ಗೋವಾ ಉಪಮುಖ್ಯಮಂತ್ರಿ ಕವಳೇಕರ್ ಮೊಬೈಲ್‌ನಿಂದ ಅಶ್ಲೀಲ ವೀಡಿಯೊ ಹಂಚಿಕೆ

Update: 2020-10-19 15:44 GMT
ಫೋಟೊ ಕೃಪೆ: twitter

ಪಣಜಿ,ಅ.19: ಗೋವಾದ ಉಪಮುಖ್ಯಮಂತ್ರಿ ಚಂದ್ರಕಾಂತ ಕವಳೇಕರ್ ಅವರು ವಾಟ್ಸ್‌ಆ್ಯಪ್ ಗುಂಪೊಂದರಲ್ಲಿ ಅಶ್ಲೀಲ ವೀಡಿಯೊವೊಂದನ್ನು ಶೇರ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು,ತನ್ನ ಮೊಬೈಲ್ ಫೋನ್ ಅನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಗೋವಾ ಪೊಲೀಸ್ ಸೈಬರ್ ಘಟಕಕ್ಕೆ ದೂರು ಸಲ್ಲಿಸಿರುವ ಕವಳೇಕರ್,ದುಷ್ಕರ್ಮಿಗಳು ದುರುದ್ದೇಶದಿಂದ ತಾನು ಸದಸ್ಯನಾಗಿರುವ ‘ವಿಲೇಜಸ್ ಆಫ್ ಗೋವಾ ’ ವಾಟ್ಸ್‌ಆ್ಯಪ್ ಗುಂಪಿಗೆ ಅಶ್ಲೀಲ ವೀಡಿಯೊವನ್ನು ತನ್ನ ಹೆಸರಿನಲ್ಲಿ ಕಳುಹಿಸಿದ್ದಾರೆ. ತಾನು ಹಲವಾರು ವಾಟ್ಸ್ ಆ್ಯಪ್ ಗುಂಪುಗಳ ಸದಸ್ಯನಾಗಿದ್ದು,ಈ ಗುಂಪಿಗೆ ಮಾತ್ರ ಅಶ್ಲೀಲ ವೀಡಿಯೊವನ್ನು ರವಾನಿಸಲಾಗಿದೆ. ಸೋಮವಾರ ಬೆಳಗಿನ ಜಾವ 1:20ಕ್ಕೆ ಈ ವೀಡಿಯೊವನ್ನು ಕಳುಹಿಸಲಾಗಿದ್ದು,ಆ ಸಮಯದಲ್ಲಿ ತಾನು ಮೊಬೈಲ್ ಫೋನ್ ಬಳಿಯಲ್ಲಿರಲಿಲ್ಲ ಮತ್ತು ಗಾಢನಿದ್ರೆಯಲ್ಲಿದ್ದೆ ಎಂದು ತಿಳಿಸಿದ್ದಾರೆ.

ಈ ಹಿಂದೆಯೂ ತನ್ನ ಹೆಸರನ್ನು ಕೆಡಿಸಲು ಮತ್ತು ಜನರ ಕಣ್ಣಲ್ಲಿ ತನ್ನನ್ನು ಕೆಟ್ಟವನನ್ನಾಗಿ ಬಿಂಬಿಸಲು ಪ್ರಯತ್ನಗಳು ನಡೆದಿವೆ ಎಂದಿರುವ ಅವರು,ಇಂತಹ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವಂತೆ ಆಗ್ರಹಿಸಿದ್ದಾರೆ.

ತನ್ಮಧ್ಯೆ,ಈ ವಿಷಯವನ್ನು ಅಸ್ತ್ರವನ್ನಾಗಿಸಿಕೊಂಡಿರುವ ರಾಜಕೀಯ ಎದುರಾಳಿಗಳು ಕವಳೇಕರ್ ಅವರು ತನ್ನ ಹುದ್ದೆಯ ಘನತೆಗೆ ಕುಂದು ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News