×
Ad

ಪೌರತ್ವ ತಿದ್ದುಪಡಿ ಕಾಯ್ದೆ ಶೀಘ್ರವೇ ಜಾರಿ: ಬಿಜೆಪಿ ಅಧ್ಯಕ್ಷ ನಡ್ಡಾ

Update: 2020-10-19 21:26 IST

ಕೋಲ್ಕತಾ,ಅ.19: ಕೊರೋನ ವೈರಸ್ ಪಿಡುಗಿನಿಂದಾಗಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಳಂಬಗೊಂಡಿದ್ದು, ಅದನ್ನು ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

 ಸೋಮವಾರ ಪ.ಬಂಗಾಳದ ಸಿಲಿಗುರಿಯಲ್ಲಿ ಸಾಮಾಜಿಕ ಗುಂಪುಗಳೊಂದಿಗಿನ ಸಭೆಯಲ್ಲಿ ಮಾತನಾಡುತ್ತಿದ್ದ ಅವರು,‘ಸಬ್ ಕಾ ಸಾಥ್,ಸಬ್ ಕಾ ವಿಕಾಸ್ ’ ಬಿಜೆಪಿಯ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೂಲನೀತಿಯಾಗಿದೆ. ‘ಸಮಾಜವನ್ನು ಒಡೆದು ಅದನ್ನು ಪ್ರತ್ಯೇಕವಾಗಿಸಿ ಆಳಿ ’ಎನ್ನುವುದು ಇತರ ಪಕ್ಷಗಳ ನೀತಿಯಾಗಿದೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿಯವರ ಆಡಳಿತದಲ್ಲಿ ಹಿಂದು ಸಮುದಾಯವು ಅನುಭವಿಸಿರುವ ಆಘಾತಗಳನ್ನು ನೀವು ಕಂಡಿದ್ದೀರಿ. ಇದು ಈಗ ಬ್ಯಾನರ್ಜಿಯವರಿಗೆ ಅರ್ಥವಾಗಿದೆ ಮತ್ತು ಸಮಾಜದ ಪ್ರತಿಯೊಬ್ಬರನ್ನೂ ಸೇರ್ಪಡೆಗೊಳಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇವರೆಲ್ಲ ಕೇವಲ ವೋಟ್ ಬ್ಯಾಂಕ್ ಮಾಡುವ,ಕೇವಲ ಅಧಿಕಾರದಲ್ಲಿರಲು ರಾಜಕೀಯವನ್ನು ಮಾಡುವ ಜನರಾಗಿದ್ದಾರೆ ಎಂದರು.

ಬ್ಯಾನರ್ಜಿ ಸರಕಾರವು ರಾಜ್ಯದಲ್ಲಿ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಜಾರಿಗೆ ಅವಕಾಶ ನೀಡಿಲ್ಲ ಮತ್ತು ಇದರಿಂದಾಗಿ ರಾಜ್ಯದ 76 ಲಕ್ಷ ಕೃಷಿಕರು ಸೌಲಭ್ಯ ವಂಚಿತರಾಗಿದ್ದಾರೆ ಎಂದು ಆರೋಪಿಸಿದ ಅವರು,ಪ.ಬಂಗಾಳದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಎಲ್ಲ ಕೃಷಿಕರಿಗೆ ಯೋಜನೆಯ ಲಾಭಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News