ಉದ್ಯೋಗ ಕಳೆದುಕೊಂಡು ಕೂಲಿ ಕೆಲಸಕ್ಕೆ ಸೇರಿದ ಒಡಿಶಾದ ಇಂಜಿನಿಯರ್

Update: 2020-10-23 16:06 GMT

ಭುವನೇಶ್ವರ, ಅ. 23: ಲಾಕ್‌ಡೌನ್‌ನಿಂದ ಚೆನ್ನೈಯ ರಸ್ತೆ ನಿರ್ಮಾಣ ಸಂಸ್ಥೆಯಿಂದ ಉದ್ಯೋಗ ಕಳೆದುಕೊಂಡ ಸಿವಿಲ್ ಇಂಜಿನಿಯರಿಂಗ್ ಪದವೀಧರನೋರ್ವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂನರೇಗಾ)ಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಒಡಿಶಾದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದ ಅನಂತ್ ಬೆರಿಯಾ ಲಾಕ್‌ಡೌನ್ ಸಂದರ್ಭ ಚೆನ್ನೈನಲ್ಲಿನ ಕಂಪೆನಿಯ 15 ಸಾವಿರ ವೇತನದ ಕೆಲಸವನ್ನು ಕಳೆದುಕೊಂಡಿದ್ದರು. ಕೂಡಿಟ್ಟ ಹಣ ಕೂಡ ಖಾಲಿ ಆದ ಬಳಿಕ ಅನಂತ್ ಬೆರಿಯಾ ಬೊಲಂಗಿರ್ ಜಿಲ್ಲೆಯ ಡಿಯೋಗಾಂವ್ ಬ್ಲಾಕ್‌ನಲ್ಲಿರುವ ಜುರ್ಲಕಾನಿಗ್ರಾಮಕ್ಕೆ ಹಿಂದಿರುಗಬೇಕಾಯಿತು. ಅನಂತರ ಅವರು ಇಲ್ಲಿ ಎಂನರೇಗಾದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕೆಲಸದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಬೊಲಂಗಿರ್ ಜಿಲ್ಲಾಧಿಕಾರಿ ಚಂಚಲ್ ರಾಣಾ ಅವರು ಕೂಲಿ ಕೆಲಸ ಮಾಡುತ್ತಿದ್ದ ಅನಂತ್ ಬೆರಿಯಾ ಅವರನ್ನು ಗಮನಿಸಿ ಉದ್ಯೋಗದ ಅವಕಾಶ ನೀಡಿದ್ದಾರೆ.

ಅನಂತ್ ಬೆರಿಯಾ ಹಾಗೂ ಅವರು ಮೂವರು ಒಡಹುಟ್ಟಿದವರು ತಂದೆ ಬೈಸಾಖ್ ಅವರ ದಿನಗೂಲಿಯಿಂದ ಜೀವನ ಸಾಗಿಸುತ್ತಿದ್ದರು. ಅನಂತ್ ಬೆರಿಯಾ ಇಂಜಿನಿಯರಿಂಗ್ ಪದವಿ ಮುಗಿಸಿ ಚೆನ್ನೈಯಲ್ಲಿ ಕೆಲಸ ಪಡೆದುಕೊಂಡು ಕುಟುಂಬಕ್ಕೆ ಆಧಾರವಾಗಿದ್ದ.  ‘‘ಎಂನರೇಗಾ ಅಡಿಯ ಕಾಮಗಾರಿಯಲ್ಲಿ ಆತ ತನ್ನ ತಂದೆ ಬೈಸಾಖು ಜೊತೆ ಕಾಲುವೆ ಅಗೆಯುವುದನ್ನು ನೋಡಿದೆ. ಇದು ನನ್ನನ್ನು ಚಿಂತೆಗೀಡು ಮಾಡಿತು. ಆತ ಎಂಜಿನಿಯರಿಂಗ್ ಪದವೀಧರನಾಗಿ ಉತ್ತಮ ಸ್ಥಾನದಲ್ಲಿ ಇರಬೇಕಿತ್ತು. ಆದುದರಿಂದ ನಾನು ಆತನಿಗೆ ಜಿಲ್ಲೆಯ ನರೇಗಾ ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಯ ಅವಕಾಶ ನೀಡಿದೆ. ಆತ ಉತ್ತಮ ಗೌರವ ಧನ ಪಡೆಯಲಿದ್ದಾನೆ. ಆತನ ಶಿಕ್ಷಣ ಹಾಗೂ ಕೌಶಲಕ್ಕೆ ಅನುಗುಣವಾದ ಉದ್ಯೋಗ ಹುಡುಕಲು ನಾನು ವೈಯಕ್ತಿಕವಾಗಿ ಪ್ರಯತ್ನಿಸುತ್ತೇನೆ’’ ಎಂದು ಚಂಚಲ್ ರಾಣಾ ಹೇಳಿದ್ದಾರೆ.  ‘‘ಚೆನ್ನೈಯಿಂದ ಹಿಂದಿರುಗಿ ಬಂದ ನಂತರ ಯಾವುದೇ ಕೆಲಸ ಸಿಗದೇ ಇದ್ದಾಗ, ಆತ ಎಂನರೇಗಾ ಅಡಿಯಲ್ಲಿ ಕೆಲಸ ಮಾಡಲು ನಿರ್ಧರಿಸಿದ’’ ಎಂದು ಅನಂತ್ ಬೆರಿಯಾ ಅವರ ತಂದೆ ಬೈಸಾಖ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News