ಚೀನಿ ವಿದ್ವಾಂಸರ ವಿಚಾರಣೆಗೆ ಪ್ರತೀಕಾರವಾಗಿ ಚೀನಾದಲ್ಲಿರುವ ಅಮೆರಿಕನ್ನರ ಬಂಧನ

Update: 2020-10-18 16:34 GMT

 ವಾಶಿಂಗ್ಟನ್,ಅ.18: ಚೀನಾದ ಸೇನೆಯ ಜೊತೆ ನಂಟು ಹೊಂದಿರುವ ಚೀನಿ ವಿದ್ವಾಂಸರನ್ನು ವಿಚಾರಣೆಗೊಳಪಡಿಸುವ ಅಮೆರಿಕದ ನ್ಯಾಯಾಂಗ ಇಲಾಖೆಯ ಕ್ರಮಕ್ಕೆ ಪ್ರತೀಕಾರವಾಗಿ ತಾನು ಚೀನಾದಲ್ಲಿರುವ ಅಮೆರಿಕನ್ನರನ್ನು ವಶಕ್ಕೆ ತೆಗೆದುಕೊಳ್ಳಬಹುದಾಗಿದೆ ಎಂದು ಚೀನಾ ಸರಕಾರವು ವಾಶಿಂಗ್ಟನ್‌ಗೆ ಶನಿವಾರ ಎಚ್ಚರಿಕೆ ನೀಡಿದೆ.

  ಈ ಕುರಿತಾಗಿ ಚೀನಿ ಅಧಿಕಾರಿಗಳು, ವಿವಿಧ ವಾಹಿನಿಗಳ ಮೂಲಕ ಅಮೆರಿಕ ಆಡಳಿತದ ಅಧಿಕಾರಿಗಳಿಗೆ ಮತ್ತೆ ಮತ್ತೆ ಮುನ್ನೆಚ್ಚರಿಕೆಗಳನ್ನು ನೀಡಿದ್ದಾರೆಂದು ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯು, ವಿಷಯದ ಬಗ್ಗೆ ಮಾಹಿತಿ ಹೊಂದಿರುವ ವ್ಯಕ್ತಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

 ಅಮೆರಿಕದ ನ್ಯಾಯಾಲಯಗಳಲ್ಲಿ ಚೀನಿ ವಿದ್ವಾಂಸರುಗಳ ವಿಚಾರಣೆಯನ್ನು ಅಮೆರಿಕವು ಕೊನೆಗೊಳಿಸಬೇಕು ಇಲ್ಲವೇ ಚೀನಾದಲ್ಲಿರುವ ಅಮೆರಿಕರನ್ನು ಚೀನಿ ಕಾನೂನಿನ ಉಲ್ಲಂಘನೆಯ ಹೆಸರಿನಲ್ಲಿ ಬಂಧಿಸಲಾಗುವುದು ಎಂಬ ಸಂದೇಶವನ್ನು ಚೀನಾವು ನೀಡಿದೆ ಎಂದು ಪತ್ರಿಕೆ ಹೇಳಿದೆ.

    ಸೆಪ್ಟೆಂಬರ್‌ನಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯು ಚೀನಾಕ್ಕೆ ಪ್ರಯಾಣಿಸುವ ತನ್ನ ಪ್ರಜೆಗಳಿಗೆ ನೀಡಿದ ಎಚ್ಚರಿಕೆಯ ಸಂದೇಶದಲ್ಲಿ, ಚೀನಿ ಸರಕಾರವು ವಿದೇಶಿ ಸರಕಾರಗಳ ನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಮತ್ತು ಅವುಗಳೊಂದಿಗೆ ಚೌಕಾಶಿಯಲ್ಲಿ ತೊಡಗುವುದಕ್ಕಾಗಿ ತನ್ನ ನೆಲದಲ್ಲಿರುವ ಅಮೆರಿಕ ಮತ್ತಿತರ ದೇಶಗಳ ಪ್ರಜೆಗಳ ಬಂಧಿಸುವ ಅಥವಾ ಅವರ ನಿರ್ಗಮನವನ್ನು ನಿಷೇಧಿಸುವ ಸಾಧ್ಯತೆಗಳಿವೆ ಎಂದು ತಿಳಿಸಿತ್ತು.

  ಜಗತ್ತಿನ ಅಗ್ರಗಣ್ಯ ಮಿಲಿಟರಿ ಹಾಗೂ ಆರ್ಥಿಕ ಶಕ್ತಿಯಾಗಿರುವ ಅಮೆರಿಕವನ್ನು ಮೀರಿಸುವುದಕ್ಕಾಗಿ ಚೀನಾವು ಅಮೆರಿಕದ ತಂತ್ರಜ್ಞಾನ, ಮಿಲಿಟರಿಗೆ ಸಂಬಂಧಿಸಿದ ಮಾಹಿತಿಗಳನ್ನು ಕದಿಯುತ್ತಿದೆ ಎಂದು ಟ್ರಂಪ್ ಆಡಳಿತ ಆರೋಪಿಸುತ್ತಿದೆ. ಆದರೆ ಬೀಜಿಂಗ್ ಈ ಆರೋಪಗಳನ್ನು ನಿರಾಕರಿಸುತ್ತಾ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News