ದಿಲ್ಲಿ: ಕೆಲಸಕ್ಕಿದ್ದ ಮನೆಯಲ್ಲಿ ದಲಿತ ಯುವತಿ ಸಾವು

Update: 2020-10-19 16:29 GMT

ಹೊಸದಿಲ್ಲಿ, ಅ.19: ಉತ್ತರ ದಿಲ್ಲಿಯಲ್ಲಿ ಮನೆಕೆಲಸ ಮಾಡಿಕೊಂಡಿದ್ದ ಮನೆಯಲ್ಲಿ ಅಪ್ರಾಪ್ತ ವಯಸ್ಸಿನ ದಲಿತ ಯುವತಿ ಸಾವನ್ನಪ್ಪಿದ್ದು, ಇದು ಆತ್ಮಹತ್ಯೆ ಪ್ರಕರಣ ಎಂದು ಹೇಳಿದ್ದು ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ. ಆದರೆ ಯುವತಿಯನ್ನು ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದು ಪೊಲೀಸರು ಗುಪ್ತವಾಗಿ ಮೃತದೇಹ ಸುಟ್ಟು ಹಾಕಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿರುವುದಾಗಿ ‘ನ್ಯೂಸ್‌ಲಾಂಡ್ರಿ’ ಸುದ್ಧಿಸಂಸ್ಥೆ ವರದಿ ಮಾಡಿದೆ.

ಉತ್ತರ ದಿಲ್ಲಿಯ ಮಾಡೆಲ್‌ಟೌನ್‌ನ ಮನೆಯೊಂದರಲ್ಲಿ ಅಕ್ಟೋಬರ್ 4ರಂದು ಈ ಘಟನೆ ನಡೆದಿದ್ದರೂ ಇದುವರೆಗೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಮೃತ ಯುವತಿಯ ಮನೆಯವರು ಮಾಹಿತಿ ನೀಡಿರುವುದಾಗಿ ಸುದ್ಧಿಸಂಸ್ಥೆ ತಿಳಿಸಿದೆ.

ಬನ್ಸಾಲ್ ಎಂಬವರಿಗೆ ಸೇರಿದ್ದ ಮನೆಯಲ್ಲಿ ನಿತ್ಯಾ ಎಂಬ ದಲಿತ ಯುವತಿ ಮನೆಕೆಲಸಕ್ಕೆ ಸೇರಿದ್ದಳು. ತಾಯಿಯನ್ನು ಎಳವೆಯಲ್ಲಿಯೇ ಕಳೆದುಕೊಂಡಿದ್ದ ನಿತ್ಯಾಳ ತಂದೆ ವಿಪರೀತ ಮದ್ಯವ್ಯಸನಿಯಾಗಿರುವುದರಿಂದ ನಿತ್ಯಾ ತನ್ನ ಚಿಕ್ಕಮ್ಮ ಶೀಲಾ ಎಂಬವರ ಮನೆಯಲ್ಲಿ ನೆಲೆಸಿದ್ದಳು.

ಅಕ್ಟೋಬರ್ 4ರಂದು ಸಂಜೆ 3 ಗಂಟೆಯ ವೇಳೆಗೆ ತನಗೆ ಕರೆ ಮಾಡಿದ್ದ ನಿತ್ಯಾ ‘ ಚಾಲಕನ ಕೋಣೆಯಲ್ಲಿ ಕುಳಿತುಕೊಳ್ಳುವಂತೆ ಮನೆಯ ಮಾಲಕಿ ಆದೇಶಿಸಿದ್ದಾರೆ. ಆದರೆ ಅಲ್ಲಿಗೆ ಹೋಗಲು ತನಗೆ ಇಷ್ಟವಿಲ್ಲ ’ ಎಂದು ಹೇಳಿದ್ದಳು. ಆಕೆಯ ಮಾತು ಮುಗಿಯುವ ಮುನ್ನವೇ ಆಕೆಯ ಕೈಯಿಂದ ಫೋನನ್ನು ಕಿತ್ತುಕೊಳ್ಳಲಾಗಿದೆ ಎಂದು ಶೀಲಾ ಹೇಳಿದ್ದಾರೆ.

ಅದೇ ದಿನ ಸಂಜೆ 5:30ಕ್ಕೆ ಕರೆ ಮಾಡಿದ್ದ ಮನೆಮಾಲಕಿ, ನಿತ್ಯಾ ಕೋಣೆಯೊಂದಕ್ಕೆ ಹೋಗಿ ಚಿಲಕ ಹಾಕಿಕೊಂಡಿದ್ದು ಹೊರಬರಲು ನಿರಾಕರಿಸುತ್ತಿದ್ದಾಳೆ ಎಂದು ಹೇಳಿದ್ದಾಳೆ. ಬಳಿಕ ತನ್ನನ್ನು ಕರೆತರಲು ಮಾಲಕಿಯ ಪುತ್ರಿ ಕಾರಿನೊಂದಿಗೆ ಆಗಮಿಸಿದ್ದು ಅವಳೊಂದಿಗೆ ತಾನು ಅತ್ತೆಯೊಂದಿಗೆ ತೆರಳಿದ್ದೆ. ಮನೆ ಸಮೀಪಿಸುತ್ತಿದ್ದಂತೆಯೇ ಮಾಲಕಿಯ ಪುತ್ರಿ ತನ್ನೊಂದಿಗೆ ಮಾತನಾಡಿ ‘ ಒಂದು ವೇಳೆ ಪೊಲೀಸರು ಕೇಳಿದರೆ ನಿತ್ಯಾಳ ವಯಸ್ಸನ್ನು 17ರ ಬದಲು 19 ಎಂದು ಹೇಳಬೇಕು’ ಎಂದಳು. ಆಗ ತನಗೆ ಆತಂಕ ಹೆಚ್ಚಿತು. ಬನ್ಸಾಲ್ ಮನೆಯಲ್ಲಿ ಪೊಲೀಸರು ತುಂಬಿದ್ದರು. ಅದರಲ್ಲಿ ಹಲವರು ಸಮವಸ್ತ್ರದಲ್ಲಿ ಇರಲಿಲ್ಲ. ಮನೆಗೆ ಹೋದವಳೇ, ಮೊದಲು ನಿತ್ಯಾಳೊಂದಿಗೆ ಮಾತನಾಡಬೇಕು ಎಂದು ಪೊಲೀಸರನ್ನು ವಿನಂತಿಸಿದೆ. ಆದರೆ ತಮಗೆ ಕೆಲವು ಮಾಹಿತಿ ಅಗತ್ಯವಿದೆ ಎಂದು ಪೊಲೀಸರು ಪ್ರಶ್ನೆ ಆರಂಭಿಸಿದರು.

ಸುಮಾರು 20 ನಿಮಿಷದ ಬಳಿಕ ಪೊಲೀಸರು ತೋರಿಸಿದ ಕೋಣೆಯತ್ತ ತೆರಳಿದ್ದು ಅಲ್ಲಿ ಕೋಣೆಯ ಜಂತಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಿತಿಯಲ್ಲಿ ನಿತ್ಯಾಳನ್ನು ಕಂಡೆ. ಆಕೆಯ ಕೈಯಲ್ಲಿ ಸುಟ್ಟ ಗಾಯಗಳಿದ್ದವು ಎಂದು ಶೀಲಾ ಆರೋಪಿಸಿದ್ದಾರೆ. ಆಗ ಭಯದಿಂದ ಕಿರುಚಿಕೊಂಡೆ. ಆದರೆ ಮೃತದೇಹದ ಸಮೀಪಕ್ಕೆ ತನ್ನನ್ನು ಹೋಗಲು ಬಿಡಲಿಲ್ಲ. ಸಂಜೆ 6:30ಕ್ಕೆ ಆ್ಯಂಬುಲೆನ್ಸ್ ಬಂದಿತು. ಆಗ ತಾನು ಮತ್ತು ತನ್ನ ಅತ್ತೆ ಆ್ಯಂಬುಲೆನ್ಸ್‌ನ ಎದುರು ನಿಂತು, ನಿತ್ಯಾಳಿಗೆ ಏನಾಯಿತು ಎಂದು ಸ್ಪಷ್ಟಪಡಿಸುವವರೆಗೆ ಆ್ಯಂಬುಲೆನ್ಸ್ ಚಲಿಸಲು ಬಿಡುವುದಿಲ್ಲ ಎಂದು ಪ್ರತಿಭಟಿಸಿದೆವು. ಅಷ್ಟರಲ್ಲಿ ತಮ್ಮಿಬ್ಬರನ್ನು ಪೊಲೀಸರು ಠಾಣೆಗೆ ಕರೆದೊಯ್ದರು. ಮೃತದೇಹ ಠಾಣೆಗೆ ಬರುತ್ತದೆ ಎಂದು ತಮ್ಮನ್ನು ಮರುದಿನ ಬೆಳಗ್ಗೆ 2 ಗಂಟೆಯವರೆಗೂ ಠಾಣೆಯಲ್ಲೇ ಕುಳ್ಳಿರಿಸಿದ್ದಾರೆ. ಬಳಿಕ, ಮೃತದೇಹ ಏನಾಯ್ತೆಂದು ಮಾಹಿತಿಯಿಲ್ಲ. ಮರುದಿನ ಬೆಳಿಗ್ಗೆ ಬನ್ನಿ ಎಂದು ತಮ್ಮನ್ನು ವಾಪಾಸು ಕರೆಸಿದ್ದಾರೆ. ಹೀಗೆ 3 ದಿನ ಠಾಣೆಗೆ ಅಲೆದಾಡುವಂತೆ ಮಾಡಿದರೂ ದೂರನ್ನು ದಾಖಲಿಸಲು ನಿರಾಕರಿಸಿದ್ದಾರೆ. ಅಲ್ಲದೆ ನಿತ್ಯಾಳ ಮೃತದೇಹದ ಬಗ್ಗೆ ಮಾಹಿತಿ ನೀಡಲೂ ನಿರಾಕರಿಸಿದ್ದಾರೆ ಎಂದು ಆರೋಪಿಸಿರುವ ಶೀಲಾ, ಈ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ನಿತ್ಯಾಳ ಮೃತದೇಹವನ್ನು ಪೊಲೀಸರು ಅಕ್ಟೋಬರ್ 4ರ ರಾತ್ರಿಯೇ ಸುಟ್ಟುಹಾಕಿದ್ದಾರೆ ಎಂದು ಮೃತ ಬಾಲಕಿಯ ಕುಟುಂಬದವರು ಆರೋಪಿಸಿರುವುದಾಗಿ ‘ನ್ಯೂಸ್‌ ಲಾಂಡ್ರಿ’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News