ಹಲಾಲ್ ಲವ್ ಸ್ಟೋರಿ: ಆರಂಭವೇ ಆಗದ ಎರಡು ಗಂಟೆಗಳ ಸಿನೆಮಾ

Update: 2020-10-19 19:30 GMT

ಭಾರತದ ಸಿನೆಮಾ ವೇದಿಕೆಗಳ ಪೈಕಿ ಮಲಯಾಳಂ ಸಿನೆಮಾ ರಂಗ ಅಥವಾ ‘ಮೋಲ್ಲಿವುಡ್’ ಹಲವು ಕಾರಣಗಳಿಗಾಗಿ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಲೇ ಬಂದಿದೆ. ಅಲ್ಲೂ ಶುದ್ಧ ಕಮರ್ಷಿಯಲ್ ಚಿತ್ರಗಳು ಧಾರಾಳವಾಗಿ ತೆರೆಯನ್ನೇರುತ್ತಲಿರುತ್ತವೆ. ಆದರೆ ಇತರಡೆಗಳಿಗೆ ಹೋಲಿಸಿದರೆ ಕಡಿಮೆ ಖರ್ಚಿನಲ್ಲಿ ವೀಕ್ಷಣೀಯ ಚಿತ್ರಗಳನ್ನು ನಿರ್ಮಿಸುವುದರಲ್ಲಿ ಮಲಯಾಳಂ ಚಿತ್ರ ರಂಗದವರದ್ದು ಸದಾ ಎತ್ತಿದ ಕೈ. ಹಾಗೆಯೇ, ಸೃಜನಶೀಲತೆ, ನಿಜ ಜೀವನದ ಜೊತೆ ಸಾಮೀಪ್ಯ, ಸಂಕೀರ್ಣ ಸಾಮಾಜಿಕ ವಾಸ್ತವಗಳ ಸಂವೇದನಾಶೀಲ ಪ್ರತಿಫಲನ, ಜ್ವಲಂತ ಸಮಸ್ಯೆಗಳ ಪರಿಣಾಮಕಾರಿ ನಿರೂಪಣೆ ಮುಂತಾದ ವಿಷಯಗಳಲ್ಲೂ ‘ಮಲ್ಲು’ಗಳು ತಮ್ಮದೇ ಆದ ಅನನ್ಯತೆಯನ್ನು ಉಳಿಸಿಕೊಂಡಿದ್ದಾರೆ. ತೀರಾ ಸೀಮಿತ ಬಜೆಟ್‌ನೊಂದಿಗೆ, ಕೇವಲ ಹಾಸ್ಯ ಹಾಗೂ ವ್ಯಂಗ್ಯ ಸಂಪನ್ನ ಕಥಾವಸ್ತುವನ್ನೇ ಬಂಡವಾಳವಾಗಿಸಿಕೊಂಡು ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ಶ್ರೇಯ ಕೂಡಾ ಮಲಯಾಳಂ ಸಿನೆಮಾರಂಗಕ್ಕೆ ಸಲ್ಲುತ್ತದೆ. ನಟನೆಗಿಂತ ಹೆಚ್ಚಾಗಿ ಸಿನೆಮಾದ ತೆರೆಮರೆಯ ವಿಭಿನ್ನ ಕ್ಷೇತ್ರಗಳಲ್ಲಿ ಹಲವು ಅಸಾಮಾನ್ಯ ಯುವ ಪ್ರತಿಭೆಗಳನ್ನು ಮೋಲ್ಲಿವುಡ್ ಪ್ರೋತ್ಸಾಹಿಸಿ ಪೋಷಿಸಿದೆ. ದೇಶದ ಬೇರೆ ಹಲವು ಭಾಗಗಳಿಗೆ ಹೋಲಿಸಿದರೆ ಹೆಚ್ಚು ಶಿಕ್ಷಿತ, ಪ್ರಬುದ್ಧ ಮತ್ತು ರಾಜಕೀಯ ಹಾಗೂ ಸಾಮಾಜಿಕ ವಿಷಯಗಳಲ್ಲಿ ಹೆಚ್ಚು ಪ್ರಜ್ಞಾವಂತ ಜನಸಾಮಾನ್ಯರು ಅಧಿಕ ಸಂಖ್ಯೆಯಲ್ಲಿರುವ ಕೇರಳದ ಸಮಾಜ ಕೂಡ ತನ್ನ ನೆಲದ ಸಿನೆಮಾಗಳ ಗುಣಮಟ್ಟದ ಮೇಲೆ ಗುಣಾತ್ಮಕ ಪರಿಣಾಮ ಬೀರಿದೆ.

ವಾರದ ಹಿಂದೆ ಬಿಡುಗಡೆಗೊಂಡ, ಝಕಾರಿಯಾ ಮುಹಮ್ಮದ್ ನಿರ್ದೇಶಿತ ‘ಹಲಾಲ್ ಲವ್ ಸ್ಟೋರಿ’ ಎಂಬ ಮಲಯಾಳಂ ಚಿತ್ರವು ತನ್ನ ಹಲವು ವಿಶೇಷತೆಗಳಿಂದಾಗಿ ವ್ಯಾಪಕವಾಗಿ ಚರ್ಚಿತವಾಗಿದೆ. ಸಿನೆಮಾ ನೋಡುವುದೇ ‘ಹರಾಮ್’ (ನಿಷಿದ್ಧ, ಪಾಪಕೃತ್ಯ) ಎಂದು ಬಹುಕಾಲದಿಂದ ನಂಬುತ್ತಾ ಬಂದಿರುವ ತುಂಬಾ ಸಂಪ್ರದಾಯವಾದಿ ಹಾಗೂ ಆದರ್ಶವಾದಿ ಮುಸ್ಲಿಮ್ ಸಂಘಟನೆಯೊಂದರ ಕೆಲವು ಸದಸ್ಯರು ಒಂದು ಸಿನೆಮಾ ಮಾಡಲು ಹೊರಟಾಗ ಹುಟ್ಟಿಕೊಳ್ಳುವ ಸನ್ನಿವೇಶಗಳ ಸರಣಿಯೇ ಚಿತ್ರದ ಕಥಾವಸ್ತು. ಪ್ರಸ್ತುತ ಸಂಘಟನೆಯೊಳಗಿನ ಪುಟ್ಟ ಒಳಗುಂಪೊಂದು ಸೀಮಿತವಾಗಿ ಆಧುನಿಕತೆಗೆ ಒಗ್ಗಿಕೊಳ್ಳುವ ತನ್ನ ಶ್ರಮದ ಭಾಗವಾಗಿ ತನ್ನದೇ ಸಂಘಟನೆಯ ಆದರ್ಶಗಳನ್ನು ಜನಪ್ರಿಯಗೊಳಿಸುವ ಧ್ಯೇಯದೊಂದಿಗೆ ಒಂದು ಗಂಟೆಯಷ್ಟು ಮಾತ್ರ ದೀರ್ಘವಿರುವ ಒಂದು ಟೆಲೆಫಿಲ್ಮ್ ಮಾಡಲು ಹೊರಡುತ್ತಾರೆ. ಕ್ರಮೇಣ ಈ ಅಪೇಕ್ಷೆ, ಪೂರ್ಣ ಪ್ರಮಾಣದ ಸಿನೆಮಾ ನಿರ್ಮಿಸುವ ಇರಾದೆಯಾಗಿ ಬೆಳೆಯುತ್ತದೆ. ಈ ವಿಷಯದಲ್ಲಿ ಸಂಘಟನೆಯೊಳಗಿಂದ ನಿರೀಕ್ಷಿತ ಪ್ರತಿರೋಧ ಎದುರಾಗುತ್ತದೆ. ಎಲ್ಲವನ್ನೂ ವಿವಿಧ ಹಂತದ ಹಾಗೂ ಹಲವು ಸುತ್ತಿನ ಔಪಚಾರಿಕ ಸಮಾಲೋಚನೆಗಳ ಬಳಿಕವೇ ತೀರ್ಮಾನಿಸುವ ಸಂಘಟನೆಯಿಂದ ಈ ರೀತಿಯ ನೂತನ ಹಾಗೂ ‘ರಾಡಿಕಲ್’ ಯೋಜನೆಯೊಂದಕ್ಕೆ ಒಪ್ಪಿಗೆ ಪಡೆಯುವುದು ಒಂದು ದೊಡ್ಡ ಸವಾಲಾಗಿ ಬಿಡುತ್ತದೆ. ಕೊನೆಗೆ ಹೇಗೂ, ಇದು ಸಂಘಟನೆಯ ಸಂದೇಶವನ್ನು ಸಮಾಜದಲ್ಲಿ ಜನಪ್ರಿಯಗೊಳಿಸುವ ಉಪಾಧಿ ಎಂದು ಅದರ ಮುಖ್ಯಸ್ಥರಿಗೆ ಮನವರಿಕೆ ಮಾಡಿಸಿ ಅವರ ಒಪ್ಪಿಗೆ ಗಳಿಸಲಾಗುತ್ತದೆ.

ಈ ರೀತಿ ಅವರು ಸಿನೆಮಾ ಎಂಬ ತೀರಾ ಹೊಸ ಲೋಕಕ್ಕೆ ಹೆಜ್ಜೆ ಇಡುತ್ತಾರೆ. ಕಷ್ಟಪಟ್ಟು ಒಂದಷ್ಟು ಹಣವನ್ನೂ ಸಂಗ್ರಹಿಸುತ್ತಾರೆ. ಇವರ ಮಡಿವಂತಿಕೆ ಇವರ ಮುಂದಿನ ಅತಿ ದೊಡ್ಡ ತೊಡಕಾಗಿ ಬಿಡುತ್ತದೆ. ಪವಿತ್ರ ಕುರ್‌ಆನ್‌ನಲ್ಲಿ ದೇವರು ‘ಹರಾಮ್’ (ನಿಷಿದ್ಧ) ಗೊಳಿಸಿರುವ ಮದ್ಯ, ಜೂಜು, ವ್ಯಭಿಚಾರ, ಅಶ್ಲೀಲತೆ ಇತ್ಯಾದಿ ಅನಿಷ್ಟಗಳಿಂದ ಸಂಪೂರ್ಣ ದೂರ ಉಳಿಯುವ ಇವರು ಅಮೆರಿಕದ ಸಾಮ್ರಾಜ್ಯಶಾಹಿತ್ವಕ್ಕೆ ಸಾಂಕೇತಿಕ ಪ್ರತಿಭಟನೆಯಾಗಿ ಪೆಪ್ಸಿ, ಕೋಕಾಕೋಲಾ ಗಳಂತಹ ಜನಪ್ರಿಯ ಪಾನಿಯಾಗಳನ್ನು ತಾವೇ ತಮ್ಮ ಮೇಲೆ ನಿಷೇಧಿಸಿಕೊಂಡಿರುತ್ತಾರೆ. ಹೀಗೆ ಅಪಥ್ಯಗಳ ದೊಡ್ಡ ಪಟ್ಟಿಯನ್ನೇ ಹೊತ್ತು ನಡೆಯುವ ಇವರು ತಮ್ಮ ಈ ಮಟ್ಟದ ಮಡಿವಂತಿಕೆಯೊಂದಿಗೆ ಸಿನೆಮಾ ರಂಗದಲ್ಲಿ ಸಕ್ರಿಯವಾಗಿರುವ ಎಲ್ಲ ಬಗೆಯ ಮಡಿವಂತಿಕೆಗಳನ್ನು ತಿರಸ್ಕರಿಸಿ ದೂರವಿಟ್ಟಿರುವ ಕಲಾವಿದರು ಮತ್ತು ತಂತ್ರಜ್ಞರ ಜೊತೆ ವ್ಯವಹರಿಸಲು ಹೊರಟಾಗ ಹೇಗಿದ್ದೀತು ಸನ್ನಿವೇಶ?

ಮೊದಮೊದಲು ಎರಡು ಕಡೆಯವರಿಗೂ ಅದೊಂದು ಹೊಸ, ಪ್ರತಿಕೂಲ ಅನುಭವವಾಗಿರುತ್ತದೆ. ಎರಡೂ ಕಡೆಯವರಿಗೆ ಇನ್ನೊಬ್ಬರು ಬೇರಾವುದೋ ಗ್ರಹದಿಂದ ಬಂದವರೆಂಬಂತೆ ಕಾಣಿಸುತ್ತಾರೆ. ತಮ್ಮ ಜೊತೆ ವ್ಯವಹರಿಸುತ್ತಿರುವವರ ಸ್ವಭಾವ, ಅಭಿರುಚಿಗಳು, ಪ್ರಾಶಸ್ತ್ಯ ಇತ್ಯಾದಿಗಳನ್ನು ಮುಂದಾಗಿ ಅಂದಾಜಿಸಲಾಗದೆ ನಿರಾಶೆ, ಅಚ್ಚರಿ, ಆಘಾತ, ರೋಷ, ಜಿಗುಪ್ಸೆ ಇತ್ಯಾದಿ ಅನುಭವಗಳಾಗುತ್ತವೆ. ಎಲ್ಲ ವಿಷಯಗಳಲ್ಲೂ ಹಲಾಲ್ (ಧರ್ಮ ಸಮ್ಮತ) ಮತ್ತು ಹರಾಮ್ (ನಿಷಿದ್ಧ) ಎಂಬ ಸೂಕ್ಷ್ಮಪ್ರಜ್ಞೆಯೊಂದಿಗೆ ಮುಂದಡಿ ಇಡುವ ಈ ಆಚಾರ ಪ್ರಿಯರಿಗೆ, ತಮಗೆ ದುಡ್ಡು ಯಾವ ಮೂಲದಿಂದ ಬರಬೇಕು, ನಟ ನಟಿಯರು ವಸ್ತ್ರ ಧಾರಣೆಯಲ್ಲಿ ಯಾವ ಮಟ್ಟದ ನೈತಿಕತೆ ಪಾಲಿಸಬೇಕು, ನಿಜಜೀವನದಲ್ಲಿ ಪತಿ ಪತ್ನಿಯರಲ್ಲದ ಕಲಾವಿದರು ಚಿತ್ರದಲ್ಲಿ ದೈಹಿಕವಾಗಿ ಪರಸ್ಪರ ಎಷ್ಟು ಹತ್ತಿರ ಬರಬಹುದು, ಸಂಭಾಷಣೆಗಳು ಎಷ್ಟು ಸಭ್ಯ ಹಾಗೂ ಸಂಭಾವಿತವಾಗಿರಬೇಕು ಇತ್ಯಾದಿ ಎಲ್ಲ ವಿಷಯಗಳಲ್ಲಿ ತಮ್ಮದೇ ಆದ ಕಟ್ಟುಪಾಡುಗಳನ್ನು ಹೊಂದಿರುತ್ತಾರೆ. ಇಂಥವರು ನಿಜ ಜೀವನದ ಜೀವಂತ ಪಾತ್ರಗಳ ಜೊತೆ ವ್ಯವಹರಿಸಬೇಕಾಗಿ ಬಂದಾಗ ಪ್ರತಿಯೊಂದು ಹಂತದಲ್ಲೂ ಎದುರಾಗುವ ಅನುಭವಗಳು ಇವರ ಮುಂದೆಯೂ ಕಲಾವಿದರ ಮುಂದೆಯೂ ಮುಜುಗರಗಳ ಸರಮಾಲೆಯನ್ನೇ ತಂದೊಡ್ಡುತ್ತವೆ. ನಿಜವಾಗಿ ಇಂತಹ ಒಂದಷ್ಟು ಫಜೀತಿ ಸನ್ನಿವೇಶಗಳ ಸಂಗ್ರಹವೇ ‘ಹಲಾಲ್ ಲವ್ ಸ್ಟೋರಿ.’

ಆದರೆ ಈ ಸನ್ನಿವೇಶಗಳು, ಅವುಗಳನ್ನು ಎದುರಿಸುತ್ತಿರುವವರಿಗೆ ಎಷ್ಟು ಪ್ರಯಾಸಕರವಾಗಿದ್ದರೂ ಸಿನೆಮಾ ಮಾಡಿದವರು ವೀಕ್ಷಕರನ್ನು ರಂಜಿಸುವ ರೀತಿಯಲ್ಲಿ ಅವುಗಳನ್ನು ಜಾಣವಾಗಿ ನಿರೂಪಿಸಿದ್ದಾರೆ. ಸಿನೆಮಾದೊಳಗೊಂದು ಸಿನೆಮಾ ಎನ್ನಬಹುದಾದ ಈ ಚಿತ್ರದಲ್ಲಿ ಕೊನೆತನಕವೂ ಒಂದು ಸಿನೆಮಾವನ್ನು ನಿರ್ಮಿಸುವ ಸಿದ್ಧತೆ ಮತ್ತು ಪ್ರಕ್ರಿಯೆಗಳು ಮಾತ್ರ ಕಾಣಸಿಗುತ್ತವೆ. ಈ ಚಿತ್ರವು ಎಲ್ಲ ಸಿನೆಮಾಗಳಲ್ಲೂ ಪೇಮ, ಪ್ರಣಯ, ವಿರಹ, ಮಿಲನ, ಹೊಡೆದಾಟ, ಹಾಡು, ನೃತ್ಯ ಇತ್ಯಾದಿಗಳ ಫಾರ್ಮುಲಾವನ್ನೇ ನಿರೀಕ್ಷಿಸುವ ಸರಾಸರಿ ವೀಕ್ಷಕರನ್ನು ನಿರಾಶರಾಗಿಸಬಹುದು. ಆದರೆ ಸಾಮಾಜಿಕ ಸೂಕ್ಷ್ಮ್ಮಗಳ ಬಗ್ಗೆ ಆಸಕ್ತರಾಗಿರುವವರು ಇದನ್ನು ವೀಕ್ಷಿಸಿ ಕಾಲಹರಣವಾಯಿತು ಎನ್ನಲಾರರು. ಒಟ್ಟು ಸಮಾಜದ ಸ್ಥಿತಿಯನ್ನು ಬಿಂಬಿಸುವ ಸಿನೆಮಾಗಳನ್ನು ಪ್ರಶಂಸಿಸುವವರು ಈ ರೀತಿ ಸಮಾಜದೊಳಗಿನ ಸಣ್ಣ ಪುಟ್ಟ ಗುಂಪುಗಳ ಒಳಲೋಕವನ್ನು ನಿರೂಪಿಸುವ ಚಿತ್ರಗಳನ್ನು ಖಂಡಿತ ಸ್ವಾಗತಿಸುತ್ತಾರೆ. ವಿಶೇಷವಾಗಿ, ತಮ್ಮ ವಿಪರೀತ ಆದರ್ಶವಾದದ ಬಲೆಯಲ್ಲಿ ಸಿಲುಕಿ ಸಮಾಜದ ವಾಸ್ತವಗಳಿಂದ ಬಹುದೂರ ಉಳಿದುಕೊಂಡ ಗೋಪುರವಾಸಿಗಳು ನೈಜ ಸಮಾಜವನ್ನು ಎದುರಿಸಬೇಕಾಗಿ ಬಂದಾಗ ಎಷ್ಟೊಂದು ಪಾಡುಪಡಬೇಕಾಗುತ್ತದೆ ಎಂಬುದನ್ನು ‘ಹಲಾಲ್ ಲವ್ ಸ್ಟೋರಿ’ಯಲ್ಲಿ ಸಾಕಷ್ಟು ಸ್ವಾರಸ್ಯಕರವಾಗಿ ನಿರೂಪಿಸಲಾಗಿದೆ.

Writer - ಯೂಸುಫ್, ಪುತ್ತಿಗೆ

contributor

Editor - ಯೂಸುಫ್, ಪುತ್ತಿಗೆ

contributor

Similar News