ಚಳಿಗಾಲದಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ಸಾಧ್ಯತೆ: ನೀತಿ ಆಯೋಗದ ಸದಸ್ಯ ವಿಕೆ ಪೌಲ್

Update: 2020-10-18 16:11 GMT

ಹೊಸದಿಲ್ಲಿ, ಅ.18: ಕಳೆದ ಮೂರು ವಾರಗಳಲ್ಲಿ ಕೊರೋನ ವೈರಸ್ ಸೋಂಕಿನ ಸಂಖ್ಯೆಯಲ್ಲಿ ಇಳಿಮುಖವಾಗಿದ್ದರೂ ಮುಂಬರುವ ಚಳಿಗಾಲದ ಅವಧಿಯಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಹೇಳಿದ್ದಾರೆ.

  ವಿಕೆ ಪೌಲ್, ದೇಶದಲ್ಲಿ ಕೊರೋನ ಸೋಂಕು ನಿಯಂತ್ರಣದ ಪ್ರಯತ್ನಗಳನ್ನು ಸಂಯೋಜಿಸುವ ತಜ್ಞರ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಕೊರೋನ ಸೋಂಕಿನ ವಿರುದ್ಧದ ಲಸಿಕೆ ಲಭ್ಯವಾದರೆ, ತಕ್ಷಣ ಅದನ್ನು ದೇಶದ ಜನತೆಗೆ ತಲುಪಿಸುವ ವ್ಯವಸ್ಥೆ ಮತ್ತು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ದೇಶದಲ್ಲಿ ಕೊರೋನ ಸಾಂಕ್ರಾಮಿಕವು ಹೆಚ್ಚಿನ ರಾಜ್ಯಗಳಲ್ಲಿ ಸ್ಥಿರವಾಗಿದೆ ಮತ್ತು ಹೊಸ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣ ಕಳೆದ ಮೂರು ವಾರಗಳಿಂದ ನಿರಂತರ ಇಳಿಮುಖವಾಗುತ್ತಿದೆ . ಆದರೂ, ಕೇರಳ ಕರ್ನಾಟಕ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಲ ಹಾಗೂ ನಾಲ್ಕು ಕೇಂದ್ರಾಳಿತ ಪ್ರದೇಶಗಳಲ್ಲಿ ಕೊರೋನ ಸೋಂಕಿನ ಪ್ರಮಾಣ ಈಗಲೂ ಏರುಗತಿಯಲ್ಲೇ ಸಾಗಿದೆ ಎಂದು ಪೌಲ್ ಹೇಳಿದ್ದಾರೆ.

ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾರತದ ಸ್ಥಿತಿ ಈಗ ಉತ್ತಮವಾಗಿದೆ ಎನ್ನಬಹುದು. ಆದರೂ ಕ್ರಮಿಸಬೇಕಿರುವ ಹಾದಿ ಇನ್ನೂ ದೀರ್ಘವಾಗಿದೆ ಮತ್ತು 90% ಜನತೆ ಕೊರೋನ ವೈರಸ್ ಸೋಂಕಿಗೆ ಒಳಪಡುವ ಸಾಧ್ಯತೆಯಿದೆ . ಚಳಿಗಾಲ ಸಮೀಪಿಸುತ್ತಿದ್ದಂತೆಯೇ ಯುರೋಪ್‌ನೆಲ್ಲೆಡೆ ಕೊರೋನ ಸೋಂಕಿನ ಪ್ರಕರಣ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲೂ ಈ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News