ಸಂಸತ್ ಸಮಿತಿ ಮುಂದೆ ಹಾಜರಾಗದ ಅಮೆಝಾನ್

Update: 2020-10-23 14:47 GMT

ಹೊಸದಿಲ್ಲಿ, ಅ. 23: ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ-2019ನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ ಮುಂದೆ ಹಾಜರಾಗಲು ಅಮೆಝಾನ್ ನಿರಾಕರಿಸಿದೆ. ಇದು ಸಂಸತ್ತಿನ ಹಕ್ಕುಚ್ಯುತಿಗೆ ಸಮಾನವಾದುದು ಎಂದು ಸಂಸತ್ತಿನ ಮೂಲಗಳು ತಿಳಿಸಿವೆ. ಅಮೆಝಾನ್ ಅಕ್ಟೋಬರ್ 28ರಂದು ಸಮಿತಿ ಮುಂದೆ ಹಾಜರಾಗದೇ ಇದ್ದರೆ, ಅದರ ವಿರುದ್ಧ ಬಲವಂತದ ಕ್ರಮಗಳನ್ನು ಆರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ನಮ್ಮ ವಿಷಯ ತಜ್ಞರು ವಿದೇಶದಲ್ಲಿ ಇದ್ದಾರೆ ಎಂದು ಅಮೆಝಾನ್ ಹೇಳಿದೆ. ಅಲ್ಲದೆ, ಸಮಿತಿ ಮುಂದೆ ಹಾಜರಾಗದೇ ಇರುವುದಕ್ಕೆ ಪ್ರಯಾಣದ ಅಪಾಯದ ಕಾರಣಗಳನ್ನು ಉಲ್ಲೇಖಿಸಿದೆ. ಕಾಂಗ್ರೆಸ್‌ನ ಕಳವಳದ ಹಿನ್ನೆಲೆಯಲ್ಲಿ ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ-2019ನ್ನು ಪರಿಶೀಲಿಸುತ್ತಿರುವ ಸಮಿತಿ ಈ ಬಗ್ಗೆ ಪರಿಶೀಲನೆ ನಡೆಸಲು ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ ಸೇರಿದಂತೆ ಎಲ್ಲ ಸಂಸ್ಥೆಗಳಿಗೆ ತನ್ನ ಮುಂದೆ ಹಾಜರಾಗುವಂತೆ ಆದೇಶ ನೀಡಿತ್ತು. ‘‘ಅಕ್ಟೋಬರ್ 28ರಂದು ಸಮಿತಿ ಮುಂದೆ ಹಾಜರಾಗಲು ಅಮೆಝಾನ್ ನಿರಾಕರಿಸಿದೆ. ಒಂದು ವೇಳೆ ಕಂಪೆನಿಯ ಪರವಾಗಿ ಯಾರೊಬ್ಬರೂ ಸಮಿತಿ ಮುಂದೆ ಹಾಜರಾಗದೇ ಇದ್ದರೆ, ಅದು ಹಕ್ಕುಚ್ಯುತಿಗೆ ಸಮಾನವಾದುದು’’ ಎಂದು ಸಮಿತಿಯ ಮುಖ್ಯಸ್ಥರಾಗಿರುವ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.

ಅಮೆಝಾನ್ ಸಮಿತಿ ಮುಂದೆ ಹಾಜರಾಗದೇ ಇದ್ದರೆ, ಹಕ್ಕುಚ್ಯುತಿ ನೋಟಿಸ್ ರವಾನಿಸಲು ಸಮಿತಿ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ. ಲೋಕಸಭೆಯ ಸೆಕ್ರೇಟರಿಯೇಟ್ ಜಾರಿಗೊಳಿಸಿದ ನೋಟಿಸ್‌ನ ಪ್ರಕಾರ ಟ್ವಿಟ್ಟರ್ ಅಧಿಕಾರಿಗಳು ಅಕ್ಟೋಬರ್ 28ರಂದು ಸಮಿತಿ ಮುಂದೆ ಹಾಜರಾಗಲಿದ್ದಾರೆ. ಅಕ್ಟೋಬರ್ 29ರಂದು ಹಾಜರಾಗಲು ಗೂಗಲ್ ಹಾಗೂ ಪೇಟಿಎಂಗೆ ಸೂಚಿಸಲಾಗಿದೆ. ಕಳೆದ ವರ್ಷ ಸಂಸತ್ತಿನಲ್ಲಿ ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ-2019ನ್ನು ಪರಿಚಯಿಸಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಈ ಮಸೂದೆ ಅನಾಮಿಕ ವೈಯಕ್ತಿಕ ಹಾಗೂ ವೈಯಕ್ತಿಕ ಅಲ್ಲದ ದತ್ತಾಂಶಗಳನ್ನು ಫೇಸ್‌ಬುಕ್, ಗೂಗಲ್ ಹಾಗೂ ಇತರ ಸಂಸ್ಥೆಗಳಲ್ಲಿ ಕೇಳಲು ಅಧಿಕಾರ ನೀಡುತ್ತದೆ ಎಂದು ಹೇಳಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News