ಕೋವಿಡ್-19 ಎಫೆಕ್ಟ್: ಶೇ.31ರಷ್ಟು ಹದಿಹರೆಯದವರಿಗೆ ಕುಟುಂಬದ ಆರ್ಥಿಕತೆ ಬಗ್ಗೆ ತೀವ್ರ ಆತಂಕ

Update: 2020-10-24 16:56 GMT

ಹೊಸದಿಲ್ಲಿ,ಅ.24: ತಮ್ಮ ಕುಟುಂಬದ ಆರ್ಥಿಕ ಸ್ಥಿತಿಗತಿಯ ಮೇಲೆ ಕೊರೋನ ವೈರಸ್ ಸಾಂಕ್ರಾಮಿಕವು ಉಂಟು ಮಾಡಿರುವ ಪರಿಣಾಮದ ಕುರಿತು ಕಳೆದ ಕೆಲವು ತಿಂಗಳುಗಳಲ್ಲಿ ಶೇ.31ರಷ್ಟು ಹದಿಹರೆಯದ ಯುವಜನರು ತೀವ್ರವಾದ ಆತಂಕಕ್ಕೆ ಒಳಗಾಗಿದ್ದಾರೆ. ಜಾರ್ಖಂಡ್, ಛತ್ತೀಸ್‌ಗಢ, ಬಿಹಾರ ಹಾಗೂ ಒಡಿಶಾ ರಾಜ್ಯಗಳ 7,300ಕ್ಕೂ ಅಧಿಕ ವಯಸ್ಕರ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

‘ಯುವಜನರ ಮೇಲೆ ಕೋವಿಡ್-19 ಉಂಟು ಮಾಡಿರುವ ಪರಿಣಾಮದ ಬಗ್ಗೆ ಎನ್‌ಜಿಓ ಸಂಸ್ಥೆ ಸೆಂಟರ್ ಫಾರ್ ಕ್ಯಾಟಲೈಸಿಂಗ್‌ಚೇಂಜ್ , ಎಪ್ರಿಲ್,ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ಎರಡು ಹಂತಗಳ ಸಮೀಕ್ಷೆ ನಡೆಸಿತ್ತು.

 ಸಮೀಕ್ಷೆಯಲ್ಲಿ ಪಾಲ್ಗೊಂಡ 7324 ವಯಸ್ಕರ ಪೈಕಿ, ಶೇ.31ರಷ್ಟು ಮಂದಿ ಕೊರೋನ ವೈರಸ್ ಸಾಂಕ್ರಾಮಿಕ ಉಂಟು ಮಾಡಿರುವ ಪರಿಣಾಮದ ಬಗ್ಗೆ ತೀವ್ರವಾಗಿ ಆತಂಕಿತರಾಗಿದ್ದರು. ಸಾಂಕ್ರಾಮಿಕದ ಹಾವಳಿಯ ತಿಂಗಳುಗಳಲ್ಲಿ ಹರೆಯದ ಹುಡುಗಿಯರು ಗಣನೀಯ ಪ್ರಮಾಣದಲ್ಲಿ ಲಿಂಗ ತಾರತಮ್ಯವನ್ನು ಎದುರಿಸಿದ್ದರು. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.12ರಷ್ಟು ಹರೆಯದ ಬಾಲಕಿಯರು ಮಾತ್ರವೇ ಮೊಬೈಲ್ ಫೋನ್‌ಗಳ ಸಂಪರ್ಕವನ್ನು ಪಡೆದಿದ್ದು, ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿದೆ. ಆದರೆ ಸ್ವಂತ ಮೊಬೈಲ್ ಫೋನ್‌ಗಳನ್ನು ಹೊಂದಿರುವ ಹುಡುಗರ ಸಂಖ್ಯೆ ಶೇ.35 ಆಗಿದೆ ಎಂಬುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

‘‘ಬಾಲಕರಿಗೆ ಹೋಲಿಸಿದರೆ ಶೇ. 51ರಷ್ಟು ಹರೆಯದ ಹುಡುಗಿಯರಿಗೆ ಪಠ್ಯಪುಸ್ತಕಗಳು ಲಭ್ಯವಿರದೆ ಇರುವುದು, ಕೊರೋನ ಸಾಂಕ್ರಾಮಿಕವು ಹೆಣ್ಣು ಮಕ್ಕಳ ಶಿಕ್ಷಣವನ್ನು ಡೋಲಾಯಮಾನಗೊಳಿಸಿದೆಯೆಂದು ಸಮೀಕ್ಷೆಯು ಹೇಳಿದೆ.

ಮನೆಗೆಲಸಗಳಲ್ಲಿ ಪಾಲ್ಗೊಳ್ಳುವ ಹೆಣ್ಣು ಮಕ್ಕಳ ಪ್ರಮಾಣ ಶೇ.39 ಆಗಿದ್ದು, ಇದಕ್ಕೆ ಹೋಲಿಸಿದರೆ ಗಂಡುಮಕ್ಕಳ ಸಂಖ್ಯೆ ಶೇ.35 ಆಗಿದೆ.

 ಇದೇ ವೇಳೆ ಕೋವಿಡ್-19 ಪಿಡುಗು ಹದಿಹರೆಯದ ಹುಡುಗಿಯರ ಚಲನಶೀಲತೆಯನ್ನು ಕೂಡಾ ಮೊಟಕುಗೊಳಿಸಿದೆ. ಕೇವಲ ಶೇ.39ರಷ್ಟು ಬಾಲಕಿಯರು ಮಾತ್ರವೇ ತಮಗೆ ಏಕಾಂಗಿಯಾಗಿ ಹೊರಗೆ ಹೋಗಲು ಅವಕಾಶ ದೊರೆತಿದ್ದಾಗಿ ಹೇಳಿದ್ದರೆ, ಅದೇ ವಯಸ್ಸಿನ ಶೇ.62ರಷ್ಟು ಬಾಲಕರು ತಮಗೆ ಒಂಟಿಯಾಗಿ ಹೊರಗೆ ಹೋಗಲು ಅವಕಾಶವಿದ್ದುದಾಗಿ ತಿಳಿಸಿದ್ದಾರೆ.

 ಇದೇ ಸಮಯ, ಕೇವಲ ಶೇ.36ರಷ್ಟು ಹದಿವಯಸ್ಕರಿಗೆ ಮಾತ್ರವೇ ಸಹಾಯವಾಣಿಗಳ ಸರಿಯಾದ ಸಂಖ್ಯೆ ತಿಳಿದಿದ್ದರೆ, ಸಹಾಯವಾಣಿಗಳ ಬಳಕೆಯ ಕುರಿತು ಅವರಿಗಿರುವ ಅರಿವು ತುಂಬಾ ಕಡಿಮೆ. ಗೃಹಹಿಂಸೆಯ ಕುರಿತು ದೂರು ನೀಡಲು ಬಳಸುವ ಸಹಾಯವಾಣಿಗಳ ಬಗ್ಗೆ ಕೇವಲ ಶೇ.18ರಷ್ಟು ಮಂದಿಗೆ ಮಾತ್ರವೇ ಅರಿವಿತ್ತು ಮತ್ತು ಕೇವಲ ಶೇ.22ರಿಂದ ಶೇ.23ಮಂದಿ ಹದಿವಯಸ್ಕರಿಗೆ ಮಾತ್ರ ಅವುಗಳನ್ನು ಬಾಲಕಾರ್ಮಿಕ ಹಾಗೂ ಮಕ್ಕಳ ಕಳ್ಳಸಾಗಣೆ ಪ್ರಕರಣಗಳಲ್ಲಿಯೂ ಬಳಸಬಹುದೆಂದು ತಿಳಿದಿರುವುದಾಗಿ ಸಮೀಕ್ಷಾ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News