ಶರಣಾಗದೆ ಹೋರಾಡಿ ನಿರ್ಗಮಿಸಿದ ನಿರ್ಭೀತ ನಾಯಕ ಮಾರುತಿ ಮಾನ್ಪಡೆ

Update: 2020-10-20 15:00 GMT

ಕಾಮ್ರೇಡ್ ಮಾರುತಿ ಮಾನ್ಪಡೆ ದಲಿತ ಸಮುದಾಯದಿಂದ ಬಂದವರು. ಕಮ್ಯುನಿಸ್ಟ್ ಪಕ್ಷದ ಮುಖಂಡರಾಗಿ, ಕಾರ್ಮಿಕ, ರೈತ ಸಂಘಟನೆಗಳ ನಾಯಕತ್ವ ವಹಿಸಿಕೊಂಡು ಅವರು ನಡೆಸುತ್ತಿದ್ದ ಕೆಲಸದಲ್ಲಿ‌ ಯಾವತ್ತೂ ತಾನೊಬ್ಬ ಅಸ್ಪೃಶ್ಯ ಸಮಾಜದವನು ಎಂಬ ಹಿಂಜರಿಕೆಯ ನೆರಳು ಇಣುಕುತ್ತಿರಲಿಲ್ಲ. ನನಗಿದು ವಿಸ್ಮಯ ಮೂಡಿಸುತ್ತಿತ್ತು. ಸಾಮಾನ್ಯವಾಗಿ ದಲಿತ, ಮುಸ್ಲಿಂ ಮುಂತಾದ ಸಮುದಾಯದಿಂದ ಸಾರ್ವಜನಿಕ ಜೀವನಕ್ಕೆ ಬಂದವರಲ್ಲಿ "ತಮ್ಮ ನಾಯಕತ್ವವನ್ನು ಮುಖ್ಯವಾಹಿನಿಯ ಸಮುದಾಯಗಳ ಜನ ಒಪ್ಪಿಕೊಳ್ಳಲಿಕ್ಕಿಲ್ಲ" ಎಂಬ ಒಂದು ಹಿಂಜರಿಕೆ ಸಹಜ ಎಂಬಂತೆ ಬಂದಿರುತ್ತದೆ.‌ ಆದರೆ ಮಾನ್ಪಡೆಯವರು ಇದಕ್ಕೆ ವ್ಯತಿರಿಕ್ತವಾಗಿದ್ದರು.‌ ರೈತರ ಹೋರಾಟಗಳಲ್ಲಿ, ಕಾರ್ಮಿಕರ ಸಂಘಗಳಲ್ಲಿ ಅವರು ಅಲ್ಲಿರುವ ಮೇಲ್ಜಾತಿಯವರೂ‌ ಸೇರಿದಂತೆ ಎಲ್ಲರೂ ಅವರ ನಾಯಕತ್ವವನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ವಿಜೃಂಭಿಸಿ ಬಿಡುತ್ತಿದ್ದರು. ಇದು ನನ್ನ ಮೇಲೆ ಪ್ರಭಾವ ಬೀರಿತ್ತು. ಕೇವಲ ದಲಿತ ನಾಯಕ, ಮುಸ್ಲಿಂ ನಾಯಕರಾಗಿಯಷ್ಟೇ ಸೀಮಿತಗೊಳ್ಳುತ್ತಿದ್ದ ಆ ಸಮುದಾಯದ ಯುವಕರಿಗೆ ಆ ಮಿತಿಯನ್ನು ದಾಟಿ ಜನ ಸಮೂಹಗಳ ನಾಯಕರಾಗುವಂತೆ ಪ್ರಚೋದಿಸುತ್ತಿದ್ದೆ. ಇದು ಮಾನ್ಪಡೆಯವರ ವ್ಯಕ್ತಿತ್ವದ ಒಂದು ಪ್ರಭಾವ.

ಮಾನ್ಪಡೆಯವರಲ್ಲಿ ಭಯ ಎಂಬ ಪದಕ್ಕೆ ಅವಕಾಶವೇ ಇರಲಿಲ್ಲ. ಎಂತಹ ಭೀತಿಯ ವಾತಾವರಣದಲ್ಲಿಯೂ ಬೀದಿಯಲ್ಲಿ ನುಗ್ಗಿ ಬಿಡುತ್ತಿದ್ದರು. ಕ್ಷಣ ಮಾತ್ರದಲ್ಲಿ ಪರಿಸ್ಥಿತಿಯು ಬದಲಾಗಿ ಹೋಗುತ್ತಿತ್ತು. ನಡು ರಸ್ತೆಯಲ್ಲಿ ಹಿರಿಯ ಅಧಿಕಾರಿಗಳನ್ನು, ಮಂತ್ರಿ ಮಹೋದಯರನ್ನು ಎದೆಗೆ ಕೈ ಹಾಕಿ ತಡೆದು ನಿಲ್ಲಿಸುವ, ಹಾಗೆ ಮಾಡಿ ದಕ್ಕಿಸಿಕೊಳ್ಳುವ ತಾಕತ್ತು ಮಾನ್ಪಡೆಯವರದ್ದು. ಸಿಎಎ, ಎನ್ ಆರ್ ಸಿ ಗಲಾಟೆಯ ಸಂದರ್ಭ ರಾಜ್ಯ ಸರಕಾರ ನಿಷೇಧಾಜ್ಞೆ ಹೇರಿತ್ತು. ಪೊಲೀಸರ ಸರ್ಪಗಾವಲು ಭಯದ ವಾತಾವರಣ ನಿರ್ಮಿಸಿತ್ತು. ಗುಲ್ಬರ್ಗದಲ್ಲಿ ಪ್ರತಿಭಟನೆಗೆ ಸಿದ್ದಗೊಂಡಿದ್ದ ಮುಸ್ಲಿಮರು ಸೇರಿದಂತೆ ವಿವಿಧ ಜನ ವಿಭಾಗಗಳು ದಾರಿ ಕಾಣದೆ ಅಸಹಾಯಕತೆಯಿಂದ ನಿಂತಿದ್ದರು. ಆಗ ಎಂಟ್ರಿ ಕೊಟ್ಟ ಕಾಮ್ರೇಡ್ ಮಾನ್ಪಡೆಯವರು ಹಿರಿಯ ಪೊಲೀಸ್ ಅಧಿಕಾರಿ (ಬಹುಷ ಎಸ್ ಪಿ) ಕಚೇರಿ ಮುಂಭಾಗದಲ್ಲಿ ಪೊಲೀಸ್ ಕೋಟೆಯ ನಡುವೆ ಮೆರವಣಿಗೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ನಿಷೇಧಾಜ್ಞೆ ಉಲ್ಲಂಘಿಸಿ ಧರಣಿ ಕೂತರು. ತಕ್ಷಣ ಪರಿಸ್ಥಿತಿ ಬದಲಾಯಿತು. ಅಲ್ಲಿಂದಲೇ ಎನ್ ಆರ್ ಸಿ ವಿರುದ್ದ ಮೆರವಣಿಗೆ ಆರಂಭಗೊಂಡಿತು. ಕೊನೆಗೆ ಅದು ಇಪ್ಪತ್ತು ಸಾವಿರ ಜನರ ರ‌್ಯಾಲಿಯಾಗಿ ಗುಲ್ಬರ್ಗದಲ್ಲಿ ಇತಿಹಾಸ ಸೃಷ್ಟಿಸಿತು. ಆ ಮೇಲೆ ಕಲ್ಯಾಣ ಕರ್ನಾಟಕದಲ್ಲಿ ಹತ್ತಾರು ಬೃಹತ್ ಸಮಾವೇಶಗಳು ಮಾನ್ಪಡೆಯವರ ನೇತೃತ್ವದಲ್ಲಿ ನಡೆದವು. ಆ ಭಾಗದ ಮುಸ್ಲಿಮರ ಪಾಲಿಗಂತು ಕಾಮ್ರೇಡ್ ಮಾನ್ಪಡೆ ಎಂಬ ಹೆಸರು ನಂಬಿಕೆಯ ಬ್ರಾಂಡ್ ಎಂಬಂತಿತ್ತು. ಕೋಮುವಾದದ ಬಲಿಪಶುಗಳಾದ ಮುಸ್ಲಿಮರ ಕುರಿತು ವಿಶೇಷ ಅನುಕಂಪ ಹೊಂದಿದ್ದರು.

ಮಾನ್ಪಡೆಯವರು ಸರಕಾರಿ ಅಧಿಕಾರಿಯಾಗಿದ್ದರು. ಕ್ರಾಂತಿಯ, ಸಮ ಸಮಾಜದ ಕನವರಿಕೆ ಅವರನ್ನು ಉದ್ಯೋಗ ತ್ಯಜಿಸಿ ಕಮ್ಯುನಿಸ್ಟ್ ಪಕ್ಷ ಸೇರುವಂತೆ ಮಾಡಿತು. ಆ ಮೇಲೆ ಅವರು ನಡೆಸಿದ ಹೋರಾಟಗಳಿಗೆ ಲೆಕ್ಕ ಇಟ್ಟವರಿಲ್ಲ. ಅದು ದಲಿತರ ಮೇಲಿನ ದೌರ್ಜನ್ಯ ಇರಬಹುದು, ತೊಗರಿ ಬೆಳೆಗಾರ ರೈತರ ಸಮಸ್ಯೆಗಳಿರಬಹುದು,  ಅಸಂಘಟಿತ ಕಾರ್ಮಿಕರ ಹಕ್ಕುಗಳಿಗೆ ಸಂಬಂಧಿಸಿದ್ದಾಗಿರಬಹುದು. ಮಾನ್ಪಡೆಯವರ ನಾಯಕತ್ವ ಅಂದರೆ ಅದು ಬೇರೆ ಹೋರಾಟದಂತಲ್ಲ‌. ಅದು  ಸಾಂಪ್ರದಾಯಿಕ ಚೌಕಟ್ಟನ್ನು ಸದಾ ಮೀರುವಂತೆ, ಆಳುವವರ ಎದೆ ನಡುಗುವಂತೆ ನಡು ಬೀದಿಯಲ್ಲೇ ಜರುಗುತ್ತಿತ್ತು.‌ ಸದಾ ನಗು ಮುಖದ, ಮೆಲುದನಿಯ ಮಾತುಗಾರ, ಜನರ ಪ್ರಶ್ನೆಯಲ್ಲಿ ಮಾತ್ರ ಅಷ್ಟೇ ಕಠೋರರಾಗಿ ಬಿಡುತ್ತಿದ್ದರು. ಮಾನ್ಪಡೆ ಬೀದಿಗಿಳಿಯುತ್ತಾರೆ ಅಂದರೆ ಜಿಲ್ಲಾಡಳಿತದ ನಿದ್ರೆ ಹಾರಿಹೋಗುತ್ತಿತ್ತು.

ರೈತ, ಅಸಂಘಟಿತ ಕಾರ್ಮಿಕರ, ದಲಿತ ಸಂಘಟನೆಗಳಿಗೆ ಮಾನ್ಪಡೆ ರಾಜ್ಯ ಮಟ್ಟದಲ್ಲಿ ಮುಖಂಡರಾದರೆ, ಗುಲ್ಬರ್ಗ, ಬೀದರ್, ಯಾದಗಿರಿ ಜಿಲ್ಲೆಯ ಭಾಗದಲ್ಲಿ ಅವರು ಜನ ನಾಯಕ, ಮಾಸ್ ಲೀಡರ್. ಅಂತಹ ಒರಟು, ಜನರ ಪ್ರಶ್ನೆಗಳ ಹೋರಾಟದಲ್ಲಿನ ಭಂಡತನ ನಾನ್ಯಾರಲ್ಲೂ ಸಾಮಾನ್ಯವಾಗಿ ಕಂಡಿಲ್ಲ‌. ಆ ಭಾಗದಲ್ಲಿ ಅಂತಹ ರಿಯಲ್ ಫೈಟರ್ ಅವರು‌. ಯಾವುದನ್ನೂ, ಯಾರನ್ನೂ, ಎಷ್ಟು ದೊಡ್ಡ ಶಕ್ತಿಗಳನ್ನೂ ಕ್ಯಾರೇ ಅಂದವರಲ್ಲ. ಈ ರೀತಿಯ ಹೋರಾಟಗಳ ಮೂಲಕ ಮಾನ್ಪಡೆಯವರು ಅಲ್ಲಿನ‌ ಜನರ ಜೊತೆಗೆ ಹಗಲು ರಾತ್ರಿ ಎಂಬಂತೆ ದುಡಿದದ್ದು ಸುಮಾರು ನಾಲಕ್ಕು ದಶಕ. ಅವರು ನಡೆಸಿದ ಹೋರಾಟ, ಸಂಘಟನೆಗಳ ಲೆಕ್ಕಕ್ಕೆ ಅವರು ಯಾವತ್ತೋ ರಾಜ್ಯದ ಪ್ರಧಾನ ರಾಜಕಾರಣಿ ಆಗಬೇಕಿತ್ತು. ಶಾಸನ ಸಭೆಗಳಲ್ಲಿ ಇರಬೇಕಿತ್ತು.‌ ಆದರೆ ಅವರಿದ್ದದ್ದು ಕಮ್ಯುನಿಸ್ಟ್ ಪಕ್ಷದಲ್ಲಿ. ಅವರ ಬದ್ದತೆ ಇದ್ದದ್ದು ಸಮಾಜದ ಪರಿವರ್ತನೆಯಲ್ಲಿ. ಅವರ ಮುಂದೆ ಏನೇನೂ ಅಲ್ಲದ,  ಅಡ್ಡದಾರಿಯಲ್ಲಿ ದುಡ್ಡು ಸಂಪಾದಿಸಿದ ಪೇಲವ ಕ್ಯಾರೆಕ್ಟರ್ ಗಳು, ಜಾತಿ ಬಲದ ಸಾಹುಕಾರರು ಶಾಸಕ, ಸಂಸದರಾಗಿ ಗೂಟದ ಕಾರಿನಲ್ಲಿ ಓಡಾಡುತ್ತಿದ್ದರು. ಲೋಕಸಭೆ, ವಿಧಾನಸಭೆಗೆ ಕಮ್ಯುನಿಸ್ಟ್ ಪಕ್ಷದಿಂದ ಸತತವಾಗಿ ಸ್ಪರ್ಧಿಸಿದ್ದರೂ ಮಾನ್ಪಡೆಯವರಿಗೆ ಗೆಲುವು ದಕ್ಕಿದ್ದು ಜಿಲ್ಲಾಪಂಚಾಯತ್ ಚುನಾವಣೆಯಲ್ಲಿ ಮಾತ್ರ. ಇಂತಹ ಚುನಾವಣೆ ಸೋಲುಗಳಿಗೆ ಕುಗ್ಗದ, ನಿಂದನೆಗಳಿಗೆ, ಬೆನ್ನ ಹಿಂದಿನ‌ ಕುಹಕಗಳಿಗೆ ಜಗ್ಗದ ಭಂಡತನ ಮಾನ್ಪಡೆಯವರಲ್ಲಿತ್ತು. ಹಾಗಿಲ್ಲದಿದ್ದರೆ ಅರವತ್ತೈದರ ಇಳಿವಯಸ್ಸಿನಲ್ಲಿಯೂ ಲಾಠಿ ಬೂಟುಗಳಿಗೆ ಎದೆಯೊಡ್ಡಲು ಸಾಧ್ಯವಿರಲಿಲ್ಲ. ಆ ಭಂಡತನ, ಸೆಣಸಾಟ ಕೊರೋನ ಸೋಂಕಿನ ವಿರುದ್ದವೂ ತೋರಿದರು. ಆದರೆ ಸೋತುಹೋದರು.

ತಿಂಗಳ ಹಿಂದೆ ಮಾನ್ಪಡೆಯವರು ಮಂಗಳೂರಿಗೆ ಬಂದಿದ್ದರು. ಅದು ಬಂಟ್ವಾಳದಲ್ಲಿ ರೈತ ಸಂಘಟನೆಗಳು ಜೊತೆ ಸೇರಿ‌ ರೈತ ವಿರೋಧಿ ಕಾಯ್ದೆ ಕುರಿತಾದ ಸಣ್ಣ ಸಭೆ. ಕೊರೋನಾದ ಈ ಸಂದರ್ಭ ಮಾನ್ಪಡೆಯಂತಹ ನಾಯಕ ಬರಲೇಬೇಕಾದ ತುರ್ತೇನು ಅಲ್ಲಿರಲಿಲ್ಲ. ಆದರೆ ಮಾನ್ಪಡೆಯವರ ಬದ್ದತೆ ಅಂತಹದ್ದು. ಏಳು ನೂರು ಕಿ ಮೀ ದೂರದ ಗುಲ್ಪರ್ಗದಿಂದ ಬಸ್ಸು ಹತ್ತಿ ಒಂದಿಡೀ ದಿನ ಪ್ರಯಾಣ ಮಾಡಿ ಮಂಗಳೂರು ತಲುಪಿದ್ದರು. ಮರು ದಿನ ಬೆಳಿಗ್ಗೆ ಬೆಂಗಳೂರಿಗೆ ವಿಮಾನ ಹತ್ತಿಸಲು ನಾನೇ ಹೋಗಿದ್ದೆ. ಬೆಳಿಗ್ಗೆ ಟಿಫನ್ ಮಾಡುತ್ತಾ, ಕೊರೋನ ಸಂದರ್ಭ ಬಸ್ಸು ಪ್ರಯಾಣದ ಅಪಾಯದ ಕುರಿತು ನಾನು ಎಚ್ಚರಿಸಿದ್ದೆ. ಆಗು ನಗುತ್ತಾ ಜೇಬಿನಿಂದ ಸ್ಯಾನಿಟೈಸರ್ ತೆಗೆದು "ಇದನ್ನು ಬಸ್ಸಿನ ಸೀಟಿಗೆ ಪೂರ್ಣವಾಗಿ ಮೂರು ಸರ್ತಿ ಸಿಂಪಡಿಸಿದ್ದೇನೆ" ಎಂದಿದ್ದರು. "ಕಮ್ಯುನಿಸ್ಟ್ ಪಕ್ಷ ಕಟ್ಟುವ ಕೆಲಸದಲ್ಲಿ ನಿರಾಶರಾಗದಿರಿ, ಮುನ್ನುಗ್ಗಿ ಕೆಲಸ ಮಾಡಿ, ಬದಲಾವಣೆ ಬಂದೇ ಬರುತ್ತದೆ" ಎಂದು ಪ್ರೀತಿಯಿಂದ ಆತ್ಮ ವಿಶ್ವಾಸ ತುಂಬುವ ಮಾತಾಡಿದ್ದರು.

ಅಲ್ಲಿಂದ ಬೆಂಗಳೂರು ತಲುಪಿದ ಕಾಮ್ರೇಡ್ ಮಾನ್ಪಡೆ ಆ ನಂತರ ಸತತ ಹದಿನೈದು ದಿನ ರೈತ ಸಂಘಟನೆಗಳ ಹೋರಾಟದಲ್ಲಿ ಬೆರೆತು ಹೋದರು. ಹೋರಾಟಕ್ಕೆ ಸಂಘರ್ಷದ ಸ್ವರೂಪ ನೀಡುವಲ್ಲಿ ಶ್ರಮಿಸಿದ್ದರು. ಅಲ್ಲಿಂದ ತನ್ನ ಕರ್ಮಭೂಮಿ ಗುಲ್ಬರ್ಗಕ್ಕೆ ತೆರಳಿದವರು ಕೋವಿಡ್ ಗೆ ತುತ್ತಾದರು.

ಮಾನ್ಪಡೆಯವರ ಸಮರಶೀಲತೆ, ಬದ್ದತೆಯ ಪರೀಕ್ಷೆ ಸೊಲ್ಲಾಪುರದ ಅಶ್ವಿನಿ ಆಸ್ಪತ್ರೆಯಲ್ಲೂ ಮುಂದುವರಿದಿತ್ತು.‌  ಅಕ್ಸಿಜನ್ ಮಾಸ್ಕ್ ತೊಟ್ಟು ಗಂಭೀರಾವಸ್ಥೆಯಲ್ಲಿ ಐಸಿಯು ನಲ್ಲಿ ಮಲಗಿದ್ದರೂ ಮೊಬೈಲ್ ಫೋನ್ ನಲ್ಲಿ ತಾನು ಜವಾಬ್ದಾರಿ ಹೊತ್ತ ಕಾರ್ಮಿಕ ಸಂಘಟನೆಗಳ ಮೀಟಿಂಗ್ ಗಳನ್ನು ನಡೆಸಿ ಮಾರ್ಗದರ್ಶನ ನೀಡುತ್ತಿದ್ದರು. ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳ ಇತ್ಯರ್ಥ್ಕಕ್ಕೆ ಒತ್ತಡ ಹೇರುತ್ತಿದ್ದರು. ಕೊನೆಗೆ ಬಲವಂತವಾಗಿ ಮೊಬೈಲ್ ಕಿತ್ತುಕೊಂಡಾಗ ಬಹಳ ಸಿಟ್ಟು ಮಾಡಿಕೊಂಡಿದ್ದರು‌. ದುಷ್ಟ ವ್ಯವಸ್ಥೆಯ ವಿರುದ್ದ ಯಾವ ಭಯವನ್ನೂ ಲೆಕ್ಕಿಸದೆ ಕಾಲರ್ ಪಟ್ಟಿ ಹಿಡಿದು ನಡು ಬೀದಿಯಲ್ಲಿ ಬಡಿದಾಡಿದಂತೆ, ಕೊರೋನವನ್ನೂ ರಾಜಿಯಿಲ್ಲದೆ ಎದುರಿಸಲು ನೋಡಿದರು.‌ ದಮನಿತರ ಪರವಾಗಿ ಪ್ರಭುತ್ವದ ವಿರುದ್ದದ ಹೋರಾಟದಲ್ಲಿ‌ ಕೊರೋನ ಒಡ್ಡುವ ಅಡೆತಡೆಗಳನ್ನು ಲೆಕ್ಕಿಸಲಾರೆ ಎಂಬಂತೆ ವರ್ತಿಸಿದರು. ಸೋತು ಹೋದರು. ಶರಣಾಗಲಿಲ್ಲ.

Writer - ಮುನೀರ್ ಕಾಟಿಪಳ್ಳ

contributor

Editor - ಮುನೀರ್ ಕಾಟಿಪಳ್ಳ

contributor

Similar News