‘ನೇಶನ್ ವಾಂಟ್ಸ್ ಟು ನೋ’ ಘೋಷವಾಕ್ಯ ಬಳಸಲು ಅರ್ನಬ್‌ಗೆ ದಿಲ್ಲಿ ಹೈಕೋರ್ಟ್ ಗ್ರೀನ್‌ಸಿಗ್ನಲ್

Update: 2020-10-23 16:33 GMT

   ಹೊಸದಿಲ್ಲಿ,ಅ.23: ರಿಪಬ್ಲಿಕ್ ಟಿವಿ ವಾಹಿನಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ತನ್ನ ಭಾಷಣ ಅಥವಾ ಕಾರ್ಯಕ್ರಮ ನಿರೂಪಣೆಗಳಲ್ಲಿ ‘ನೇಶನ್ ವಾಂಟ್ಸ್ ಟು ನೊ’ (ದೇಶವು ತಿಳಿಯಬಯಸಿದೆ) ಎಂಬ ಘೋಷವಾಕ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ತಿಳಿಸಿದೆ.

  ರಿಪಬ್ಲಿಕ್ ಟಿವಿ ವಾಹಿನಿಯ ಮಾಲಕ ಅರ್ನಬ್ ಗೋಸ್ವಾಮಿ ತನ್ನ ಕಾರ್ಯಕ್ರಮಗಳಲ್ಲಿ ‘ನೇಶನ್ ವಾಂಟ್ಸ್ ಟು ನೋ’ ಎಂಬ ಟ್ಯಾಗ್‌ಲೈನ್ ಬಳಸಿಕೊಳ್ಳುವುದನ್ನು ಪ್ರಶ್ನಿಸಿ ಬೆನೆಟ್ ಕೋಲ್‌ಮ್ಯಾನ್ ಆ್ಯಂಡ್ ಕಂ. ಲಿಮಿಟೆಡ್ ದಿಲ್ಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿತ್ತು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಅರ್ನಬ್ ಅವರು ಯಾವುದೇ ಸುದ್ದಿ ವಾಹಿನಿಯಲ್ಲಿ ತನ್ನ ಭಾಷಣ ಅಥವಾ ನಿರೂಪಣೆಯ ಭಾಗವಾಗಿ ಈ ಘೋಷ ವಾಕ್ಯವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದೆ.

ಈ ಮಧ್ಯೆ ‘ರಿಪಬ್ಲಿಕ್ ಟಿವಿ’ಯು ನ್ಯೂಸ್‌ಅವರ್ ಎಂಬ ಟ್ರೇಡ್ ಮಾರ್ಕ್ ಬಳಸುವುದಕ್ಕೆ ತಡೆಯಾಜ್ಞೆ ವಿಧಿಸಬೇಕೆಂದು ಬೆನೆಟ್ ಕೋಲ್‌ಮ್ಯಾನ್ ಗ್ರೂಪ್ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಪುರಸ್ಕರಿಸಿದೆ. ಅರ್ನಬ್ ಗೋಸ್ವಾಮಿ ಅಥವಾ ಎಆರ್‌ಜಿ ಔಟ್‌ಲಿಯರ್ ಮೆಡಿಯಾ ಪ್ರೈ. ಲಿಮಿಟೆಡ್ ಬಳಸುವ ‘ನ್ಯೂಸ್ ಅವರ್’ ಅಥವಾ ನೇಶನ್ ವಾಂಟ್ಸ್ ಟು ನೋ ಟ್ಯಾಗ್‌ಲೈನ್‌ಗಳು ಮೂಲತಃ ತಾನು ನೋಂದಾಯಿಸಿದ ಟ್ರೇಡ್‌ಮಾರ್ಕ್‌ಗಳಾಗಿದ್ದು, ಅದನ್ನು ರಿಪಬ್ಲಿಕ್ ಟಿವಿಯು ಬಳಸಿಕೊಳ್ಳುತ್ತಿರುವುದಾಗಿ ಬೆನೆಟ್ ಕೋಲ್‌ಮ್ಯಾನ್ ಗ್ರೂಪ್ ದಾವೆ ಹೂಡಿತ್ತು. ಬೆನೆಟ್ ಕೋಲ್‌ಮ್ಯಾನ್ ಗ್ರೂಪ್ ಟೈಮ್ಸ್ ನೌ ಮತ್ತಿತರ ಸುದ್ದಿಸಂಸ್ಥೆಗಳ ಮಾಲಕಸಂಸ್ಥೆಯಾಗಿದೆ.

ಟೈಮ್ಸ್ ನೌ ಸುದ್ದಿವಾಹಿನಿಯು, ನ್ಯೂಸ್ ಅವರ್ ಶೀರ್ಷಿಕೆಯ ಕಾರ್ಯಕ್ರಮವನ್ನು 2006ರಲ್ಲಿ ಆರಂಭಿಸಿತ್ತು. ಈ ಕಾರ್ಯಕ್ರಮವುಚರ್ಚೆ, ಗುಂಪುಚರ್ಚೆ ಹಾಗೂ ಸಂವಾದ ಕಾರ್ಯಕ್ರಮವನ್ನು ನಡೆಸುತ್ತಿದೆ.

 ಈ ಹಿಂದೆ ಟೈಮ್ಸ್ ನೌನಲ್ಲಿ ನಿರೂಪಕರಾಗಿದ್ದ ಅರ್ನಬ್ ಗೋಸ್ವಾಮಿ 2016ರಲ್ಲಿ ಸಂಸ್ಥೆಯನ್ನು ತೊರೆದು ತನ್ನದೇ ಒಡೆತನದ ರಿಪಬ್ಲಿಕ್ ಟಿವಿಯನ್ನು ಆರಂಭಿಸಿದ್ದರು. ಅರ್ನಬ್ ಅವರು ರಿಪಬ್ಲಿಕ್ ಟಿವಿಯಲ್ಲಿ ನೇಶನ್ ವಾಂಟ್ಸ್ ಟು ನೋ, ಅರ್ನಬ್ ಗೋಸ್ವಾಮಿ ನ್ಯೂಸ್‌ಅವರ್ ಸಂಡೇ ಕಾರ್ಯಕ್ರಮವನ್ನು ನೋಂದಾಯಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News