ಉತ್ತರ ಬಂಗಾಳದಲ್ಲಿ ಬಿಜೆಪಿಗೆ ಹೊಡೆತ ನೀಡಲಿರುವ ಎನ್‍ಡಿಎ ತ್ಯಜಿಸುವ ಗೋರ್ಖಾ ಜನಮುಕ್ತಿ ಮೋರ್ಚಾ ನಿರ್ಧಾರ

Update: 2020-10-22 07:34 GMT
ಬಿಮಲ್ ಗುರುಂಗ್

ಕೊಲ್ಕತ್ತಾ: ಮೂರು ವರ್ಷ ಭೂಗತರಾಗಿದ್ದುಕೊಂಡು ಬುಧವಾರ ಕೊಲ್ಕತ್ತಾದಲ್ಲಿ ಕಾಣಿಸಿಕೊಂಡ ಗೋರ್ಖಾ ಜನಮುಕ್ತಿ ಮೋರ್ಚಾ ಸ್ಥಾಪಕ ಬಿಮಲ್ ಗುರುಂಗ್, ತಮ್ಮ ಪಕ್ಷ ಬಿಜೆಪಿ ನೇತೃತ್ವದ ಎನ್‍ಡಿಎ ಜತೆಗಿನ ಮೈತ್ರಿ ಮುರಿಯಲಿದೆ ಹಾಗೂ ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ  ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಎಂದು ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

"ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಮಮತಾ ಬ್ಯಾನರ್ಜಿ ಮೂರನೇ ಬಾರಿ  ಮುಖ್ಯಮಂತ್ರಿಯಾಗಬೇಕು,'' ಎಂದಿರುವ ಅವರು ತಮ್ಮ ಪಕ್ಷ ಹಿಂದೆ ಬಿಜೆಪಿ ವಿಜಯಕ್ಕೆ ಸಹಾಯ ಮಾಡಿದ್ದರೂ ಕೇಂದ್ರ ಸರಕಾರ ತನ್ನ ಭರವಸೆಗಳನ್ನು ಈಡೇರಿಸಿಲ್ಲ. ಪ್ರಧಾನಿ ಹಾಗೂ ಗೃಹ ಸಚಿವರ ಜತೆ ಹಲವು ಸಭೆಗಳನ್ನು ನಡೆಸಿದ ಹೊರತಾಗಿಯೂ ಕಳೆದ ಆರು ವರ್ಷಗಳಲ್ಲಿ ನಮಗೆ ನೀಡಲಾದ ಯಾವುದೇ ಆಶ್ವಾಸನೆ ಈಡೇರಿಸಲಾಗಿಲ್ಲ, ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾವು ಪ್ರತಿಯೊಂದು ಸಂಘಟನೆಗೆ ನೀಡಿದ್ದ ಆಸ್ವಾಸನೆಗಳನ್ನು ಈಡೇರಿಸಿದ್ದಾರೆ,'' ಎಂದು ಅವರು ಹೇಳಿದ್ದರೆ.

ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಳ್ಳಲು ಗೋರ್ಖಾ ಜನಮುಕ್ತಿ ಮೋರ್ಚಾದ ನಿರ್ಧಾರ ಮುಖ್ಯವಾಗಿ ಉತ್ತರ ಬಂಗಾಳದಲ್ಲಿ ಬಿಜೆಪಿಗೆ ಹಿನ್ನಡೆಯುಂಟು ಮಾಡಲಿದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕಳೆದ 12 ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಬಿಜೆಪಿ ಮಿತ್ರ ಪಕ್ಷವಾಗಿದ್ದ ಗೋರ್ಖಾ ಜನಮುಕ್ತಿ ಮೊರ್ಚಾ ಉತ್ತರ ಬಂಗಾಳದಲ್ಲಿ ಬಿಜೆಪಿ ಗೆಲುವಿನ ಹಿಂದೆ ಪ್ರಮುಖ ಪಾತ್ರ ವಹಿಸಿದೆ. 2009ರಲ್ಲಿ ದಾರ್ಜೀಲಿಂಗ್ ಕ್ಷೇತ್ರದಿಂದ ಹಿರಿಯ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಗೆದ್ದಿದ್ದರೆ, 2014ರಲ್ಲಿ ಎಸ್ ಎಸ್ ಅಹ್ಲುವಾಲಿಯಾ ಅವರು ಫುಟ್ಬಾಲ್ ಆಟಗಾರ ಭೈಚುಂಗ್ ಭುಟಿಯಾ ಅವರನ್ನು ಸೋಲಿಸಿದ್ದರು. 2019ರಲ್ಲಿ ಈ ಕ್ಷೇತ್ರದಿಂದ ರಾಜು ಬಿಸ್ಟ ಅವರು ನಾಲ್ಕು ಲಕ್ಷಕ್ಕೂ ಅಧಿಕ ಅಂತರದಿಂದ ಗೆಲುವು ಸಾಧಿಸಿದ್ದರು.  

2016 ವಿಧಾನಸಭಾ ಚುನಾವಣೆಯಲ್ಲಿ ಮೋರ್ಚಾ ದಾರ್ಜೀಲಿಂಗ್ನಲ್ಲಿ ಆರು ಕ್ಷೇತ್ರಗಳಲ್ಲಿ  ಜಯ ಗಳಿಸಿ ಬಿಜೆಪಿಗೆ ದೋರ್ಸ್ ಪ್ರಾಂತ್ಯದಲ್ಲಿ ಒಂದು ಕ್ಷೇತ್ರದಲ್ಲಿ ಜಯ ಗಳಿಸಲು ಸಹಾಯ ಮಾಡಿತ್ತು. ಉತ್ತರ ಬಂಗಾಳದ 16 ಕ್ಷೇತ್ರಗಳಲ್ಲಿ ಮೋರ್ಚಾದ ಪ್ರಭಾವ ಬಹಳಷ್ಟಿದ್ದು ಈ ಪ್ರದೇಶ ಕಳೆದ ಲೋಕಸಭಾ ಚುನಾವಣೆ ನಂತರ ಬಿಜೆಪಿ ಭದ್ರಕೋಟೆಯಾಗಿ ಮಾರ್ಪಟ್ಟಿದೆ. ಇದೀಗ ಮೋರ್ಚಾ ತಾನು ಎನ್‍ಡಿಎಯಿಂದ ಹೊರಬರುವುದಾಗಿ ಹೇಳಿರುವುದರಿಂದ ಮುಂದಿನ ಚುನಾವಣೆಯಲ್ಲಿ ಉತ್ತರ ಬಂಗಾಳದಲ್ಲಿ ಅದು ಖಂಡಿತವಾಗಿಯೂ ಬಿಜೆಪಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News