ಜಮ್ಮುಕಾಶ್ಮೀರದಲ್ಲಿ ಎನ್‌ಕೌಂಟರ್: ಓರ್ವ ಉಗ್ರ ಹತ

Update: 2020-10-20 16:10 GMT

ಶ್ರೀನಗರ, ಅ. 18: ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆ ಸಂಪೂರ್ಣ ರಾತ್ರಿ ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಇದರೊಂದಿಗೆ ಭದ್ರತಾ ಪಡೆ ಕೆಲವು ದಿನಗಳಿಂದ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಮೃತಪಟ್ಟ ಉಗ್ರರ ಸಂಖ್ಯೆ 2ಕ್ಕೆ ತಲುಪಿದೆ. ಉಗ್ರರು ಅಡಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆ ಸೋಮವಾರ ಬೆಳಗ್ಗೆ ಶೋಪಿಯಾನ್‌ನ ಝೈನಪೋರಾದ ಮೆಲ್‌ಹುರಾವನ್ನು ಸುತ್ತುವರಿಯಿತು ಹಾಗೂ ಶೋಧ ಕಾರ್ಯಾಚರಣೆ ನಡೆಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಶೋಧ ಕಾರ್ಯಾಚರಣೆ ಎನ್‌ಕೌಂಟರ್‌ಗೆ ತಿರುಗಿತು ಎಂದು ಅವರು ತಿಳಿಸಿದ್ದಾರೆ. ಭದ್ರತಾ ಪಡೆ ಯೋಧರು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಮಂಗಳವಾರ ಬೆಳಗ್ಗೆ ಓರ್ವ ಉಗ್ರ ಹತನಾದ ಎಂದು ಸೇನಾಧಿಕಾರಿ ತಿಳಿಸಿದ್ದಾರೆ.

ಎನ್‌ಕೌಂಟರ್ ನಡೆದ ಸ್ಥಳದಿಂದ ಎ.ಕೆ. ರೈಫಲ್ ಹಾಗೂ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತರಾದ ಉಗ್ರರ ಗುರುತು ಹಾಗೂ ಅವರು ಸಂಬಂಧಿಸಿದ ಸಂಘಟನೆ ಬಗ್ಗೆ ಇದುವರೆಗೆ ದೃಢಪಟ್ಟಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News