ಪ್ರಧಾನಿ ಭಾಷಣ ಆರಂಭಿಸಿದ ನಿಮಿಷಗಳಲ್ಲೇ 4,500 ‘ಡಿಸ್‌ಲೈಕ್’

Update: 2020-10-20 17:40 GMT

ಹೊಸದಿಲ್ಲಿ, ಅ. 20: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮಾಡಿದ ಭಾಷಣಕ್ಕೆ ನಿಮಿಷಗಳಲ್ಲೇ 4,500 ‘ಡಿಸ್‌ಲೈಕ್’ ಬಂದ ಹಿನ್ನೆಲೆಯಲ್ಲಿ ಮುಜುಗರಗೊಂಡ ಬಿಜೆಪಿ ತನ್ನ ಯುಟ್ಯೂಬ್ ಚಾನೆಲ್‌ನ ‘ಡಿಸ್‌ಲೈಕ್’ ಬಟನ್ ಅನ್ನು ಆಫ್ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 6 ಗಂಟೆಗೆ ದೇಶದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಕೊರೋನ ಸೋಂಕು ನಿಯಂತ್ರಣದ ಬಗ್ಗೆ ತಿಳಿಸಿದ್ದರು. ಅಲ್ಲದೆ, ಕೊರೋನ ವಿಚಾರದಲ್ಲಿ ಈ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ದೇಶ ಉತ್ತಮ ಸ್ಥಿತಿಯಲ್ಲಿ ಇದೆ ಎಂದು ಹೇಳಿದ್ದರು. ಆದರೆ, ಈ ಭಾಷಣ ಆರಂಭವಾದ ಕೆಲವೇ ನಿಮಿಷಗಳಲ್ಲಿ 4,500 ‘ಡಿಸ್‌ಲೈಕ್’ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಮುಜುಗರ ಎದುರಿಸಿತು. ಕೂಡಲೇ ಬಿಜೆಪಿ ತನ್ನ ಪಕ್ಷದ ಯುಟ್ಯೂಬ್ ಚಾನೆಲ್‌ನ ‘ಡಿಸ್‌ಲೈಕ್’ ಬಟನ್ ಆಫ್ ಮಾಡಿದೆ. ಬಿಜೆಪಿ ತನ್ನ ಯುಟ್ಯೂಬ್‌ನ ‘ಡಿಸ್‌ಲೈಕ್’ ಬಟನ್ ಆಫ್ ಮಾಡಿರುವ ಬಗ್ಗೆ ಟ್ವಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಈ ರೀತಿ ಮುಜುಗರ ಎದುರಿಸುತ್ತಿರುವುದು ಇದು ಮೊದಲನೇ ಸಲ ಅಲ್ಲ. ಎರಡು ತಿಂಗಳ ಹಿಂದೆ ಪ್ರಧಾನಿ ಮೋದಿ ಅವರು ಮಾಡಿದ ‘ಮನ್ ಕಿ ಬಾತ್’ನಲ್ಲಿ ಕೊರೋನ ಸಾಂಕ್ರಾಮಿಕ ರೋಗದ ನಡುವೆ ಪ್ರವೇಶ ಪರೀಕ್ಷೆ ನಡೆಸುವ ವಿಷಯವನ್ನು ಕೈಬಿಟ್ಟು ಮಾತನಾಡಿದ್ದರು. ಇದು  ವಿದ್ಯಾರ್ಥಿಗಳಲ್ಲಿ ಅಸಾಮಾಧಾನ ಉಂಟು ಮಾಡಿತ್ತು. ಇದರಿಂದ ಪ್ರಧಾನಿ ಅವರ ಭಾಷಣಕ್ಕೆ ‘ಡಿಸ್‌ಲೈಕ್’ ಬಿದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News