ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತರೆ ಟ್ರಂಪ್ ಏನು ಮಾಡುತ್ತಾರಂತೆ ಗೊತ್ತಾ?

Update: 2020-10-18 17:08 GMT

ಮ್ಯಾಕೊನ್,ಅ.18: ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡೆನ್ ಎದುರು ಸೋಲನ್ನಪ್ಪಿದರೆ ತಾನು ಅಮೆರಿಕವನ್ನು ತೊರೆಯಬೇಕಾದೀತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಫ್ಲಾರಿಡಾ ಹಾಗೂ ಜಾರ್ಜಿಯಾಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿರುವ ಟ್ರಂಪ್ ಮ್ಯಾಕೋನ್‌ನಲ್ಲಿ ತನ್ನ ಬೆಂಬಲಿಗರನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ಸಂದರ್ಭ ಹೀಗೆ ಹೇಳಿದ್ದಾರೆ. ತನ್ನ ಎದುರಾಳಿಯಾದ ಡೆಮಾಕ್ರಟಿಕ್ ಹುರಿಯಾಳು ಜೊ ಬೈಡೆನ್ ಅಧಿಕಾರಕ್ಕೇರಿದಲ್ಲಿ, ಅವರು ಅಮೆರಿಕದಲ್ಲಿ ಕಮ್ಯೂನಿಸಂ ಜಾರಿಗೆ ತರಲಿದ್ದ್ಜಾರೆ ಹಾಗೂ ದೇಶಕ್ಕೆ ಕ್ರಿಮಿನಲ್ ವಲಸಿಗರ ಪ್ರವಾಹವೇ ಹರಿದುಬರಲಿದೆ ಎಂದವರು ಟೀಕಿಸಿದ್ದಾರೆ.

‘‘ಇಂತಹ ಸನ್ನಿವೇಶ ಉದ್ಭವಿಸಿದಲ್ಲಿ ಬಹುಶಃ ತಾನು ದೇಶವನ್ನು ತೊರೆಯಬೇಕಾಗಿ ಬರಬಹುದು. ಏನಾಗುವುದೋ ಎಂಬುದು ನನಗೆ ಗೊತ್ತಿಲ್ಲ ’’ಎಂದವರು ಕಳವಳ ವ್ಯಕ್ತಪಡಿಸಿದರು.

ತನ್ನ ಭಾಷಣಗಳಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘‘ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಇತಿಹಾಸದಲ್ಲೇ ಬೈಡೆನ್ ಅತ್ಯಂತ ಕೆಟ್ಟ ಅಭ್ಯರ್ಥಿಯಾಗಿದ್ದಾರೆ’’ ಎಂದರು. ‘‘ಒಂದು ವೇಳೆ ನಾನು ಸೋತರೆ, ನನ್ನ ಜೀವನದುದ್ದಕ್ಕೂ ನಾನು ಏನು ಮಾಡಲಿದ್ದೇನೆಂಬುದು ಗೊತ್ತೇ ?. ರಾಜಕೀಯದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅಭ್ಯರ್ಥಿಯ ಎದುರು ನಾನು ಸೋತಿದ್ದೇನೆಂದು’’ ಎಂದು ಹೇಳುತ್ತಲೇ ಇರಬೇಕಾಗುತ್ತದೆ. ಇದು ನನಗೆ ಒಳ್ಳೆಯದೆನಿಸದು. ಬಹುಶಃ ನಾನು ದೇಶವನ್ನೇ ತೊರೆಯಬೇಕಾದೀತು’’ ಎಂದವರು ಹೇಳಿದರು.

  ಬೈಡೆನ್ ಭ್ರಷ್ಟಾಚಾರದಲ್ಲಿ ತೊಡಗಿದ್ದು ಅವರ ಕುಟುಂಬವು ಒಂದು ಕ್ರಿಮಿನಲ್ ಉದ್ಯಮ ಸಂಸ್ಥೆಯಾಗಿದೆ ಎಂದು ಟ್ರಂಪ್ ಕಟಕಿಯಾಡಿದರು. ಪ್ರತಿಪಕ್ಷವಾದ ಡೆಮಾಕ್ರಾಟರು ಅಮೆರಿಕವನ್ನು ಕಮ್ಯೂನಿಸ್ಟ್ ರಾಷ್ಟ್ರವಾಗಿ ಮಾರ್ಪಡಿಸಲು ಹೊರಟಿದ್ದಾರೆ ಎಂದವರು ಹೇಳಿದರು.

ಕೊರೋನ ನಿರ್ವಹಣೆಯಲ್ಲಿ ಟ್ರಂಪ್ ವಿಫಲ: ಬೈಡೆನ್

 ಮಿಶಿಗನ್ ರಾಜ್ಯದಲ್ಲಿ ಶನಿವಾರ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬೈಡೆನ್, ಕೊರೋನ ವೈರಸ್ ಸಾಂಕ್ರಾಮಿಕದ ಹಾವಳಿ ತಡೆಯುವಲ್ಲಿ ಅಧ್ಯಕ್ಷ ಟ್ರಂಪ್ ಅವರ ನಿರ್ವಹಣೆಯ ಬಗ್ಗೆ ತೀವ್ರ ಟೀಕಾ ಪ್ರಹಾರ ನಡೆಸಿದರು.

 ‘‘ಕೊರೋನ ವೈರಸ್ ಪವಾಡಸದೃಶವಾಗಿ ಮಾಯವಾಗಲಿದೆ ಎಂದು ಟ್ರಂಪ್ ಹೇಳುತ್ತಲೇ ಬಂದಿದ್ದರು. ಆದರೆ ಹಾಗಾಗದೆ ಅದು ಹೆಚ್ಚುತ್ತಲೇ ಇದೆ ಬಹುಶಃ ಇನ್ನಷ್ಟು ಭೀಕರವಾಗುತ್ತಿದೆ’’ಎಂದರು.

ಡೆಟ್ರಾಯಿಟ್ ನಗರದಲ್ಲಿ ಕಾರ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ‘‘ಡೊನಾಲ್ಡ್ ಟ್ರಂಪ್ ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಈಗ ನಾವು ಯಾರೆಂಬುದನ್ನು ಅವರಿಗೆ ತೋರಿಸಬೇಕಾಗಿದೆ’’ ಎಂದವರು ಬೆಂಬಲಿಗರಿಗೆ ಕರೆ ನೀಡಿದರು. ಭಯದ ಬದಲು ಆಶಾವಾದ, ವಿಭಜನೆಯ ಬದಲು ಏಕತೆಯನ್ನು, ಕಾಲ್ಪನಿಕತೆಯ ಬದಲು ವಿಜ್ಞಾನವನ್ನು, ಸುಳ್ಳುಗಳ ಬದಲು ಸತ್ಯವನ್ನು ನಾವು ಆಯ್ಕೆ ಮಾಡಬೇಕಾಗಿದೆ ಎಂದು ಬೈಡೆನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News