ಖಾಲಿದ್, ಇಮಾಂ ನ್ಯಾಯಾಂಗ ಬಂಧನ ನ.20ರವರೆಗೆ ವಿಸ್ತರಿಸಿದ ದಿಲ್ಲಿ ಕೋರ್ಟ್

Update: 2020-10-23 15:47 GMT

ಹೊಸದಿಲ್ಲಿ,ಅ.23: ಮಾಜಿ ಜೆಎನ್‌ಯು ವಿದ್ಯಾರ್ಥಿ ಹಾಗೂ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಮತ್ತು ಜೆಎನ್‌ಯು ಪಿಎಚ್‌ಡಿ ವಿದ್ಯಾರ್ಥಿ ಶಾರ್ಜಿಲ್ ಇಮಾಂ ಅವರ ನ್ಯಾಯಾಂಗ ಬಂಧನವನ್ನು ನ.20ರವರೆಗೆ ವಿಸ್ತರಿಸಿ ದಿಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಶುಕ್ರವಾರ ಆದೇಶಿಸಿದೆ.

 ಕಳೆದ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದಿದ್ದ ದಂಗೆಗಳಿಗೆ ಸಂಬಂಧಿಸಿದಂತೆ ಇಮಾಂ ಅವರನ್ನು ದಿಲ್ಲಿ ಪೊಲೀಸರು ಆಗಸ್ಟ್‌ನಲ್ಲಿ ಬಂಧಿಸಿದ್ದರು. ಇಮಾಂ ಅವರ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ವರ್ಷದ ಆರಂಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ದಿಲ್ಲಿಯಲ್ಲಿ ಕೋಮು ಹಿಂಸಾಚಾರ ನಡೆಸಲು ಒಳಸಂಚು ರೂಪಿಸಿದ್ದ ಆರೋಪದಲ್ಲಿ ಖಾಲಿದ್ ಅವರನ್ನು ಸೆ.13ರಂದು ಬಂಧಿಸಲಾಗಿತ್ತು. ಖಾಲಿದ್ ವಿರುದ್ಧ ದೇಶದ್ರೋಹದ ಜೊತೆ ಕೊಲೆ ಮತ್ತು ಕೊಲೆಯತ್ನ ಸೇರಿದಂತೆ ಐಪಿಸಿಯ ಇತರ 18 ಕಲಮ್‌ಗಳಡಿಯೂ ಆರೋಪಗಳನ್ನು ಹೊರಿಸಲಾಗಿದೆ.

ತನ್ಮಧ್ಯೆ 2020,ಜ.8ರಂದು ನಡೆದಿದ್ದ ಸಭೆಯಲ್ಲಿ ಟ್ರಂಪ್ ಭೇಟಿ ಸಂದರ್ಭದಲ್ಲಿ ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರವನ್ನು ಭುಗಿಲೆಬ್ಬಿಸಲು ಸಂಚು ರೂಪಿಸಲಾಗಿತ್ತು ಎಂಬ ತಮ್ಮ ವಾದವನ್ನು ಪೊಲೀಸರು ಕೈಬಿಟ್ಟಿದ್ದಾರೆ.

ಇಬ್ಬರೂ ಆರೋಪಿಗಳ ನ್ಯಾಯಾಂಗ ಬಂಧನವನ್ನು 30 ದಿನಗಳ ಕಾಲ ವಿಸ್ತರಿಸುವಂತೆ ಪೊಲಿಸರು ಕೋರಿದ್ದರು.

ತನ್ನನ್ನು ಸೆಲ್‌ನಿಂದ ಹೊರಗೆ ಬರಲು ಬಿಡುತ್ತಿಲ್ಲ. ತನ್ನನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡುತ್ತಿಲ್ಲ ಮತ್ತು ಒಂದು ರೀತಿಯಲ್ಲಿ ತನ್ನನ್ನು ಏಕಾಂತ ಬಂಧನದಲ್ಲಿಡಲಾಗಿದೆ ಎಂದು ಖಾಲಿದ್ ಅ.22ರಂದು ನ್ಯಾಯಾಲಯಕ್ಕೆ ದೂರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ನ್ಯಾ.ಅಮಿತಾಬ್ ರಾವತ್ ಅವರು,ಭದ್ರತೆಯ ನೆಪದಲ್ಲಿ ನೀವು ಖಾಲಿದ್‌ರನ್ನು ಏಕಾಂತ ಬಂಧನದಲ್ಲಿರಿಸಿದ್ದೀರಿ ಎಂದು ಅವರು ದೂರಿಕೊಂಡಿದ್ದಾರೆ,ಏನಿದು ಎಂದು ಜೈಲು ಅಧಿಕಾರಿಗಳನ್ನು ಪ್ರಶ್ನಿಸಿದರು. ಖಾಲಿದ್‌ಗೆ ಕೆಲವು ಸ್ವಾತಂತ್ರ್ಯಗಳನ್ನು ನೀಡುವಂತೆಯೂ ಅವರು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News