ವಂಚನೆ ಪ್ರಕರಣ: ಬಿಜೆಪಿ ನಾಯಕ ಕುಮ್ಮನಮ್ ರಾಜಶೇಖರನ್ ವಿರುದ್ಧ ಎಫ್‌ಐಆರ್ ದಾಖಲು

Update: 2020-10-22 16:07 GMT

ತಿರುವನಂತಪುರ, ಅ. 22: ವಂಚನೆಯ ಆರೋಪದಲ್ಲಿ ಮಿಝೋರಾಂನ ಮಾಜಿ ರಾಜ್ಯಪಾಲ ಹಾಗೂ ಬಿಜೆಪಿ ಹಿರಿಯ ನಾಯಕ ಕುಮ್ಮನಮ್ ರಾಜಶೇಖರನ್ ಹಾಗೂ ಇತರರ ವಿರುದ್ಧ ಕೇರಳ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದ್ದಾರೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ಕುಮ್ಮನಮ್ ರಾಜಶೇಖರನ್, ಇದು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ಅರುನ್ಮೂಲದ ನಿವಾಸಿ ಸಿ.ಆರ್. ಹರಿಕೃಷ್ಣನ್ ಈ ದೂರು ದಾಖಲಿಸಿದ್ದಾರೆ.

ಪಾಲಕ್ಕಾಡ್‌ನಲ್ಲಿ ತೆರೆಯುವ ಕಾರ್ಖಾನೆಯಲ್ಲಿ ಪಾಲುದಾರರನ್ನಾಗಿ ಮಾಡುವುದಾಗಿ ನೆಪ ಹೇಳಿ ಪಡೆದುಕೊಂಡ 35 ಲಕ್ಷ ರೂಪಾಯಿಯನ್ನು ರಾಜಶೇಖರನ್ ಅವರ ಆಪ್ತ ಸಹಾಯಕ ಪ್ರವೀಣ್ ಹಾಗೂ ವಿಜಯನ್ ವಂಚಿಸಿರುವುದಾಗಿ ಹರಿಕೃಷ್ಣನ್ ದೂರಿನಲ್ಲಿ ಆರೋಪಿಸಿದ್ದಾರೆ. ಕುಮ್ಮನಮ್ ರಾಜಶೇಖರನ್ ಅವರು ರಾಜ್ಯಪಾಲರಾಗಿದ್ದಾಗ ತಾನು ಪ್ರವೀಣ್‌ಗೆ 35 ಲಕ್ಷ ರೂಪಾಯಿ ಹಸ್ತಾಂತರಿಸಿದ್ದೇನೆ ಎಂದು ದೂರಿನಲ್ಲಿ ಹೇಳಲಾಗಿದೆ. ಭರವಸೆ ನೀಡಲಾಗಿದ್ದ ಕಾರ್ಖಾನೆ ಕಾರ್ಯರೂಪಕ್ಕೆ ಬಂದ ಬಳಿಕ ಹರಿಕೃಷ್ಣ ಅವರು ಹೂಡಿಕೆ ಹಿಂದಿರುಗಿಸುವಂತೆ ಬೇಡಿಕೆ ಇರಿಸಿದ್ದರು. ಆದರೆ, ಹಣ ಹಿಂದಿರುಗಿಸಲು ಪ್ರವೀಣ್ ಹಾಗೂ ಆತನ ಪಾಲುದಾರ ವಿಜಯನ್ ನಿರಾಕರಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹರಿಕೃಷ್ಣನ್ ಅವರು ಕೆಲವು ಬಿಜೆಪಿ ನಾಯಕರನ್ನು ಭೇಟಿಯಾಗಿ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು. ತರುವಾಯ ಬಿಜೆಪಿ ಅನಿವಾಸಿ ಭಾರತೀಯರ ಘಟಕದ ಅಧ್ಯಕ್ಷ ಹರಿಕುಮಾರ್ ಮಧ್ಯಪ್ರವೇಶಿಸಿದ್ದರು. ಹಲವು ಸುತ್ತಿನ ಮಾತುಕತೆ ಬಳಿಕ ಅವರಿಬ್ಬರು 6.25 ಲಕ್ಷ ರೂಪಾಯಿ ಹಿಂದಿರುಗಿಸಿದ್ದರು. ಉಳಿದ 28.75 ಲಕ್ಷ ಹಿಂದಿರುಗಿಸಲು ಪ್ರವೀಣ್ ಹಾಗೂ ವಿಜಯನ್ ನಿರಾಕರಿಸುತ್ತಿದ್ದ ಹಿನ್ನೆಲೆಯಲ್ಲಿ ತಾನು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಉದ್ಯಮ ನಡೆಸಲು ಹೂಡಿಕೆ ಮಾಡುವುದಕ್ಕೆ ಉತ್ತೇಜನ ನೀಡುತ್ತಿದ್ದ ಕುಮ್ಮನಮ್ ರಾಜಶೇಖರನ್ ಉಪಸ್ಥಿತಿಯಲ್ಲಿ ನಾನು ಪ್ರವೀಣ್‌ನನ್ನು ಭೇಟಿಯಾದೆ ಎಂದು ಹರಿಕೃಷ್ಣನ್ ದೂರಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News