ವೈದ್ಯನ ಥಳಿಸಿ ಹತ್ಯೆ ಪ್ರಕರಣ: ಓರ್ವ ದೋಷಿಗೆ ಮರಣದಂಡನೆ, ಉಳಿದ 24 ಮಂದಿಗೆ ಜೀವಾವಧಿ

Update: 2020-10-20 17:45 GMT

ಗುವಾಹತಿ, ಅ. 20: ಕಳೆದ ವರ್ಷ 73 ವರ್ಷದ ವೈದ್ಯನನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಚಹಾ ತೋಟದ ಕಾರ್ಮಿಕನೋರ್ವನಿಗೆ ಮರಣದಂಡನೆ ಹಾಗೂ ಇತರ 24 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಅಸ್ಸಾಂನ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ವೈದ್ಯನ ಹತ್ಯೆಗೆ ಸಂಬಂಧಿಸಿ ಜೊರ್ಹಾತ್‌ನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಅಕ್ಟೋಬರ್ 13ರಂದು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಅನ್ವಯ 25 ಮಂದಿಯನ್ನು ದೋಷಿಗಳು ಎಂದು ಪರಿಗಣಿಸಿತ್ತು. ಪ್ರಕರಣದ ಪ್ರಧಾನ ಆರೋಪಿಯಾಗಿರುವ ಸಂಜಯ್ ರಾಜೋವರ್‌ನಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ತೀರ್ಪನ್ನು ಗುವಾಹಟಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ ಎಂದು ಸಂಜಯ್ ರಾಜೋವರ್‌ನ ಕುಟುಂಬ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿ 32 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇವರಲ್ಲಿ 6 ಮಂದಿಯನ್ನು ನ್ಯಾಯಾಲಯ ಈ ಹಿಂದೆ ಖುಲಾಸೆಗೊಳಿಸಿತ್ತು. ಇನ್ನೋರ್ವ ಪ್ರಕರಣದ ವಿಚಾರಣೆಯ ಸಂದರ್ಭ ಮೃತಪಟ್ಟಿದ್ದ. ಜೊರಹಾತ್ ಜಿಲ್ಲೆಯ ಟಿಯೋಕ್ ಕಾಫಿ ತೋಟದ ಆಸ್ಪತ್ರೆಯ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ದೇಬೇನ್ ದತ್ತಾ ಅವರನ್ನು ಕಳೆದ ವರ್ಷ ಆಗಸ್ಟ್ 31ರಂದು ಗುಂಪೊಂದು ಥಳಿಸಿ ಹತ್ಯೆಗೈದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News