ಖಾಸಗಿ ಇ-ಮೇಲ್ ಸಂದೇಶವನ್ನು ರಿಪಬ್ಲಿಕ್ ಟಿವಿ ‘ತಪ್ಪಾಗಿ ನಿರೂಪಿಸಿದೆ’: ‘ಬಾರ್ಕ್’ ಅಸಮಾಧಾನ

Update: 2020-10-18 14:50 GMT

ಹೊಸದಿಲ್ಲಿ,ಅ.18: ಟಿಆರ್‌ಪಿ ಹಗರಣದಲ್ಲಿ ರಿಪಬ್ಲಿಕ್ ಟಿವಿಯ ವಿರುದ್ಧ ನಡೆಯುತ್ತಿರುವ ತನಿಖೆಯ ಕುರಿತು ತಾನು ಹೇಳಿಕೆ ನೀಡಿದ್ದೇನೆ ಎನ್ನುವುದನ್ನು ಟಿಆರ್‌ಪಿ ರೇಟಿಂಗ್ ಸಂಸ್ಥೆ ‘ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್’ (ಬಾರ್ಕ್) ರವಿವಾರ ನಿರಾಕರಿಸಿದೆ.

ತನ್ನ ಮತ್ತು ವಾಹಿನಿಯ ನಡುವಿನ ರಹಸ್ಯ ಸಂವಹನವನ್ನು ರಿಪಬ್ಲಿಕ್ ಟಿವಿ ತಪ್ಪಾಗಿ ನಿರೂಪಿಸಿದೆ ಎಂದು ಅದು ಆರೋಪಿಸಿದೆ.

ಹಾಲಿ ನಡೆಯುತ್ತಿರುವ ತನಿಖೆಯ ಕುರಿತು ‘ಬಾರ್ಕ್’ ಯಾವುದೇ ಹೇಳಿಕೆಯನ್ನು ನೀಡಿಲ್ಲ ಮತ್ತು ಪೊಲೀಸರಿಗೆ ಅಗತ್ಯ ನೆರವನ್ನು ಒದಗಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಂಸ್ಥೆಯು, ಖಾಸಗಿ ಮತ್ತು ರಹಸ್ಯ ಸಂವಹನವನ್ನು ಬಹಿರಂಗಗೊಳಿಸಿರುವ ಮತ್ತು ಅದನ್ನು ತಪ್ಪಾಗಿ ನಿರೂಪಿಸಿರುವ ರಿಪಬ್ಲಿಕ್‌ ನ ಕೃತ್ಯದಿಂದಾಗಿ ತೀವ್ರ ನಿರಾಶೆಯಾಗಿದೆ ಎಂದಿದೆ.

ರವಿವಾರ ಬೆಳಿಗ್ಗೆ ಬಿಡುಗಡೆಗೊಳಿಸಿದ್ದ ಹೇಳಿಕೆಯೊಂದರಲ್ಲಿ ರಿಪಬ್ಲಿಕ್ ಟಿವಿಯು, ತಾನು ಮುಂಬೈ ಪೊಲೀಸರ ಸುಳ್ಳುಗಳನ್ನು ಬಯಲುಗೊಳಿಸಿರುವುದಾಗಿ ಹೇಳಿಕೊಂಡಿತ್ತು. ತನ್ನ ವಿರುದ್ಧ ಅವ್ಯವಹಾರಗಳ ಯಾವುದೇ ಆರೋಪಗಳಿಲ್ಲ ಎಂದು ‘ಬಾರ್ಕ್’ ವೈಯಕ್ತಿಕವಾಗಿ ದೃಢಪಡಿಸಿದೆ ಎಂದೂ ಅದು ತಿಳಿಸಿತ್ತು.

ರಿಪಬ್ಲಿಕ್ ಮೀಡಿಯಾ ನೆಟ್‌ ವರ್ಕ್ಸ್‌ ನ ಸಿಇಒ ವಿಕಾಸ ಖನ್ಚಂದಾನಿ ಮತ್ತು ‘ಬಾರ್ಕ್’ ನಡುವೆ ಅ.16ರಿಂದ ನಡೆದಿತ್ತೆನ್ನಲಾದ ಇ-ಮೇಲ್ ವಿನಿಮಯವನ್ನು ವಾಹಿನಿಯು ಉಲ್ಲೇಖಿಸಿದೆ. ರಿಪಬ್ಲಿಕ್ ಟಿವಿಯಿಂದ ಯಾವುದೇ ಉಲ್ಲಂಘನೆಯನ್ನು ಬಾರ್ಕ್ ಮತ್ತು ಅದರ ಜಾಗೃತ ತಂಡ ಪತ್ತೆಹಚ್ಚಿಲ್ಲ ಎನ್ನುವುದನ್ನು ಬಹಿರಂಗವಾಗಿ ದೃಢಪಡಿಸುವಂತೆ ಖನ್ಚಂದಾನಿ ತನ್ನ ಇ-ಮೇಲ್‌ನಲ್ಲಿ ಕೋರಿದ್ದರು. ಅ.17ರಂದು ಇ-ಮೇಲ್‌ಗೆ ಉತ್ತರಿಸಿದ್ದ ಬಾರ್ಕ್, ‘ಎಆರ್‌ಜಿ ಔಟ್‌ ಲೈಯರ್ ಮೀಡಿಯಾ ಪ್ರೈ.ಲಿ.(ರಿಪಬ್ಲಿಕ್‌ನ ಮಾಲಿಕ ಸಂಸ್ಥೆ)ನ ವಿರುದ್ಧ ಯಾವುದೇ ಶಿಸ್ತುಕ್ರಮ ಆರಂಭಗೊಂಡಿದ್ದರೆ ಅದನ್ನು ತಾನು ಪ್ರತಿಕ್ರಿಯೆಗಾಗಿ ಅಗತ್ಯ ದಾಖಲೆಗಳೊಂದಿಗೆ ನಿಮಗೆ ತಿಳಿಸುತ್ತಿದ್ದೆ’ ಎಂದು ಉಲ್ಲೇಖಿಸಿದೆ ಎಂದು ವಾಹಿನಿಯು ಹೇಳಿಕೆಯಲ್ಲಿ ತಿಳಿಸಿದೆ.

ಈ ಇ-ಮೇಲ್ ಸಂವಹನವು ‘ಬಾರ್ಕ್’ ತನ್ನ ವಿರುದ್ಧ ಯಾವುದೇ ಅವ್ಯವಹಾರದ ಆರೋಪವನ್ನು ಹೊರಿಸಿಲ್ಲ ಎನ್ನುವುದನ್ನು ಸಾಬೀತುಗೊಳಿಸಿದೆ. ಆದರೂ ಮುಂಬೈ ಪೊಲೀಸ್ ಆಯುಕ್ತರು ವಾಹಿನಿಯ ವಿರುದ್ಧ ಸುಳ್ಳು ಅಭಿಯಾನವನ್ನು ಹುಟ್ಟುಹಾಕಿದ್ದಾರೆ ಮತ್ತು ಪ್ರತಿಯೊಂದು ಹಂತದಲ್ಲಿಯೂ ಇದನ್ನು ಬಯಲಿಗೆಳೆಯಲಾಗಿದೆ ಎಂದು ರಿಪಬ್ಲಿಕ್ ಟಿವಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News