ಸರ್ಜಿಕಲ್, ಎನ್-95 ಮಾಸ್ಕ್‌ಗಳು ಕೆಮ್ಮಿನಿಂದ ಕೋವಿಡ್ ಪ್ರಸಾರವನ್ನು ತಗ್ಗಿಸುತ್ತವೆ: ಅಧ್ಯಯನ ವರದಿ

Update: 2020-10-23 15:58 GMT

ಮುಂಬೈ,ಅ.23: ಸರ್ಜಿಕಲ್ ಮತ್ತು ಎನ್-95 ಮಾಸ್ಕ್‌ಗಳು ಕೋವಿಡ್-19 ರೋಗಿಯ ಕೆಮ್ಮಿನಿಂದ ಸೋಂಕು ಹರಡುವ ಸಾಧ್ಯತೆಯನ್ನು ಅನುಕ್ರಮವಾಗಿ 7 ಮತ್ತು 23 ಪಟ್ಟು ತಗ್ಗಿಸುತ್ತವೆ ಎಂದು ಐಐಟಿ-ಬಾಂಬೆ ಇತ್ತೀಚಿಗೆ ನಡೆಸಿದ ಅಧ್ಯಯನವೊಂದು ಹೇಳಿದೆ.

ಐಐಟಿ-ಬಾಂಬೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್‌ಗಳಾದ ಅಮಿತ್ ಅಗರವಾಲ್ ಮತ್ತು ರಜನೀಶ ಭಾರದ್ವಾಜ್ ಅವರು ನಡೆಸಿರುವ ಅಧ್ಯಯನದ ವರದಿಯು ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಫಿಜಿಕ್ಸ್‌ನ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ.

 ಕೋವಿಡ್-19 ರೋಗಿಯು ಕೆಮ್ಮಿದ ಬಳಿಕ ಹೊರಹೊಮ್ಮುವ ವೈರಸ್‌ನ್ನು ಒಳಗೊಂಡಿರುವ ತುಂತುರು ಹನಿಗಳು ಮೋಡದ ರೂಪದಲ್ಲಿ ಗಾಳಿಯಲ್ಲಿ 5ರಿಂದ 14 ಸೆಕೆಂಡ್‌ಗಳ ಕಾಲವಿರುತ್ತವೆ ಮತ್ತು ಈ ಅವಧಿಯಲ್ಲಿ ಸೋಂಕಿನ ಮಟ್ಟ 23 ಪಟ್ಟಿನವರೆಗೆ ಹೆಚ್ಚುವ ಸಾಧ್ಯತೆಯಿರುತ್ತದೆ. ಇಂತಹ ಸ್ಥಿತಿಯಲ್ಲಿ ಮಾಸ್ಕ್ ಸೋಂಕಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಕೋಣೆಯಲ್ಲಿರುವ ಇತರರಿಗೆ ಸೋಂಕು ಹರಡುವ ಅಪಾಯವನ್ನು ಗಮನಾರ್ಹವಾಗಿ ತಗ್ಗಿಸುತ್ತದೆ.ಇದೇ ರೀತಿ ಕೆಮ್ಮುವಾಗ ಕೈ ಅಥವಾ ಕರವಸ್ತ್ರವನ್ನು ಅಡ್ಡ ಹಿಡಿಯುವುದೂ ಕೆಮ್ಮಿನಿಂದ ಗಾಳಿಯಲ್ಲಿ ತುಂತುರು ಹನಿಗಳ ಮೋಡವನ್ನು ಕಡಿಮೆ ಮಾಡುತ್ತದೆ,ತನ್ಮೂಲಕ ವೈರಸ್ ಹರಡುವಿಕೆಯ ಸಾಧ್ಯತೆಗಳನ್ನು ತಗ್ಗಿಸುತ್ತದೆ ಎಂದು ವರದಿಯು ತಿಳಿಸಿದೆ.

ಎನ್-95 ಮಾಸ್ಕ್ ಕೋವಿಡ್-19 ರೋಗಿಯು ಹೊರಹೊಮ್ಮಿಸಿದ ತುಂತುರು ಹನಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲ, ಸೋಂಕಿಗೊಳಗಾದ ಗಾಳಿಯ ಪ್ರಮಾಣವನ್ನೂ ತಗ್ಗಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News