ಎಲ್ಗರ್ ಪರಿಷತ್ ಪ್ರಕರಣ: ಭಾಷಣ ನಡೆಯುತ್ತಿದ್ದ ಸ್ಥಳಕ್ಕೆ ಪ್ರವೇಶಿಸಿರಲಿಲ್ಲ ಎಂದ ಸಾಕ್ಷಿಗಳು

Update: 2020-10-22 16:15 GMT

ಮುಂಬೈ, ಅ. 22: ಪುಣೆಯ ಶನಿವಾರ್ ವಾಡಾದಲ್ಲಿ 2017 ಡಿಸೆಂಬರ್ 31ರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದ್ವೇಷಭಾಷಣದ ಆರೋಪಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದೆ. ಆದರೆ, ದೊಡ್ಡ ಪ್ರಮಾಣದಲ್ಲಿ ಜನಸಂದಣಿ ಇದ್ದ ಕಾರಣಕ್ಕಾಗಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನಾವು ಹೋಗಲಿಲ್ಲ ಎಂದು ಹೆಚ್ಚಿನ ಸಾಕ್ಷಿಗಳು ಹೇಳಿದ್ದಾರೆ.

ಭಾಷಣಗಳು ಉತ್ತೇಜನಕಾರಿಯಾಗಿತ್ತು ಎಂದು ಇಬ್ಬರು ಸಾಕ್ಷಿಗಳು ಹೇಳಿದ್ದಾರೆ. ಇನ್ನೋರ್ವ ಸಾಕ್ಷಿ, ಕಬೀರ್ ಕಲಾ ಮಂಚ್‌ನ ಸದಸ್ಯರು ಪ್ರಸ್ತುತಪಡಿಸಿದ ಹಾಡು ಉತ್ತೇಜನಕಾರಿಯಾಗಿತ್ತು ಎಂದು ತಿಳಿಸಿದ್ದಾರೆ. ಎನ್‌ಐಎ ಇದುವರೆಗೆ 48 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿದೆ. ಇದರಲ್ಲಿ ಪ್ರಾಧ್ಯಾಪಕರು, ಹೋರಾಟಗಾರರು ಹಾಗೂ ವಕೀಲರು ಸೇರಿದ್ದಾರೆ. 8 ಮಂದಿಯ ವಿರುದ್ಧ ಅಕ್ಟೋಬರ್ 9ರಂದು ಸಲ್ಲಿಸಲಾಗಿದ್ದ 10,000 ಪುಟಗಳ ಆರೋಪ ಪಟ್ಟಿಯಲ್ಲಿ ಈ ಹೇಳಿಕೆ ಸೇರಿದೆ. ಈ 48 ಹೇಳಿಕೆಗಳಲ್ಲಿ 13 ಸಾಕ್ಷಿಗಳ ಹೇಳಿಕೆಗಳನ್ನು ಭೀಮಾ ಕೋರೆಗಾಂವ್ ಯುದ್ಧದ 200ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಡೆದ ಎಲ್ಗರ್ ಪರಿಷತ್ ಕಾರ್ಯಕ್ರಮಕ್ಕೆ ಸಂಬಂಧಿಸಿ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News