ಬೀಫ್ ನಿಷೇಧದ ಬಗ್ಗೆ ಬಿಜೆಪಿ ದ್ವಂದ್ವ: ರಾಜ್ಯಪಾಲರಿಗೆ ಉದ್ಧವ್ ತಿರುಗೇಟು ನೀಡಿದ್ದು ಹೀಗೆ

Update: 2020-10-26 04:16 GMT

ಮುಂಬೈ, ಅ.26: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ದಸರಾ ದಿನವಾದ ರವಿವಾರ ಕೂಡಾ ಮುಂದುವರಿದಿದೆ. ತಮ್ಮ ವಿಜಯ ದಶಮಿ ಸಂದೇಶದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್‌ಯಾರಿ ವಿರುದ್ಧ ವಾಗ್ದಾಳಿ ನಡೆಸಿದ ಉದ್ಧವ್, ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ತಮ್ಮ ಭಾಷಣದಲ್ಲಿ ನೀಡಿದ ಸಲಹೆಯನ್ನು ಪಾಲಿಸಿ ಎಂದು ವ್ಯಂಗ್ಯವಾಡಿದ್ದಾರೆ.

ಆರೆಸ್ಸೆಸ್ ಮುಖ್ಯಸ್ಥರ ಹಿಂದುತ್ವದ ವ್ಯಾಖ್ಯಾನವನ್ನು ಮಾನದಂಡವಾಗಿ ಪರಿಗಣಿಸಿ, "ನಮಗೆ ಯಾರಾದರೂ ಸವಾಲು ಹಾಕಲು ಬಯಸಿದರೆ ನೀವೇ ಜವಾಬ್ದಾರರಾಗುತ್ತೀರಿ" ಎಂದು ಎಚ್ಚರಿಕೆ ನೀಡಿದರು.

"ನಾವು ಇನ್ನೂ ದೇವಾಲಯಗಳನ್ನು ತೆರೆಯದಿರುವುದರಿಂದ ಹಿಂದುತ್ವದ ಬಗ್ಗೆ ನಮ್ಮನ್ನು ಪ್ರಶ್ನಿಸಲಾಗುತ್ತಿದೆ" ಎಂದು ರಾಜ್ಯಪಾಲರ ಹೆಸರು ಉಲ್ಲೇಖಿಸದೇ ಮಾತಿನ ಚಾಟಿ ಬೀಸಿದರು.

"ನೀವು ನಮ್ಮ ಹಿಂದುತ್ವದ ಬಗ್ಗೆ ಮಾತನಾಡುತ್ತೀರಿ. ಮಹಾರಾಷ್ಟ್ರದಲ್ಲಿ ನೀವು ಗೋಮಾಂಸ ನಿಷೇಧಿಸಿದ್ದೀರಿ. ಗೋವಾದಲ್ಲಿ ನಿಮಗೆ ಗೋಮಾಂಸ ಪಥ್ಯ. ಇದು ನಿಮ್ಮ ಹಿಂದುತ್ವವೇ?" ಎಂದು ಪ್ರಶ್ನಿಸಿದರು. ಬಿಜೆಪಿ ಈ ವಿವಾದಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂಬ ಟೀಕಾಕಾರರ ಅಂಶವನ್ನೇ ಉದ್ಧವ್ ಅಸ್ತ್ರವಾಗಿ ಬಳಸಿಕೊಂಡರು.

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಅಭಿಪ್ರಾಯವನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, "ಹಿಂದುತ್ವ ಕೇವಲ ಪೂಜೆಗಳಿಗೆ ಸಂಬಂಧಿಸಿದ್ದಲ್ಲ. ಆದ್ದರಿಂದ ಜನ ಕಪ್ಪು ಟೊಪ್ಪಿ ಧರಿಸಿ ನಮ್ಮ ನಂಬಿಕೆಗಳನ್ನು ಪ್ರಶ್ನಿಸುತ್ತಿದ್ದಾರೆ. ನಮ್ಮನ್ನು ಜಾತ್ಯತೀತರು ಎಂದು ಕರೆಯುವವರು ಮೋಹನ್ ಭಾಗ್ವತ್ ಅವರ ಇಂದಿನ ಭಾಷಣ ಕೇಳಿ" ಎಂದು ಚುಚ್ಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News