ಹೈದರಾಬಾದ್‌ನಲ್ಲಿ ಭಾರೀ ಮಳೆ ಸಾಧ್ಯತೆ

Update: 2020-10-19 15:36 GMT

ಹೈದರಾಬಾದ್, ಅ. 19: ಹೈದರಾಬಾದ್‌ನಲ್ಲಿ ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ತೆಲಂಗಾಣದಲ್ಲಿ 69 ಮಂದಿ ಸಾವನ್ನಪ್ಪಿದ್ದರು. ಪ್ರಮುಖ ಮೂರು ಸರೋವರಗಳು ಉಕ್ಕಿ ಹರಿದ ಪರಿಣಾಮ ಭಾರೀ ನೆರೆ ಸೃಷ್ಟಿಯಾಗಿ, ನಗರದ ವಿವಿಧ ಭಾಗಗಳಲ್ಲಿ ವ್ಯಾಪಕ ಹಾನಿ ಉಂಟಾಗಿತ್ತು. ಈಗ ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಆದುದರಿಂದ ಆಡಳಿತ ಹೆಚ್ಚಿನ ಮಳೆ ಹಾಗೂ ಪ್ರವಾಹ ಎದುರಿಸಲು ಸಜ್ಜಾಗಿದೆ.

ಹಳೇ ನಗರ ಪ್ರದೇಶದ ವಿವಿಧ ಭಾಗಗಳಲ್ಲಿ ನೆರೆ ಪರಿಸ್ಥಿತಿ ಮುಂದುವರಿದಿದೆ. ನೆರೆ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲು ಹಾಗೂ ಅವರಿಗೆ ವಾಸ್ತವ್ಯ ಕಲ್ಪಿಸಲು ಪೊಲೀಸರು, ವಿಪತ್ತು ಪ್ರತಿಸ್ಪಂದನಾ ಪಡೆ ಹಾಗೂ ನಗರಾಡಳಿತ 24 ಗಂಟೆಗಳ ಕಾಲ ಅವಿರತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶನಿವಾರ ಸಂಜೆ ಸುರಿದ ಎರಡನೇ ಭಾರೀ ಮಳೆಗೆ ಇಬ್ಬರು ಮಕ್ಕಳು ಸಹಿತ 6 ಮಂದಿ ಮೃತಪಟ್ಟಿದ್ದಾರೆ. ಮಂಗಳವಾರ ಹಾಗೂ ಬುಧವಾರ ಸುರಿದ ಧಾರಾಕಾರ ಮಳೆಯಿಂದ ಉಂಟಾದ ನೆರೆಯಲ್ಲಿ ಕೊಚ್ಚಿಕೊಂಡ ಹೋದ ಕಾರಿನಲ್ಲಿ ಪತ್ತೆಯಾಗಿರುವ ಮೃತದೇಹ ಸೇರಿದಂತೆ ಹಲವು ಮೃತದೇಹಗಳು ಪತ್ತೆಯಾಗಿವೆ.

ಕಳೆದ ವಾರ ಒಂದೇ ದಿನ ತೆಲಂಗಾಣದ ರಾಜಧಾನಿ ಭಾರೀ ಮಳೆಗೆ ಸಾಕ್ಷಿಯಾಯಿತು. ನಗರ ಹಾಗೂ ನಗರದ ಸುತ್ತಮುತ್ತ ಪ್ರದೇಶಗಳಲ್ಲಿ 20ರಿಂದ 32 ಸೆಂಟಿ ಮೀಟರ್ ನಷ್ಟು ಮಳೆ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News