ನ್ಯಾಯಾಧೀಶರು ತಮ್ಮ ನಿರ್ಧಾರಗಳ ಬಗ್ಗೆ ನಿರ್ಭಯರಾಗಿರಬೇಕು: ನ್ಯಾ. ರಮಣ

Update: 2020-10-18 16:35 GMT

ಹೊಸದಿಲ್ಲಿ, ಅ.18: ನ್ಯಾಯಾಂಗದ ಬಹುದೊಡ್ಡ ಶಕ್ತಿ ಎಂದರೆ ಅದರ ಕುರಿತು ಜನರಿಗಿರುವ ವಿಶ್ವಾಸ ಮತ್ತು ನಂಬಿಕೆ. ನ್ಯಾಯಾಧೀಶರು ತಮ್ಮ ಸಿದ್ಧಾಂತಗಳಿಗೆ ಸ್ಥಿರವಾಗಿರಬೇಕು ಮತ್ತು ಎಲ್ಲಾ ಒತ್ತಡ ಮತ್ತು ತೊಂದರೆಗಳನ್ನು ಎದುರಿಸಿ ತಮ್ಮ ನಿರ್ಧಾರಗಳಲ್ಲಿ ನಿರ್ಭಯರಾಗಿರಬೇಕು ಎಂದು ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಾಧೀಶ ಎನ್‌ವಿ ರಮಣ ಹೇಳಿದ್ದಾರೆ.

ಆಗಸ್ಟ್ 7ರಂದು ನಿಧನರಾದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಆರ್ ಲಕ್ಷ್ಮಣನ್‌ಗೆ ಶೃದ್ಧಾಂಜಲಿ ಸಲ್ಲಿಸುವ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನ್ಯಾಯಾಂಗದ ಬಹುದೊಡ್ಡ ಶಕ್ತಿ ಎಂದರೆ ಅದರ ಕುರಿತು ಜನರಿಗಿರುವ ವಿಶ್ವಾಸ ಮತ್ತು ನಂಬಿಕೆ. ವಿಶ್ವಾಸ, ಭರವಸೆ ಮತ್ತು ಸ್ವೀಕಾರಾರ್ಹತೆಯನ್ನು ಆಜ್ಞಾಪಿಸಲಾಗದು, ಅವುಗಳನ್ನು ಗಳಿಸಬೇಕು ಎಂದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಮುಖ್ಯ ನ್ಯಾಯಾಧೀಶ ಎಸ್‌ಎ ಬೊಬ್ಡೆಯವರಿಗೆ ಇತ್ತೀಚೆಗೆ ಬರೆದಿದ್ದ ಪತ್ರದಲ್ಲಿ ತನ್ನ (ನ್ಯಾಯಾಧೀಶ ರಮಣ ವಿರುದ್ಧ) ವಿರುದ್ಧ ತೀವ್ರ ಆರೋಪ ಹೊರಿಸಿರುವ ಹಿನ್ನೆಲೆಯಲ್ಲಿ, ರಮಣ ಅವರ ಹೇಳಿಕೆ ಮಹತ್ವ ಪಡೆದಿದೆ. ನಮ್ರತೆ, ದಯೆ, ತಾಳ್ಮೆ, ಬಲವಾದ ಕೆಲಸದ ನೀತಿ ಮತ್ತು ತನ್ನನ್ನು ಸುಧಾರಿಸಿಕೊಳ್ಳುವ ಮತ್ತು ನಿರಂತರ ಕಲಿಯುವ ಉತ್ಸಾಹ ಮುಂತಾದ ವಿಧಾನಗಳಿಂದ ಓರ್ವ ವ್ಯಕ್ತಿ ಉತ್ತಮವಾಗಿ ಬದುಕಿ ತೋರಿಸಬಹುದು. ಬಹು ಮುಖ್ಯವಾಗಿ, ಎಲ್ಲಾ ಅಡೆತಡೆಗಳ ವಿರುದ್ಧ ಧೈರ್ಯದಿಂದ ನಿಲ್ಲುವುದು ನ್ಯಾಯಾಧೀಶರಿಗೆ ಇರಬೇಕಾದ ಪ್ರಮುಖ ವೈಶಿಷ್ಟವಾಗಿದೆ ಎಂದು ನ್ಯಾಯಾಧೀಶ ರಮಣ ಹೇಳಿದರು.

 ಮಾಜಿ ನ್ಯಾಯಾಧೀಶ ಲಕ್ಷ್ಮಣನ್ ಅವರ ಮಾತುಗಳು ನಮಗೆಲ್ಲಾ ಸ್ಫೂರ್ತಿಯಾಗಿರಬೇಕು ಮತ್ತು ಇಂದಿನ ದಿನಕ್ಕೆ ಅಗತ್ಯವಾಗಿರುವ ಸ್ಪಂದನಶೀಲ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸಬೇಕು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News