ಗುಜರಾತ್ ಗೋಡೆಯ ವೈಫಲ್ಯಕ್ಕೆ ವಲಸೆ ಕಾರ್ಮಿಕರೇ ಕಾರಣ....!

Update: 2020-10-24 19:30 GMT

ತನ್ನ ಪ್ರಾಣ ಗೆಳೆಯ ‘ಭಾರತ ದೇಶ ಕೊಳಕು ದೇಶ’ ಎಂದದ್ದು ಕೇಳಿ ಚೌಕೀದಾರರಿಗೆ ಸಖತ್ ಬೇಜಾರಾಗಿ ತಕ್ಷಣ ಭಾರತೀಯ ಚೌಕೀದಾರರ ಸಂಘದ ಸಭೆ ಕರೆದರು. ಪ್ರಧಾನ ಚೌಕೀದಾರರು ಸಿಟ್ಟಿನಿಂದ ಗದಗದಿಸುತ್ತಾ ‘‘ನೋಡ್ರೀ...ಅಪರೂಪಕ್ಕೆ ನನ್ನ ಫ್ರೆಂಡ್ಸಾ ನನ್ನೂರಿಗೆ ಬಂದಾನ ಅಂತ ಅಷ್ಟುದ್ದದ ಗೋಡೆ ಕಟ್ಟಿಸಿವ್ನಿ. ಆದರೂ ಆ ಗೋಡೆಯ ಆಚೆಗೆ ಇದ್ದ ಭಾರತದ ಕೊಳಕು ಕಂಡಿತು ಅಂದ್ರ ಅದರಲ್ಲಿ ಗೋಡೆ ಕಟ್ಟಿದ ಇಂಜಿನಿಯರ್‌ನದ್ದೇ ತಪ್ಪು ಇರಬೇಕು...ತಕ್ಷಣ ಆತನನ್ನು ಕರ್ಕೊಂಬರ್ರಿ...’’

ಇಂಜಿನಿಯರ್ ಎದ್ದೆನೋ ಬಿದ್ದೆನೋ ಎಂದು ಓಡೋಡಿ ಬಂದ. ‘‘ನಂದೇನೂ ತಪ್ಪಿಲ್ಲ ಸ್ವಾಮ್ಯೋರೆ...’’

‘‘ಇಡೀ ದೇಶದ ಮರ್ಯಾದೆ ಉಳಿಸುವಂತಹ ಗೋಡೆ ಕಟ್ಟು ಅಂದರೆ, ಈಗ ನನ್ನ ಡೊಲಾಂಡ್ ದೋಸ್ತ್ ಮುಂದೆ ಅವಮಾನ ಮಾಡೋವಂತ ಗೋಡೆ ಕಟ್ಟಿದ್ದೀಯಲ್ಲ...ನಿನ್ನ ವಿರುದ್ಧ ದೇಶದ್ರೋಹದ ಕಾಯ್ದೆಯನ್ನು ಹಾಕಲಾಗುತ್ತೆ. ಎನ್‌ಐಎಯಿಂದ ತನಿಖೆ ನಡೆಸಬೇಕಾಗುತ್ತೆ....’’ ಪ್ರ.ಚೌ ಸಾಹೇಬರು ಅಬ್ಬರಿಸಿದರು.

‘‘ನಾನೇನು ಗೋಡೆ ಚೆನ್ನಾಗಿಯೇ ಕಟ್ಟಿದ್ದೆ. ಚೈನಾದ ಗೋಡೆಯಂಗಿರಬೇಕು ಎಂದೂ ನಕ್ಷೆ ಮಾಡಿಕೊಟ್ಟಿದ್ದೆ. ಆದರೆ ಗುತ್ತಿಗೆದಾರರು ಮೋಸ ಮಾಡಿದ್ದಾರೆ ದೊರೆ....’’ ಇಂಜಿನಿಯರ್ ಅಲವತ್ತುಕೊಂಡ. ‘‘ಸರಿ...ಗುತ್ತಿಗೆದಾರರನ್ನು ಕರೆಸಿ. ಈ ದೇಶಕ್ಕೆ ಕಳಂಕ ತಂದ ಆತನನ್ನು ಗಲ್ಲಿಗೇರಿಸಿ ಡೊಲಾಂಡ್ ದೋಸ್ತನಿಗೆ ಹೊಸ ವರ್ಸದ ಉಡುಗೊರೆ ಕೊಡ್ತೀನಿ...’’ ಪ್ರ.ಚೌ. ಘೋಷಿಸಿದರು.

ಗುತ್ತಿಗೆದಾರ ಓಡೋಡಿ ಬಂದ. ‘‘ಸ್ವಾಮ್ಯೋರೆ...ನನ್ನ ಮೇಲೆ ಕರುಣೆ ತೋರಿಸಬೇಕು. ನಾನು ಚೌಕೀದಾರರ ಸಂಘದ ಬಹುದೊಡ್ಡ ಭಕ್ತ. ಚೌಕಿದಾರರ ಸಂತ್ರಸ್ತ ನಿಧಿಗೆ ಸಾಕಷ್ಟು ದೇಣಿಗೆ ಕೊಟ್ಟಿದ್ದೇನೆ....ತಪ್ಪು ನನ್ನದಲ್ಲ...ಗೋಡೆ ಕಟ್ಟಿದ ಮೇಸ್ತ್ರಿಯದ್ದು....’’ ಸ್ಪಷ್ಟೀಕರಣ ನೀಡತೊಡಗಿದ.

ಗುಜರಾತ್‌ನ ಆದ್ಯಂತ ಗೋಡೆ ಕಟ್ಟಿದ ಮೇಸ್ತ್ರಿಯನ್ನು ಹುಡುಕಲಾಯಿತು. ಮೇಸ್ತ್ರಿ ಓಡೋಡಿ ಬಂದು ಅಡ್ಡ ಬಿದ್ದ ‘‘ವಿಶ್ವ ಗುರುವಿಗೆ ಅಡ್ಡ ಬಿದ್ದೆ ಸೋಮಿ....’’

ಪ್ರ. ಚೌಕೀದಾರರಿಗೆ ಈತನೂ ಅಪರಾಧಿ ಆಗಿರಲಿಕ್ಕಿಲ್ಲ ಎಂದು ಮನವರಿಕೆಯಾಯಿತು. ‘‘ಮೇಸ್ತ್ರಿಯವರೇ ಗೋಡೆಯ ಆಚೆ ಇರುವ ಭಾರತ ನನ್ನ ದೋಸ್ತ್ ಡೊಲಾಂಡ್ ಕಣ್ಣಿಗೆ ಬಿದ್ದದ್ದು ಹೇಗೆ....ಗೋಡೆ ಬಿರುಕು ಬಿಟ್ಟಿತ್ತೆ? ಅಥವಾ ಎತ್ತರ ಕಮ್ಮಿಯಾಯಿತೆ...?’’

ಮೇಸ್ತ್ರಿಗೆ ಅದು ಹೇಗೋ ಪಾರಾಗಬೇಕಾಗಿತ್ತು ‘‘ಸ್ವಾಮ್ಯೋರೆ....ತಮ್ಮ ದೋಸ್ತ್ ಕಾರ್‌ನಲ್ಲಿ ಬರೋವಾಗ ಕಿಟಕಿ ಗ್ಲಾಸ್ ಹಾಕಿರಲಿಲ್ಲ....ಆದುದರಿಂದ ಕಾರ್ ‌ಡ್ರೈವರ್‌ನದ್ದೇ ತಪ್ಪು....’’

‘‘ತಕ್ಷಣ ಕಾರ್ ಡ್ರೈವರ್‌ನ್ನು ಕರೆದುಕೊಂಡು ಬನ್ನಿ....ಕಾರ್ ಡ್ರೈವರ್ ಎಂದ ಮೇಲೆ ಆತ ಸಾಬಿಯೇ ಆಗಿರಬೇಕು. ಸಾಬಿ ಆಗಿರುವುದರಿಂದ ಆತ ಸಿಎಎ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡಿರಲೇಬೇಕು...ಸಿಎಎ ಕಾಯ್ದೆಯಲ್ಲಿ ಪ್ರತಿಭಟನೆ ಮಾಡಿದ್ದಿದ್ದರೆ ಆತ ಶಾಹೀನ್ ಬಾಗ್‌ಗೆ ಹೋಗಿರಲೇ ಬೇಕು...ಶಾಹೀನ್ ಬಾಗ್‌ಗೆ ಹೋಗಿದ್ದರೆ ಆತ ಭಾಷಣ ಮಾಡಿರಲೇಬೇಕು....ಆತನ ಭಾಷಣದಿಂದ ಪ್ರಚೋದನೆಗೊಂಡು ದಿಲ್ಲಿಯಲ್ಲಿ ಗಲಭೆಯಾಯಿತು....ತಕ್ಷಣ ಆ ಸಾಬಿಯನ್ನು ಹುಡುಕಿಕೊಂಡು ಬನ್ನಿ....’’ ಪ್ರ. ಚೌಕೀದಾರರು ಸ್ವತಃ ನಿಂತ ಕಾಲಲ್ಲೇ ತನಿಖೆ ನಡೆಸಿ ಅಪರಾಧಿಯನ್ನು ಘೋಷಿಸಿ ಬಿಟ್ಟರು. ‘‘ಆದರೆ....’’ ಚೌಕೀದಾರರಲ್ಲಿ ಒಬ್ಬರು ಗೊಣಗಿದರು.

‘‘ಆದರೂ ಇಲ್ಲ...ಗೀದರೂ ಇಲ್ಲ....ದಿಲ್ಲಿ ಗಲಭೆಯನ್ನು ಆಯೋಜಿಸಿದವರ ಸಂಚಿನಿಂದಾಗಿ ದೇಶದ ಮರ್ಯಾದೆ ಹೋತು....’’
‘‘ಆದರೆ ತಮ್ಮ ಡೊಲಾಂಡ್ ಸಾಹೇಬರು ಅವರದೇ ಕಾರಿನಲ್ಲಿ ಬಂದಿದ್ದರು...ಡ್ರೈವರ್ ಭಾರತೀಯನಲ್ಲ....’’ ಇನ್ಯಾರೋ ಹೇಳಿದರು.
ಈಗ ಪ್ರ.ಚೌ. ಮತ್ತೆ ಮೇಸ್ತ್ರಿ ಕಡೆ ತಿರುಗಿದರು ‘‘ಹಿಂಗಾತಲ್ಲ....ಈಗ ಏನು ಮಾಡೋದು....’’
‘‘ಸಾರ್...ಗೋಡೆಯ ವೈಫಲ್ಯಕ್ಕೆ ವಲಸೆ ಕಾರ್ಮಿಕರೇ ಕಾರಣ...’’ ಮೇಸ್ತ್ರಿ ಹೇಳಿದ.

‘‘ಅದು ಹೇಗೆ....’’

‘‘ಗೋಡೆ ಕೆಲಸಕ್ಕೆ ಕೂಲಿ ಕಾರ್ಮಿಕರಾಗಿ ವಲಸೆ ಕಾರ್ಮಿಕರು ಬಂದಿದ್ದರು. ನಾನು ಹೇಳಿದ ಹಾಗೆ ಕೆಲಸ ಮಾಡದೇ ದೇಶದ್ರೋಹ ಮಾಡಿದ್ದಾರೆ....ಅವರು ಕೊರೋನ ಸಂದರ್ಭವನ್ನು ನೆಪ ಮಾಡಿ ಹಳ್ಳಿ ಗಳನ್ನು ಸೇರಿಕೊಂಡಿದ್ದಾರೆ....’’ ಮೇಸ್ತ್ರಿ ದೂರಿದ.

ಪ್ರ.ಚೌ. ಕಣ್ಣಲ್ಲಿ ಬೆಳಕು ಮೂಡಿತು. ಕೊರೋನಕ್ಕೆ ಲಸಿಕೆ ಕಂಡು ಹಿಡಿದವರಂತೆ ಅವರು ಸಂಭ್ರಮಿಸಿದರು. ‘‘ವಿಷಯ ಹಂಗಾರೆ ಹೀಗೆ....ಕೊರೋನ, ಅದು ಇದು ಅಂತ ಅವರೆಲ್ಲ ನಗರ ಬಿಟ್ಟು ಹಳ್ಳಿಗೆ ವಲಸೆ ಹೋಗಿರುವುದು ತಾವು ಮಾಡಿದ ಘನಂದಾರಿ ಕೆಲಸ ಬಹಿರಂಗವಾಗುತ್ತೆ ಎಂದು ಹೆದರಿ. ತಕ್ಷಣ ಹಳ್ಳಿಯಲ್ಲಿರುವ ವಲಸೆ ಕಾರ್ಮಿಕರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ. ಎಲ್ಲರನ್ನೂ ಬಂಧಿಸಿ ಜೈಲಿಗೆ ಹಾಕಿ. ಬಚ್ಚಿಟ್ಟುಕೊಂಡಿರುವ ವಲಸೆ ಕಾರ್ಮಿಕರನ್ನೆಲ್ಲ ‘ಹಳ್ಳಿ ನಕ್ಸಲರು’ ಎಂದು ಕರೆದು ಎನ್‌ಕೌಂಟರ್ ಮಾಡಿ....ಅವರ ಗುಡಿಸಲ ಮೇಲೆ ಸಿಬಿಐ, ಐಟಿಯೋರು ದಾಳಿ ಮಾಡಲಿ.....ಎನ್‌ಆರ್‌ಸಿಯಿಂದ ಅವರ ಹೆಸರನ್ನು ತೆಗೆದು ಹಾಕಿ ಅವರನ್ನೆಲ್ಲ ಅಸ್ಸಾಮಿನಲ್ಲಿರುವ ಡಿಟೆನ್ಶನ್ ಸೆಂಟರ್‌ಗೆ ಹಾಕಿ ಬಿಡಿ....’’ ಪ್ರ.ಚೌ. ಘೋಷಿಸಿದರು.

ಆದೇಶ ಸಿಕ್ಕಿದ್ದೇ ಸೇನಾ ಪಡೆಗಳು ಹಳ್ಳಿ ಹಳ್ಳಿಗಳಿಗೆ ದಾಳಿ ಮಾಡಿ ವಲಸೆ ಕಾರ್ಮಿಕರನ್ನು ಬಂಧಿಸತೊಡಗಿದವು. ಅವರೆಲ್ಲ ನ್ಯಾಯಾಲಯ ಕೋರ್ಟ್ ಎಂದು ಅಲೆದಾಡತೊಡಗಿದರು.

ಇತ್ತ ಗಣರಾಜ್ಯೋತ್ಸವದ ದಿನ, ಗೋಡೆ ಕಟ್ಟಿದ ಇಂಜಿಯರ್‌ಗೆ ಶೌರ್ಯ ಪ್ರಶಸ್ತಿ, ಮೇಸ್ತ್ರಿಗೆ ಅರ್ಜುನ ಪ್ರಶಸ್ತಿ, ಗುತ್ತಿಗೆದಾರನಿಗೆ ದ್ರೋಣ ಪ್ರಶಸ್ತಿ ಇತ್ಯಾದಿಗಳನ್ನು ನೀಡಲಾಯಿತು.

ಎಲ್ಲ ಮುಗಿದ ಮೇಲೆ ಡೊಲಾಂಡ್‌ಗೆ ಪ್ರ.ಚೌ. ಫೋನ್ ಮಾಡಿದರು. ‘‘ಏನ್ ದೋಸ್ತ ಹಿಂಗ ಮಾಡ್ಬಿಟ್ಟೆ....ನನ್ ಮರ್ವಾದೆ ಕಳೆದೆಯಲ್ಲ...’’ ಡೊಲಾಂಡ್ ಜೊತೆಗೆ ಕಣ್ಣೀರಿಟ್ಟರು.

‘‘ಹೇ ತಮ್ಮ...ನಾನು ನಿನ್ನ ದೇಶದ ಬಗ್ಗೆ ಹೇಳಿದ್ದಲ್ಲ....ದೇಶ ಎಲ್ಲ ಚೆನ್ನಾಗಿದೆ....’’ ಡೊಲಾಂಡ್ ಸಮಾಧಾನ ಪಡಿಸಿದರು.
‘‘ಮತ್ತೆ ಯಾಕ್ ದೋಸ್ತ ಹಂಗೆ ಹೇಳಿಕೆ ನೀಡಿದೆ....’’ ಪ್ರ.ಚೌ. ಅರ್ಥವಾಗದೆ ಕೇಳಿದರು.
‘‘ಅದೇ ನೀ ಬಾಸಣಕ್ಕೆ ನಿಂತು ಮೇರಾ ದೇಸವಾಸಿಯೋಂ....ಎಂದು ಜೋರಾಗಿ ಹೇಳಿದೆಯಲ್ಲ.....’’
‘‘ಹೌದು....’’

‘‘ನಿನ್ ಬಾಯಿ ವಾಸನೆ ತಡೆಯೊಕ್ಕಾಗ್ಲಿಲ್ಲ....ನಾನು ವಾಯುಮಾಲಿನ್ಯ ಎಂದು ತಪ್ಪು ತಿಳಿದು ಹೇಳಿಕೆ ನೀಡಿದೆ. ಇದೀಗ ವಾಯು ಮಾಲಿನ್ಯ ತಜ್ಞರು ಬಂದು, ಆ ದುರ್ವಾಸನೆ ಎಲ್ಲಿಂದ ಬಂದಿರೋದು ಎನ್ನುವುದನ್ನು ಹೇಳಿದರು.ಯಾವುದಕ್ಕೂ ಭಾಷಣ ಮಾಡುವುದಕ್ಕೆ ಮೊದಲು ಟೂಥ್‌ಪೇಸ್ಟ್ ನಿಂದ ಚೆನ್ನಾಗಿ ಹಲ್ಲುಜ್ಜಬೇಕು ತಮ್ಮಾ....’’ ಸಲಹೆ ನೀಡಿದರು.

‘‘ಹೇ...ತಮ್ಮ ಅದು ಹಂಗಲ್ಲ....ನಾನು ಕೊರೋನಕ್ಕೆ ಹೆದರಿ ಪತಂಜಲಿ ಗೋಮೂತ್ರದಿಂದ ಬಾಯಿ ಮುಕ್ಕಳಿಸಿ ಬಂದಿದ್ದೆ....ಅದೇ ಎಲ್ಲ ಪ್ರಮಾದಕ್ಕೆ ಕಾರಣವಾಯಿತು...’’ ಪ್ರ.ಚೌ. ಸಮಜಾಯಿಷಿ ಹೇಳಿದ್ದಷ್ಟೇ,

ಡೊಲಾಂಡ್ ದೋಸ್ತ್ ಬಸ ಬಸನೆ ವಾಂತಿ ಮಾಡತೊಡಗಿದ. 

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News