಳೆಯಾಗುತ್ತದೆ. ಎಲ್ಲಿಯ ಸಿಂಧೂ ನಾಗರಿಕತೆ, ಎಲ್ಲಿ ನೀಲಗಿರಿ ಜನರು. ಗತಿಸಿದ ಕಾಲದ ಗರ್ಭದಲ್ಲಿ ಯಾವ ಯಾವ ಗುಟ್ಟುಗಳು ಹುದುಗಿ ಕೂತಿಮೋ ಯಾರಿಗೆ ಗೊತ್ತು? ಕಾಲ ಉರುಳಿದಂತೆಲ್ಲ ಒಂದೊಂದಾಗಿ ಅನಾವರಣಗೊಳ್ಳುತ್ತಿವೆ. ಬಹುಪಾಲು ಗುಟ್ಟುಗಳು ಅಲ್ಲಿಯೇ ಹುದುಗಿ ಕೂತಿವೆ.


ಸಿಂಧೂ ಕಣಿವೆ ನಾಗರಿಕತೆ ಬಗ್ಗೆ ಇದುವರೆಗೆ ನಾವು ಕಲಿತ ಕ್ರಮಗಳೇನು? ಅದರ ವಾರಸುದಾರರು ಯಾರು? ಯಾವಾಗ ಕಟ್ಟಿದರು? ಯಾಕೆ ಕಟ್ಟಿದರು? ಅವರ ಕೆಲಸವೇನಾಗಿತ್ತು? ಅವರು ಹೇಗೆ ಬದುಕಿದ್ದರು? ಅದು ಯಾಕೆ ಅವನತಿ ಹೊಂದಿತು? ಯಾರು ನಾಶ ಮಾಡಿದರು? ಎಂಬ ಪ್ರಶ್ನೆಗಳಿಗೆ ಇತಿಹಾಸಶಾಸ್ತ್ರಜ್ಞರು, ಪುರಾತತ್ವ ಶಾಸ್ತ್ರಜ್ಞರು ಹಲವಾರು ಕೋನಗಳಲ್ಲಿ ವಿವರಿಸುವ ಕೆಲಸ ಮಾಡಿದ್ದರು. ಆದರೂ ಅದು ತನ್ನ ಗರ್ಭದೊಳಗಿಂದ ಗುಟ್ಟುಗಳನ್ನು ಹುಟ್ಟಿಸುತ್ತಲೇ ಇದೆ. ಹಾಗಾಗಿ ಅದೊಂದು ಮುಗಿಯದ ಕತೆಯಾಗಿ ವಿದ್ವಾಂಸರನ್ನು ಕಾಡುತ್ತಲೇ ಇದೆ. ಈಗ ಅದರ ಮೇಲೆ ಯಾರ್ಯಾರೋ ಯಜಮಾನಿಕೆಯನ್ನು ಕ್ಲೇಮು ಮಾಡುತ್ತಿದ್ದಾರೆ. ಸುಳ್ಳುಗಳ ಬಟ್ಟೆಯನ್ನು ಸತ್ಯದ ದೇಹಕ್ಕೆ ಬಹಳ ಹೊತ್ತು ಮುಚ್ಚಿಡಲಾಗದು. ಹಾಗೆ ಮುಚ್ಚಲು ಹೋದವರು ಅಪಹಾಸ್ಯಕ್ಕೆ ಗುರಿಯಾಗುತ್ತಾರೆ.

   ಸುಮಾರು ಆರು ಸಾವಿರ ವರ್ಷಗಳ ಹಿಂದೆ ಸಿಂಧೂ ಕಣಿವೆ ನಾಗರಿಕತೆ ಪ್ರಾರಂಭವಾಯಿತು ಎಂಬ ವಿಷಯದಲ್ಲಿ ಬಹುಪಾಲು ಜನರಿಗೆ ತಕರಾರುಗಳಿಲ್ಲ. ಇದ್ದರೆ ಅದಕ್ಕೂ ತುಸು ಹಿಂದೆ ಎಂದು ಹೇಳಬಹುದಷ್ಟೆ. 1920 ಮತ್ತು 30ರ ಆಸುಪಾಸಿನಲ್ಲಿ ಯುರೋಪಿನ ಮತ್ತು ಭಾರತೀಯ ಪುರಾತತ್ವ ಪಂಡಿತರು ಹಾಗೂ ಇತಿಹಾಸ ತಜ್ಞರು ನಡೆಸಿದ ಉತ್ಖನನಗಳನ್ನು ಆಧರಿಸಿ ಈ ನಾಗರಿಕತೆಯ ಕುರಿತಂತೆ ಪ್ರಮೇಯಗಳು ಹುಟ್ಟಿಕೊಂಡಿವೆ. ಮೊದಲ ಘಟ್ಟದ ಉತ್ಖನನದಲ್ಲಿ ಕೋಟೆ ಗೋಡೆಗಳ ನಿವೇಶನಗಳು ದೊರೆತಿರಲಿಲ್ಲ. ಹರಪ್ಪಮತ್ತು ಮೊಹೆಂಜೊದಾರೊಗಳಲ್ಲಿ ನಡೆದ ಉತ್ಖನನಗಳಲ್ಲಿ ಕೋಟೆ ರೀತಿಯ ಗೋಡೆಗಳಿರುವುದು ಕಂಡು ಬಂದಿದೆ. ನಾಗರಿಕತೆ ಏರು ಮುಖದಲ್ಲಿದ್ದ ದಿನಗಳಲ್ಲಿ ಗೋಡೆಗಳನ್ನು ಅವರು ಕಟ್ಟಿದ್ದಾರೆ. ಕೋಟೆಗಳನ್ನು ಯಾಕೆ ಕಟ್ಟುತ್ತಾರೆ? ಅವರಿಗೆ ಯಾರ ಭಯವಿತ್ತು? ಎಂಬುದಕ್ಕೆ ಡೇವಿಡ್ ರೈಖ್ ಋಗ್ವೇದದ ಉದಾಹರಣೆ ಮೂಲಕ ವಿವರಿಸುತ್ತಾರೆ. ಋಗ್ವೇದದಲ್ಲಿ ಇಂದ್ರನಿಗೆ ಪುರಾಂತಕ, ಪುರದಹನ ಎಂಬ ಬಿರುದುಗಳಿವೆ. ಹಾಗಿದ್ದರೆ ಯಾವ ಕೋಟೆಗಳನ್ನು ಆತ ನಾಶ ಮಾಡಿದ? ಆರ್ಯರಿಗಾಗಿ ನೀರು ಮತ್ತು ನೆಲ ಗಳಿಸಿಕೊಳ್ಳಲು ದಾಸರು, ಅಶುದ್ಧರೂ ಆದ ಶತ್ರುಗಳನ್ನು ನಾಶ ಮಾಡಿದ ಎಂದು ಸ್ತುತಿಸಲಾಗಿದೆ. ಹಾಗಿದ್ದರೆ ದಾಸರೆಂದರೆ ಯಾರು? ಅವರನ್ನು ಯಾಕೆ ಅಶುದ್ಧರೆಂದು ಕರೆದರು? ಎಂಬ ಪ್ರಶ್ನೆಗಳು ಎದ್ದು ಕೂತು ಕಂಗಾಲು ಮಾಡುತ್ತಿವೆ.

ರೈಖ್ ಪ್ರಕಾರ ಇಂದ್ರ ನಾಶ ಮಾಡಿದ ಕೋಟೆ ಗೋಡೆಗಳು ಹರಪ್ಪಾ ಮತ್ತು ಮೊಹೆಂಜೊದಾರೊ ನಗರಗಳಲ್ಲಿ ಕಟ್ಟಿದ್ದ ಗೋಡೆಗಳೇ. ಅತ್ಯಂತ ವಿಶಾಲ ಪ್ರದೇಶದಲ್ಲಿದ್ದ ನಾಗರಿಕತೆಯಿಂದಾಗಿ ಬಹುಶಃ ಹುಲ್ಲುಗಾವಲಿಗೆ, ಕೃಷಿಗೆ ಸಮಸ್ಯೆಯಾಗಿರಬಹುದು. ಹಾಗಾಗಿ ನಾಗರಿಕತೆಯನ್ನು ನಾಶ ಮಾಡಿರಬೇಕು. ಸ್ಟೆಪ್ಪಿಪ್ರದೇಶದಿಂದ ಸಿಂಧೂ ಕಣಿವೆಯ ನಡುವೆ ಯಾವ ನಾಗರಿಕತೆಗಳೂ ಇರಲಿಲ್ಲ. ಯಾವ ನಗರಗಳೂ ಇರಲಿಲ್ಲ. ಡಿಎನ್‌ಎ ಅಧ್ಯಯನಗಳೂ ಸಹ ಇದನ್ನು ಸಮರ್ಥಿಸುತ್ತಿವೆ. ಅಂದರೆ ಮೊದಲನೆಯದಾಗಿ ಸ್ಟೆಪ್ಪಿಯಿಂದ ಬಂದ ಆರ್ಯರ ಗುಂಪು ನೆಲಸು ನಾಡಿನ ನಾಗರಿಕತೆಯನ್ನು ಧ್ವಂಸ ಮಾಡಿದೆ ಮತ್ತು ಅಂತಹ ನಾಗರಿಕತೆಯನ್ನು ಆರ್ಯರ ಗುಂಪು ಹಿಂದೆಂದೂ ನಿರ್ಮಿಸಿರಲಿಲ್ಲ ಎಂದಾಯಿತು.

ಇಡೀ ಸಿಂಧೂ ಕಣಿವೆಯಲ್ಲಿ ಕುದುರೆಗಳ ಅವಶೇಷಗಳಿಲ್ಲ. ಆದರೆ ನಾಗರಿಕತೆ ಅವಸಾನವಾಗುವ ಹೊತ್ತಿಗೆ ಗುಜರಾತಿನ ಸುರ್ಕೊತದದಲ್ಲಿ ಕೆಲವು ಸುಳಿವುಗಳು ಸಿಕ್ಕಿವೆ. ಈ ಸುರ್ಕೊತದ ಕೂಡ ಹರಪ್ಪ ನಾಗರಿಕತೆಗೆ ಸೇರಿದ ನಿವೇಶನವೇ. ಸಂದೂರ್ ಬೊಕೊನ್ಯಿ ಎಂಬ ಪುರಾತತ್ವಶಾಸ್ತ್ರಜ್ಞ ಇಲ್ಲಿ ಸಿಕ್ಕ ಕುದುರೆಯ ಅವಶೇಷಗಳನ್ನು ಪರಿಶೀಲಿಸಿ ಇದು ಕಾಡು ಕುದುರೆಯಲ್ಲ, ಸಾಕಿದ ಕುದುರೆ ಎನ್ನುತ್ತಾರೆ. ಕ್ರಿ.ಪೂ. 1700ರ ಆಸುಪಾಸಿಗೆ ಸೇರಿದ ಈ ಕುದುರೆಯ ಗೊರಸು ಮತ್ತು ಹಲ್ಲುಗಳನ್ನು ಆಧರಿಸಿ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ಸಿಂಧೂ ನಾಗರಿಕತೆಯಲ್ಲಿ ಕುದುರೆ ಎಂಬ ಪ್ರಾಣಿ ಇಲ್ಲ ಎಂದಾಯಿತು. ಕುದುರೆ ಋಗ್ವೇದದಲ್ಲಿ ಅತ್ಯಂತ ಮುಖ್ಯ ಪಾತ್ರವಹಿಸುತ್ತದೆ. ಕುದುರೆಯ ಕಲ್ಪನೆಯಿಲ್ಲದೆ ಋಗ್ವೇದ ಇಲ್ಲ. ಸಿಂಧೂ ನಾಗರಿಕತೆಯಲ್ಲಿ ಕಲ್ಪನೆಯ ಯೂನಿಕಾರ್ನ್‌ಗಳು, ಗೂಳಿ, ಎಮ್ಮೆ, ನವಿಲು, ಆನೆ, ಹುಲಿ ಮತ್ತು ಘೇಂಡಾಮೃಗಗಳು ತುಂಬಿ ಹೋಗಿವೆ. ಎಮ್ಮೆಯಿಲ್ಲದೆ ಸಿಂಧೂ ನಾಗರಿಕತೆ ಪೂರ್ಣಗೊಳ್ಳದು ಎಂಬಷ್ಟು ಪ್ರಭಾವಶಾಲಿಯಾಗಿದೆ. ಆದರೆ ಋಗ್ವೇದದ ಐದು ಋಕ್ಕುಗಳಲ್ಲಿ ಕುದುರೆಯನ್ನು, ಗೂಳಿ, ಮೇಕೆ ಮತ್ತು ಪಕ್ಷಿಗಳ ಕುರಿತು ತಲಾ ಒಂದೊಂದು ಋಕ್ಕುಗಳಿವೆ. ಎಂ. ಕೆ. ಧವಳೀಕರ್ ಎಂಬ ಪುರಾತತ್ವ ಶಾಸ್ತ್ರಜ್ಞರ ಪ್ರಕಾರ ಋಗ್ವೇದವು ಕ್ರಿ ಪೂ 2000ರಿಂದ 1400ರ ಆಸುಪಾಸಿನಲ್ಲಿ ರಚನೆಯಾಗಿದೆ. ಅದರಲ್ಲಿ ಕಬ್ಬಿಣದ ಪ್ರಸ್ತಾಪವೂ ಋಗ್ವೇದದಲ್ಲಿಲ್ಲ. ಕರ್ಸಣ ಆಯ ಎಂಬ ಕಪ್ಪುತಾಮ್ರದ ಕುರಿತು ಪ್ರಸ್ತಾಪವಿದೆ. ಉತ್ತರದ ಬಯಲುಗಳಲ್ಲಿ ಕ್ರಿ. ಪೂ. 1400ರ ಆಸುಪಾಸಿಗೆ ಕಬ್ಬಿಣದ ಅನ್ವೇಷಣೆಯಾಗಿತ್ತು.

ಋಗ್ವೇದದಲ್ಲಿ ಮರದಿಂದ ಮಾಡಿದ ಪಟ್ಟಿ ಚಕ್ರದ ರಥಗಳು ಕಂಡರೆ ಸಿಂಧೂ ನಾಗರಿಕತೆಯಲ್ಲಿ ಜೇಡಿ ಮಣ್ಣಿನ ಚಕ್ರಗಳ ಬಂಡಿಗಳು ಕಾಣಿಸುತ್ತವೆ. ರಥಗಳನ್ನು ಗೂಳಿಗಳಿಗೆ ಕಟ್ಟಿ ಎಳೆಸುತ್ತಿದ್ದ ಹಾಗೆ ಕಾಣಿಸುತ್ತದೆ. ಋಗ್ವೇದದ ದೇವರುಗಳು ಕೂಡ ಕುದುರೆ ಪ್ರಿಯರೆ. ಅಶ್ವಿನಿ ದೇವತೆಗಳು ಅಶ್ವಾರೂಢರು. ಉಷಸ್ ಮತ್ತು ಅಗ್ನಿ ಕುದುರೆ ಹೂಡಿದ ರಥಾರೂಢರು.

ಬಲೂಚಿಸ್ತಾನದ ಮೆಹರಘರ್‌ನಲ್ಲೂ ಕ್ರಿ.ಪೂ. 1900ರ ಆಸುಪಾಸಿನಲ್ಲೇ ಕುದುರೆ ಅವಶೇಷಗಳು ದೊರೆತಿವೆ. ಇರಾನಿನ ಜೊತೆ ಸಂಪರ್ಕ ಹೊಂದಿದ್ದ ರೈತರು ನೆಲೆಸಿದ್ದ ಜಾಗ ಅದು. ಆದರೆ ಸ್ಟೆಪ್ ಪ್ರದೇಶ ಮಾತ್ರ ಕುದುರೆಗಳಿಂದ ತುಂಬಿ ಹೋಗಿದೆ. ಮಂಗೋಲಿಯ ಕುದುರೆಗಳ ತವರು ಮನೆಯೆಂಬಂತೆ ಲೋಕ ಪ್ರಸಿದ್ಧ.

ಋಗ್ವೇದದಲ್ಲಿ ಯೋಗದ ಕುರಿತು ಪ್ರಸ್ತಾಪಗಳಿಲ್ಲ. ಕ್ರಿ.ಪೂ. 500ರಿಂದ 100ರ ಮಧ್ಯೆ ರಚನೆಯಾಗಿರಬಹುದಾದ ಉಪನಿಷತ್ತುಗಳಲ್ಲಿ ಪ್ರಸ್ತಾಪವಿದೆ. ಕಠೋಪನಿಷತ್ತಿನಲ್ಲಿ ಸ್ಪಷ್ಟವಾಗಿ ಯೋಗದ ಕುರಿತು ಪ್ರಸ್ತಾಪಿಸಲಾಗಿದೆ. ಆದರೆ ಹರಪ್ಪಾದಲ್ಲಿ ಎಮ್ಮೆ ಕೊಂಬು ಧರಿಸಿ ಪ್ರಾಣಿಗಳಿಂದ ಸುತ್ತುವರಿದು ಯೋಗದ ಭಂಗಿಯಲ್ಲಿ ಕೂತ ವ್ಯಕ್ತಿಯ ಚಿತ್ರಗಳುಳ್ಳ ಸೀಲುಗಳು ವ್ಯಾಪಕವಾಗಿ ದೊರೆಯುತ್ತವೆ. ಈತನನ್ನು ಮುಂದೆ ಶಿವನನ್ನಾಗಿ ಕಲ್ಪಿಸಿಕೊಳ್ಳಲಾಗಿದೆ. ಎಮ್ಮೆ ಕೊಂಬು ಧರಿಸಿದ ವ್ಯಕ್ತಿಗಳು ಪುರಾಣಗಳಲ್ಲಿ ಅಸುರರಾಗಿ ವರ್ಣನೆಗೊಂಡಿದ್ದು ಬಹಳ ದೊಡ್ಡ ರಾಜಕೀಯ.

ಸಿಂಧೂ ಕೊಳ್ಳದಲ್ಲಿ ಮೂರ್ತಿ ಪೂಜೆಯ ಪದ್ಧತಿ ಇದ್ದಂತಿದೆ. ಗುಜರಾತಿನ ಧೋಲವೀರದಲ್ಲಿ ದೊರೆತ ಶಿಶ್ನ ದೇವತೆಯ ಕುರಿತ ದಾಖಲೆ ಇದಕ್ಕೆ ಸ್ಪಷ್ಟ ನಿದರ್ಶನ. ಇದು ಹರಪ್ಪನ್ನರು ಶಿಶ್ನ ದೇವತೆಯನ್ನು ಪೂಜಿಸುವ ಸಂಸ್ಕೃತಿಗೆ ಸೇರಿದವರು ಎಂಬುದನ್ನು ಸಾರಿ ಹೇಳುತ್ತದೆ. ಆರ್. ಎಸ್. ಬಿಷ್ತ್ ಎಂಬ ಪುರಾತತ್ವ ಶಾಸ್ತ್ರಜ್ಞ ಈ ನಿವೇಶನವನ್ನು ಉತ್ಖನನ ಮಾಡಿದ್ದಾರೆ. ಆದರೆ ಋಗ್ವೇದವು ಶಿಶ್ನ ದೇವರನ್ನು ಆರಾಧಿಸುವ ಜನರನ್ನು ಹೇಗೆ ಕೊಂದು ಹಾಕಿದ್ದು ಎಂದು ವರ್ಣಿಸುತ್ತದೆ. ಶಿಶ್ನ ದೇವರ ಪೂಜೆ ಪವಿತ್ರವಲ್ಲ, ಕೊಳಕುತನದ್ದು ಎಂದು ಋಗ್ವೇದ ವಿವರಿಸುತ್ತದೆ. ಕಾಮುಕ ರಾಕ್ಷಸರು ಮಾತ್ರ ಇಂಥ ಆಚರಣೆಗಳನ್ನು ಮಾಡಲು ಸಾಧ್ಯ ಎಂಬ ಅರ್ಥದ ವರ್ಣನೆಗಳಿವೆ. ಧೋಲವೀರ ನಿವೇಶನದಲ್ಲಿ ಸಿಕ್ಕ ವಿಗ್ರಹಗಳನ್ನು ಕತ್ತರಿಸಿ ಛಿದ್ರ ಮಾಡಿರುವ ರೂಪದಲ್ಲಿ ಲಭಿಸಿವೆ. ಮಾತೃದೇವತೆಗಳ ಆರಾಧನೆಯೂ ಈ ಸಂಸ್ಕೃತಿಯಲ್ಲಿ ವ್ಯಾಪಕವಾಗಿದೆ. ಸಿಂಧೂ ನಿವೇಶನದಲ್ಲಿ ದೊರೆತ ದಾಖಲೆಗಳ ಪ್ರಕಾರ ಎಮ್ಮೆ ಕೊಂಬು ಧರಿಸಿದ ಪುರುಷ ದೇವರು, ಮಾತೃದೇವತೆಗಳು, ಅರಳಿಮರ, ಸರ್ಪ, ಶಿಶ್ನ ದೇವರುಗಳು ಮುಂತಾದವು ಹರಪ್ಪಸಂಸ್ಕೃತಿಯನ್ನು ದ್ರಾವಿಡ ಸಂಸ್ಕೃತಿಗೆ ಹತ್ತಿರ ತರುತ್ತವೆ.

 ಬಹಳ ಬೇಗ ಇಂದ್ರ ಸಂಸ್ಕೃತಿ ಉತ್ತರದ ಬಯಲನ್ನು ವ್ಯಾಪಿಸಿ ಕೊಂಡಿತು. ವಿದರ್ಭ ಪ್ರಾಂತದ, ಕುಂತಳ ನಾಡಿನ ಮಕ್ಕಳಿಲ್ಲದ ಕುಂತಿ ಇಂದ್ರ, ವಾಯು, ಯಮ, ಅಶ್ವಿನಿ ದೇವತೆಗಳಿಂದ ಮಕ್ಕಳು ಪಡೆಯುವ ಕ್ರಿಯೆ ಕೇವಲ ಕಾಕತಾಳೀಯವಿರಲಾರದು. ಡಿಎನ್‌ಎ ವಿಶ್ಲೇಷಣೆ ಮಾಡಿದರೆ ಬಹುಶಃ ದಕ್ಷಿಣ ಭಾರತದ ಪೂರ್ವಿಕರ ಅಂಶವುಳ್ಳ ಕುಂತಿ ಆರ್ಯ ದೇವತೆಗಳ ವರದಿಂದ ಮಕ್ಕಳು ಪಡೆವ ರೂಪಕದಲ್ಲಿ ಇಡೀ ಉಪಖಂಡದ ಡಿಎನ್‌ಎಯ ಸತ್ಯ ಅಡಗಿದೆ. ಪುರಾಣದ ಯುವಕ ಕೃಷ್ಣ ಗುಜರಾತಿನ ನೆಲದಲ್ಲಿ ಗೋವರ್ಧನ ಗಿರಿ ಎತ್ತಿ ಹಿಡಿದು ಇಂದ್ರನೆಂಬ ಸಂಕೇತಗಳ ದೇವರನ್ನು ಸೋಲಿಸು ವುದೂ ಕೂಡ ಕೇವಲ ಕಾಕತಾಳೀಯವಿರಲಾರದು. ವಾಸನೆ ನೋಡುವ ದೇವರಿಗಿಂತ ಮುಟ್ಟಿ ನೋಡುವ, ತಿನ್ನುವ ದೇವರೇ ದೊಡ್ಡವನು ಎಂಬುದರಲ್ಲಿ ಆರ್ಯೇತರ ಸಂಸ್ಕೃತಿಯ ನೈಜತೆ ಅಡಗಿದೆ. ಆದರೆ ಇದೇ ಕೃಷ್ಣ ಮತ್ತು ಅರ್ಜುನರು ಅಗ್ನಿಯ ಹಸಿವು ನೀಗಿಸಲು ಖಾಂಡವವನಕ್ಕೆ ಬೆಂಕಿ ಹಚ್ಚುತ್ತಾರೆ. ಮಹಾಭಾರತದ ಪ್ರಕಾರ ನಾಗಾಗಳು ವಾಸಿಸುತ್ತಿದ್ದ ಜಾಗ ಅದು. ಕೃಷ್ಣಾರ್ಜುನರನ್ನು ಬೇಡಿಕೊಂಡು ಬದುಕಿ ಬಂದ ನಾಲ್ವರಲ್ಲಿ ಮಯನೂ ಒಬ್ಬ.

ಮಯ ಅದ್ಭುತ ವಾಸ್ತುಶಿಲ್ಪಿ. ನಗರಗಳನ್ನು, ಅರಮನೆಗಳನ್ನು, ಅದ್ಭುತ ಆಯುಧಗಳನ್ನು ನಿರ್ಮಿಸುವಾತ. ಭೀಮನಿಗೆ, ಪಾಂಡವರಿಗೆ ಆಯುಧಗಳನ್ನು ಮಾಡಿಕೊಡುತ್ತಾನೆ. ನೀರನ್ನು ನೆಲವೆಂದು ತಿಳಿದು ದುರ್ಯೋಧನ ಬಿದ್ದು ನಗೆಪಾಟಲಿಗೀಡಾದ ಅರಮನೆಯನ್ನು ನಿರ್ಮಿಸಿದವನು ಈತನೇ. ಇಂತಹ ಎಷ್ಟೊ ಮಯರು ಬೆಂಕಿಯಲ್ಲಿ ಸುಟ್ಟು ಹೋಗಿರಬೇಕು. ಮಯನ ಉದಾಹರಣೆ ಏನನ್ನು ತೋರಿಸುತ್ತಿದೆ? ನಾಗ ಸಂಸ್ಕೃತಿಯು ದೊಡ್ಡ ನಗರಗಳನ್ನು ನಿರ್ಮಿಸಿತ್ತು ಎಂದೇ? ಒಂದು ಮೂಲದ ಪ್ರಕಾರ ಶಂಬರರು ಬೃಹತ್ ಕೋಟೆಗಳನ್ನು ಕಟ್ಟುತ್ತಿದ್ದರು ಎನ್ನಲಾಗುತ್ತದೆ. ದುರ್ಯೋಧನನ ಮಾತು ಕೇಳಿ ಅರಗಿನ ಅರಮನೆ ಕಟ್ಟಿದ ಪುರೋಚನನೂ ಒಬ್ಬ ಪ್ರತಿಭಾವಂತ ವಾಸ್ತುಶಿಲ್ಪಿಯೇ. ಈತನನ್ನು ಅಸುರ ಕುಲದವನು ಎನ್ನಲಾಗುತ್ತದೆ. ಆತನನ್ನೂ ಸುಟ್ಟು ಕೊಲ್ಲಲಾಗುತ್ತದೆ. ಪ್ರತಿಭಾವಂತರನ್ನೆಲ್ಲ ಯಾಕೆ ಹೀಗೆ ಉರಿ ಹಾಕಿ ಕೊಲ್ಲಲಾಯಿತು? ಜ್ಞಾನ ದ್ವೇಷಿಯಾದ ಇವತ್ತಿನ ಸಂದರ್ಭದ ಸೃಷ್ಟಿಗೆ ಚರಿತ್ರೆ ಪುರಾಣಗಳು ಸ್ಫೂರ್ತಿಯಾಗುತ್ತಿವೆಯೇ?

ಸಿಂಧೂ ನಾಗರಿಕತೆಯ ಭಾಷೆ ಆದಿ ದ್ರಾವಿಡ ಹರಪ್ಪಾಸಂಸ್ಕೃತಿಯ ಭಾಷೆ ಯಾವುದಾಗಿತ್ತು? ಎಂಬ ಪ್ರಶ್ನೆ ಬಹಳ ಮುಖ್ಯವಾದುದು. ಅನೇಕ ಭಾಷಾಶಾಸ್ತ್ರಜ್ಞರ ಪ್ರಕಾರ ಸಿಂಧೂ ಕೊಳ್ಳದ ಭಾಷೆ ಆದಿ ದ್ರಾವಿಡ. ಸ್ಟೆಪ್ ಜನರ ದಾಳಿ ಮತ್ತು ಪ್ರಾಕೃತಿಕ ದಾಳಿಗಳಿಗೆ ತುತ್ತಾದ ಭಾಷೆಯೊಂದು ಹೇಗೆ ಚದುರಿ ಹೋಗಿದೆ ಎಂಬುದನ್ನು ದ್ರಾವಿಡ ಭಾಷೆಯ ನಕ್ಷೆ ನೋಡಿದರೆ ತಿಳಿಯುತ್ತದೆ. ಸಿಂಧೂ ಕೊಳ್ಳದ ಅನತಿ ದೂರದಲ್ಲಿರುವ ಇಂದಿನ ಪಾಕಿಸ್ತಾನದಲ್ಲಿ, ತುಸು ಮಟ್ಟಿಗೆ ಬಲೂಚಿಸ್ತಾನದಲ್ಲಿರುವ ಬ್ರಾಹುಯಿ, ಮಧ್ಯಭಾರತದ ಬುಡಕಟ್ಟು ಜನರಲ್ಲಿ ಅಲ್ಲಲ್ಲಿ ಹಂಚಿಹೋಗಿರುವ ಮಧ್ಯ ದ್ರಾವಿಡ, ಎಷ್ಟು ಸಾಧ್ಯವೋ ಅಷ್ಟು ದಕ್ಷಿಣಕ್ಕೆ ಒತ್ತಿ ಅದುಮಿ ಇಡಲಾಗಿರುವ ದಕ್ಷಿಣ ದ್ರಾವಿಡ ಭಾಷೆಯ ಇಂದಿನ ಸ್ಥಿತಿ ನೋಡಿದರೆ ಹುಲಿ, ಸಿಂಹ, ತೋಳ, ಕಾಡುನಾಯಿ ಮತ್ತು ಕತ್ತೆಕಿರುಬಗಳ ಭೀಕರ ದಾಳಿಗೆ ತುತ್ತಾದ ಕಾಡೆಮ್ಮೆಯ ಸ್ಥಿತಿಯಂತಾಗಿದೆ. ಕಾಲುಗಳೆಲ್ಲೊ, ತಲೆಯಿನ್ನೆಲ್ಲೊ.

ಸಿಂಧೂ ಕೊಳ್ಳದ ಮುದ್ರೆಗಳ ಮೇಲಿರುವ ಚಿತ್ರ ರೂಪದ ಅಕ್ಷರಗಳನ್ನು ಓದಲಾಗದ ಕಾರಣ ಈ ನಿಗೂಢವನ್ನು ಇನ್ನೂ ಬಿಡಿಸಲಾಗಿಲ್ಲ. ಆದರೆ ಡಾ. ಇರಾವತಮ್ ಮಹದೇವನ್ ಹರಪ್ಪಾದ ಚಿತ್ರಗಳನ್ನು ಆಧರಿಸಿ ಲಿಪಿಗೆ ಅರ್ಥ ಹುಡುಕುವ ಕೆಲಸ ಮಾಡಿದ್ದಾರೆ. ಅರು ಮೀನ್ ಮುಂತಾದ ಶಬ್ದಗಳೆಲ್ಲ ಹಾಗೆ ರೂಪುಗೊಂಡವು. ದ್ರಾವಿಡ ಭಾಷೆಯಲ್ಲಿ ಮೀನ್ ಎಂಬ ಪದ ನಕ್ಷತ್ರಕ್ಕೂ ಅನ್ವಯವಾಗುತ್ತದೆ. ಸಿಂಧೂ ಕೊಳ್ಳದಲ್ಲಿ ಆರು ಕೋನದ ಆಕಾಶ ಮುಖಿಯಾದ ಮೀನು ಖಗೋಳಶಾಸ್ತ್ರದ ಏನನ್ನೋ ಸೂಚಿಸುತ್ತಿದೆ ಎನ್ನುತ್ತಾರೆ. ಹಾಗೆಯೇ ಕಣಿವೆಯಲ್ಲಿ ಸಿಕ್ಕ ಚಿತ್ರ ರೂಪದ ಸಂಕೇತಗಳೆಲ್ಲ ದ್ರಾವಿಡ ಸಂಸ್ಕೃತಿಗೆ ತಾಳೆಯಾಗುತ್ತವೆಯೇ ಹೊರತು ಸ್ಟೆಪ್ ಸಂಸ್ಕೃತಿಯ ಜನರನ್ನಲ್ಲ. ಅವರಲ್ಲಿ ನಗರ ಸಂಸ್ಕೃತಿಯೇ ಇರಲಿಲ್ಲ. ಸ್ಟೆಪ್ ಸಂಸ್ಕೃತಿಯಲ್ಲಿ ಹುಲಿ ಇಲ್ಲ ಬದಲಾಗಿ ತೋಳಗಳಿವೆ. ಕುದುರೆ ಇದೆ ಎಮ್ಮೆಗಳಿಲ್ಲ. ಸಿಂಧೂ ಕೊಳ್ಳದಲ್ಲಿ ಹುಲಿ ಎಮ್ಮೆಗಳಿವೆ.

ಫ್ರಾಂಕ್ಲಿನ್ ಸಿ. ಸೌತ್ ವರ್ಥ್ ಎಂಬ ಭಾಷಾಶಾಸ್ತ್ರಜ್ಞ ತನ್ನ ಅತ್ಯಂತ ಮುಖ್ಯ ಸಂಶೋಧನಾ ಕೃತಿಯಾದ ‘ಲಿಂಗ್ವಿಸ್ಟಿಕ್ ಆರ್ಕಿಯಾಲಜಿ ಆಫ್ ಸೌತ್ ಏಷಿಯಾ’ ಕೃತಿಯಲ್ಲಿ ವಲಿ, ಒಲಿ (ಹಳ್ಳಿ ಎಂದು ತೋರಿಸುವ, ಗಾಂವ್/ ಗ್ರಾಮ ಅಲ್ಲದ) ಹೆಸರಿನ ಅಸಂಖ್ಯಾತ ಊರುಗಳು ಸಿಂಧೂ ಕೊಳ್ಳದ ಗುಜರಾತ್, ಸಿಂಧ್, ಪೂರ್ವ-ಪಶ್ಚಿಮ ಪಂಜಾಬ್, ಹರ್ಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ, ಒಡಿಶಾ, ಬಂಗಾಳ ಮುಂತಾದ ಕಡೆಗಳಲ್ಲಿ ಇರುವುದನ್ನು ಗುರುತಿಸುತ್ತಾರೆ. ಶಂಬಾ ಜೋಷಿಯವರು ಯಮುನೆಯಿಂದ ಚಿತ್ರದುರ್ಗದವರೆಗೆ ಹಟ್ಟಿಕಾರರು, ದನಗರರು, ಹಳೆ ಪೈಕದವರು ನೆಲೆಸಿರುವ, ವಲಸೆ ಹೋಗುವ ನಕಾಶೆಯನ್ನು ಗುರುತಿಸುತ್ತಾರೆ. ಎಡೆಗಳು ಹೇಳುವ ಕಂನಾಡ ಕತೆ ಮರಾಠಿಯನ್ನು ಮಾತ್ರ ಎದುರಾಗಿಸಿಕೊಂಡು ಬರೆದಿದ್ದಲ್ಲ ಎನ್ನಿಸುತ್ತದೆ. ಚಿತ್ರದುರ್ಗದಿಂದ ಸಿಂಧೂ ಕೊಳ್ಳದವರೆಗೆ ರಾಶಿ ಬಿದ್ದಿರುವ ಬೂದಿ ಗುಡ್ಡೆಗಳು ಕನಿಷ್ಠ 4,500 ವರ್ಷಗಳ ಹಿಂದಿನ ಕತೆಯನ್ನು ಹೇಳುತ್ತವೆ.

ರೈಖ್ ಕೂಡ ವಿವಿಧ ಭಾಷಾಶಾಸ್ತ್ರಜ್ಞರ ನೆರವು ಪಡೆದು ತನ್ನ ಪ್ರಮೇಯವನ್ನು ಮಂಡಿಸಿದ್ದಾನೆ. ಜಾನ್ ಪುವೆಲ್‌ನ ‘ಕಂಪ್ಯಾರೇಟಿವ್ ಮೈಥಾಲಜಿ’ ಕೃತಿಯ ನೆರವನ್ನು ರೈಖ್ ಪಡೆದಿದ್ದಾನೆ. ಸುಮಾರು 3,800 ವರ್ಷಗಳ ಹಿಂದೆ ಸಿಂಧೂ ಕಣಿವೆ ನಾಗರಿಕತೆಯ ಅವಸಾನ ಪ್ರಾರಂಭವಾಗಿದೆ. ಅಲ್ಲಿನ ಜನರು ನಿಧಾನಕ್ಕೆ ದಕ್ಷಿಣಕ್ಕೆ ಮತ್ತು ಪೂರ್ವಕ್ಕೆ ಚಲಿಸತೊಡಗಿದ್ದಾರೆ. ಇಂತಹ ಹೊತ್ತಿನಲ್ಲಿ ಹಳೆಯ ಸಂಸ್ಕೃತದ ನೆರವಿನಿಂದ ಋಗ್ವೇದದ ರಚನೆ ಆರಂಭವಾಗಿದೆ. ಪುವೆಲ್ ಇಂಡೊ ಇರಾನಿಯನ್ ಭಾಷೆಗಳೆರಡೂ ನಿಸ್ಸಂದೇಹವಾಗಿ ಸೋದರ ಭಾಷೆಗಳು ಎನ್ನುತ್ತಾನೆ. ಇಂಡೊ-ಇರಾನಿಯನ್-ಯುರೋಪಿಯನ್ ಭಾಷಾ ಗುಂಪು ಜಗತ್ತಿನ ಅತಿದೊಡ್ಡ ಭಾಷಾಗುಂಪು. ಒಂದಕ್ಕೊಂದಕ್ಕೆ ಆಳವಾದ ನಿಕಟತೆ ಇದೆ.

ಭಾಷಾ ದೃಷ್ಟಿಯಿಂದ ಅಷ್ಟೆ ಅಲ್ಲ, ನಂಬಿಕೆ ಆಚರಣೆಗಳ ದೃಷ್ಟಿಯಿಂದಲೂ ಹೌದು. ಸಮಾಜವನ್ನು ನಿಗ್ರಹಿಸುವ ನಿಯಮಗಳು, ನಿಸರ್ಗ ದೇವತೆಗಳು, ಪ್ರಾಗ್ ಧಾರ್ಮಿಕ ನಂಬಿಕೆಗಳು, ಪುರಾಣಗಳು ಇಂಡೊ-ಯುರೇಷಿಯಾ, ಇರಾನ್, ಗ್ರೀಕ್, ಸ್ಕ್ಯಾಂಡಿನೇವಿಯ ಮುಂತಾದ ಭಾಗಗಳಲ್ಲಿ ಎದ್ದು ಕಾಣುವ ಸಾಮ್ಯತೆಗಳಿವೆ ಎನ್ನುತ್ತಾನೆ. ಇದರ ಜೊತೆಗೆ ಯಾಕೋ ಏನೋ ಕನ್ನಡದಲ್ಲಿ ಹೆಚ್ಚು ಸದ್ದು ಮಾಡದೆ ಹೋದ ಡೇವಿಡ್ ಮೆಕಾಲ್ಪಿನ್‌ನ ‘ಪ್ರೊಟೊ-ಎಲಾಮೊ- ದ್ರಾವಿಡಿಯನ್: ದ ಎವಿಡೆನ್ಸ್ ಆ್ಯಂಡ್ ಇಟ್ಸ್ ಇಂಪ್ಲಿಕೇಷನ್ಸ್’ ಕೃತಿ ನಮ್ಮನ್ನು ಹೊಸ ಜಗತ್ತಿಗೆ ಆಕರ್ಷಿಸುತ್ತದೆ. ಇರಾನಿನ ಝಾಗ್ರೋಸ್ ಬೆಟ್ಟ ತಪ್ಪಲುಗಳಲ್ಲಿ ವಾಸಿಸುತ್ತಿದ್ದ ಜನರು ಮಾತನಾಡುತ್ತಿದ್ದ ಎಲಾಮೊ ಭಾಷೆ ಮತ್ತು ಆದಿದ್ರಾವಿಡ ಭಾಷೆಗಳೆರಡೂ ಸಹ ಒಂದೇ ಮೂಲದಿಂದ ಹೊರಟವು. ಕುರಿ ಮೇಕೆಗಳನ್ನು ಪಳಗಿಸಿ ಪಶುಪಾಲನೆ ಆರಂಭಿಸಿದ ದಿನಗಳಿಂದ ಕೃಷಿ ಕೆಲಸ ನಡೆಸುವವರೆಗೆ ಇವು ಜೊತೆಯಾಗಿಯೇ ಇದ್ದವೆಂದು ಮೆಕಾಲ್ಪಿನ್ ಉದಾಹರಣೆಗಳ ಮೂಲಕ ಪ್ರತಿಪಾದಿಸುತ್ತಾನೆ. ಆತನ ಸಂಶೋಧನೆಯ ಪ್ರಕಾರ ಭಾಷಾ ಸಾಮ್ಯತೆಯ ಇಲ್ಲಿ ಕೊಟ್ಟಿರುವ ಪಟ್ಟಿ ನೋಡಿ.
ಮೆಕಾಲ್ಪಿನ್ ಎಲಾಮೈಟ್ ಭಾಷೆಯಲ್ಲಿ ಸುಮಾರು 250 ಪದಗಳನ್ನು ಮೂಲ ಪದಗಳು ಎಂದು ಗುರುತಿಸಿದ್ದಾನೆ. ಅದರಲ್ಲಿ ಸುಮಾರು ನೂರು ಪದಗಳು ದ್ರಾವಿಡ ಗುಂಪಿನ ಭಾಷೆಯ ಜೊತೆ ನೇರವಾಗಿ ಹೊಂದಾಣಿಕೆಯಾಗುತ್ತವೆ.

ಇದು ಸಾಮಾನ್ಯವಾದ ಸಂಗತಿಯಲ್ಲ. ಎಲಾಮೈಟ್ ಭಾಷೆಯ ದಾಖಲೆಗಳು ಕ್ರಿ.ಪೂ.450ರ ಆಸುಪಾಸಿನಲ್ಲಿ ದೊರೆಯುತ್ತಿವೆ. ಆ ನಂತರ ಅದು ತೆಳುವಾಗುತ್ತಾ ಹೋಗಿದೆ ಎನ್ನುತ್ತಾನೆ. ಮೆಕಾಲ್ಪಿನ್ ಪ್ರಕಾರ ಆದಿ ಝಾಗ್ರೋಸಿಯನ್ ಭಾಷೆ ಮತ್ತು ಆದಿ ದ್ರಾವಿಡ ಭಾಷೆ ಸುಮಾರು 8ರಿಂದ 9 ಸಾವಿರ ವರ್ಷಗಳ ಹಿಂದೆ ಬೇರ್ಪಟ್ಟು ತನ್ನದೇ ದಾರಿ ಹಿಡಿದು ಬೆಳವಣಿಗೆಯಾದವು. ಎಲಾಮೈಟ್ ಭಾಷೆ ಅಸ್ತಿತ್ವ ಕಳೆದುಕೊಂಡಿತು. ಆದರೆ ದ್ರಾವಿಡ ಭಾಷೆಯನ್ನು ಇಂದು ಸುಮಾರು 300 ಮಿಲಿಯನ್ ಜನ ವಿಶ್ವದ ಬೇರೆ ಬೇರೆ ಕಡೆ ಮಾತನಾಡುತ್ತಾರೆ. ಇಂಡೋ-ಯುರೋಪಿಯನ್ ಭಾಷೆಯನ್ನು ಜಗತ್ತಿನ ಶೇ.40ರಷ್ಟು ಜನ ಬಳಸುತ್ತಿದ್ದಾರೆ. ಇಂಡೋ-ಯುರೋಪಿಯನ್ ಭಾಷೆಗಳ ವಿಸ್ತರಣಾವಾದಿ ನಿಲುವು ಉಳಿದ ಭಾಷೆಗಳ ಅಸ್ತಿತ್ವಕ್ಕೆ ನಿರಂತರವಾಗಿ ಅಪಾಯವನ್ನು ತಂದೊಡ್ಡುತ್ತಲೇ ಇದೆ.

ಸೌತ್ ವರ್ಥ್ ಎಳ್ಳು ಎಂಬ ಪದ ಮೆಸಪೊಟೋಮಿಯಾದಿಂದ ದ್ರಾವಿಡ ಭಾಷೆಗಳವರೆಗೆ ಸಾಮಾನ್ಯ ಬಳಕೆಯಲ್ಲಿರುವುದನ್ನು ವಿವರಿಸುತ್ತಾರೆ. ಅಕ್ಕಡಿಯನ್ ಎಳ್ಳು ಪದ ಮೆಸಪೊಟೋಮಿಯಾದಲ್ಲೂ ಬಳಕೆಯಲ್ಲಿದೆ. ಎಲ್ಲಾ ಭಾಷಾ ಶಾಸ್ತ್ರಜ್ಞರ ಪ್ರಕಾರ ಝಾಗ್ರೋಸ್, ಮೆಸಪೊಟೋಮಿಯಾ ಮತ್ತು ಇವತ್ತಿನ ದ್ರಾವಿಡರ ನಾಡಿನ ಮಧ್ಯೆ ಇರುವ ಸಿಂಧೂ ನಾಗರಿಕತೆಗೆ ಆದಿ ದ್ರಾವಿಡರೇ ವಾರಸುದಾರರು ಎನ್ನುವುದರಲ್ಲಿ ಈಗ ಯಾವ ಗೊಂದಲಗಳೂ ಉಳಿದಿಲ್ಲ.

ಸಿಂಧೂ ಕೊಳ್ಳದ ಪ್ರಮುಖ ನಿವೇಶನವಾದ ರಾಖಿಗರಿಯಲ್ಲಿ ದೊರೆತ ಅಸ್ಥಿಪಂಜರದ ಕುರಿತು ಲಕ್ಷ್ಮೀಪತಿ ಕೋಲಾರ ಅವರು ಕನ್ನಡದಲ್ಲಿ ಪುಸ್ತಕ ಬರೆದಿದ್ದಾರೆ. ಆಸಕ್ತರು ಅದನ್ನು ಓದಬಹುದು. ಡಾ. ವಸಂತ ಶಿಂಧೆ ಮತ್ತವರ ಸಂಗಡಿಗ ವಿಜ್ಞಾನಿಗಳು ರಾಖಿಗರಿಯಲ್ಲಿ ದೊರೆತ ಮೂಳೆಗಳಲ್ಲಿನ ಡಿಎನ್‌ಎಯನ್ನು ವಿಶ್ಲೇಷಣೆ ಮಾಡಿದಾಗ ಬೆಚ್ಚಿ ಬೀಳುವ ಸಂಗತಿಗಳು ಹೊರ ಬಿದ್ದವು. ಅದರ ಪ್ರಕಾರ 4,500 ವರ್ಷಗಳ ಹಿಂದೆ, ಸಿಂಧೂ ನಾಗರಿಕತೆ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಹೂತ ದೇಹಗಳ ಡಿಎನ್‌ಎ ಅದು. ಅದು ಅಂಡಮಾನಿನ ಬುಡಕಟ್ಟು ಜನರಿಗೆ ಮತ್ತು ನೀಲಗಿರಿ ಬೆಟ್ಟದ ಬುಡಕಟ್ಟು ಜನರ ಡಿಎನ್‌ಎಗೆ ತಾಳೆಯಾಗುತ್ತದೆ. ಎಲ್ಲಿಯ ಸಿಂಧೂ ನಾಗರಿಕತೆ, ಎಲ್ಲಿ ನೀಲಗಿರಿ ಜನರು. ಗತಿಸಿದ ಕಾಲದ ಗರ್ಭದಲ್ಲಿ ಯಾವ ಯಾವ ಗುಟ್ಟುಗಳು ಹುದುಗಿ ಕೂತಿಮೋ ಯಾರಿಗೆ ಗೊತ್ತು? ಕಾಲ ಉರುಳಿದಂತೆಲ್ಲ ಒಂದೊಂದಾಗಿ ಅನಾವರಣಗೊಳ್ಳುತ್ತಿವೆ. ಬಹುಪಾಲು ಗುಟ್ಟುಗಳು ಅಲ್ಲಿಯೇ ಹುದುಗಿ ಕೂತಿವೆ.

ಇರಾನಿನ ಝಾಗ್ರೋಸ್ ಬೆಟ್ಟಗಳ ಕಡೆಯಿಂದ ಬಂದ ಕೃಷಿಕರು ಸಹ ಸಿಂಧೂ ನಾಗರಿಕತೆಯಲ್ಲಿ ಪಾತ್ರ ವಹಿಸಿರಬೇಕು. ಆದರೆ ಸ್ಟೆಪ್ ಹುಲ್ಲುಗಾವಲುಗಳಿಂದ ಇಂದ್ರ ಮುಂತಾದವರ ನೇತೃತ್ವದಲ್ಲಿ ಬಂದ ಕುದುರೆ ಸಂಸ್ಕೃತಿಯ ಜನರು ಸ�

Writer - ನೆಲ್ಲುಕುಂಟೆ ವೆಂಕಟೇಶ್

contributor

Editor - ನೆಲ್ಲುಕುಂಟೆ ವೆಂಕಟೇಶ್

contributor

Similar News