ಅದಾನಿ ಕಂಪೆನಿ‌ಗೆ ವಿಮಾನ ನಿಲ್ದಾಣ ಗುತ್ತಿಗೆ: ಕೇರಳ ಸರಕಾರದ ಮನವಿ ತಿರಸ್ಕರಿಸಿದ ಹೈಕೋರ್ಟ್

Update: 2020-10-19 15:22 GMT

ತಿರುವನಂತಪುರ, ಅ. 19: ತಿರುವನಂತಪುರ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡಿದ ನಿರ್ಧಾರ ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ ಮನವಿಯನ್ನು ಕೇರಳ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಹಾಗೂ ಸಿ.ಎಸ್ ಡಯಾಸ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ರಾಜ್ಯ ಸರಕಾರ ಹಾಗೂ ಇತರ ಐವರ ಮನವಿ ತಿರಸ್ಕರಿಸಿದ ನ್ಯಾಯಾಲಯ, ಕೇಂದ್ರದ ನೀತಿ ನಿರ್ಧಾರದಲ್ಲಿ ರಾಜ್ಯ ಸರಕಾರ ಹಸ್ತಕ್ಷೇಪ ಮಾಡುವಂತಿಲ್ಲ. ಈ ಹಿಂದೆ ನಡೆದ ಹರಾಜಿನಲ್ಲಿ ರಾಜ್ಯ ಸರಕಾರ ಪಾಲ್ಗೊಂಡಿದೆ, ಹಾಗೂ ಹರಾಜಿನಲ್ಲಿ ಗುತ್ತಿಗೆ ಪಡೆದುಕೊಳ್ಳಲು ವಿಫಲವಾಗಿದೆ. ಆದುದರಿಂದ ಈಗ ಈ ನಿರ್ಧಾರದ ಬಗ್ಗೆ ಪ್ರಶ್ನಿಸುವುದು ಸೂಕ್ತವಲ್ಲ ಎಂದು ಹೇಳಿದೆ.

ಆಗಸ್ಟ್‌ನಲ್ಲಿ ರಾಜ್ಯ ವಿಧಾನ ಸಭೆ ಕೇಂದ್ರ ಸರಕಾರ ತನ್ನ ನಿರ್ಧಾರವನ್ನು ಹಿಂದೆಗೆದುಕೊಳ್ಳುವಂತೆ ಸರ್ವಸಮ್ಮತವಾಗಿ ನಿರ್ಣಯ ಅಂಗೀಕರಿಸಿತ್ತು. ಅನಂತರ ಸರಕಾರ ಎರಡನೇ ಬಾರಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದೆ.

ಕೇಂದ್ರ ಸರಕಾರ ವಿಮಾನ ನಿಲ್ದಾಣವನ್ನು ನಡೆಸುವ ಯಾವುದೇ ಅನುಭವ ಇಲ್ಲದ ಅದಾನಿ ಎಂಟರ್‌ಪ್ರೈಸಸ್‌ಗೆ ತಿರುವನಂತಪುರ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುತ್ತಿಗೆಗೆ ನೀಡಲು ಆದ್ಯತೆ ನೀಡಿದೆ ಎಂದು ರಾಜ್ಯ ಸರಕಾರ ಮನವಿಯಲ್ಲಿ ಹೇಳಿದೆ. ಆದರೆ, ಹರಾಜಿನಲ್ಲಿ ವಿಫಲವಾದ ಬಳಿಕ ಈ ನಿರ್ಧಾರವನ್ನು ವಿರೋಧಿಸುವುದು ಸಮ್ಮತವಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.

ಉಚ್ಚ ನ್ಯಾಯಾಲಯದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸರಕಾರ, ತಾನು ಶೀಘ್ರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರುವುದಾಗಿ ತಿಳಿಸಿದೆ. ‘‘ವಿಮಾನ ನಿಲ್ದಾಣವನ್ನು ಮಾರಾಟ ಮಾಡುವ ಕೇಂದ್ರ ಸರಕಾರದ ನಡೆ ಹಗಲು ದರೋಡೆಗಿಂತ ಬೇರೆ ಅಲ್ಲ. ಉಚ್ಚ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಲಿದ್ದೇವೆ’’ ಎಂದು ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News