ಕಾಲೇಜು ವಿದ್ಯಾರ್ಥಿನಿಯ ಗುಂಡಿಕ್ಕಿ ಹತ್ಯೆ, ಇಬ್ಬರು ಆರೋಪಿಗಳ ಬಂಧನ

Update: 2020-10-27 16:34 GMT

ಹೊಸದಿಲ್ಲಿ: ಫರಿದಾಬಾದ್‌ನಲ್ಲಿ ಸೋಮವಾರ 20ರ ಹರೆಯದ ಕಾಲೇಜು ವಿದ್ಯಾರ್ಥಿನಿಯನ್ನು ಆಕೆಯ ಕಾಲೇಜಿನ ಹೊರಗೆ ಹಾಡಹಗಲೇ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಇಬ್ಬರು ಆರೋಪಿಗಳನ್ನು  ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಮಧ್ಯಾಹ್ನ 3:45ರ ಸುಮಾರಿಗೆ ಬಲ್ಲಾಬ್‌ಘರ್ ಪ್ರದೇಶದಲ್ಲಿ ನಿಕಿತಾ ತೋಮರ್ ಎಂಬ ಯುವತಿ ಪರೀಕ್ಷೆಗೆ ಹಾಜರಾಗಿ ಕಾಲೇಜಿನಿಂದ ಹೊರಬರುತ್ತಿರುವಾಗ ಈ ಘಟನೆ ನಡೆದಿದೆ. ನಿಕಿತಾ ಅಂತಿಮ ವರ್ಷದ ಬಿಕಾಂ ಪದವಿಯಲ್ಲಿ ಓದುತ್ತಿದ್ದಳು. ನಿಕಿತಾ ತನ್ನ ಸ್ನೇಹಿತೆಯರೊಂದಿಗೆ ಅಗರ್‌ವಾಲ್ ಕಾಲೇಜಿನಿಂದ ಹೊರ ಬರುತ್ತಿದ್ದಂತೆ ಐ 20 ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಯುವತಿಯನ್ನು ಕಾರಿನೊಳಗೆ ಸೆಳೆಯಲು ಯತ್ನಿಸಿದ್ದು, ಯುವತಿ ಇಬ್ಬರಿಗೂ ಎಚ್ಚರಿಕೆ ನೀಡಿದ್ದು, ಆಗ ದುಷ್ಕರ್ಮಿಗಳು ಯುವತಿಯ ಎದೆಗೆ ಗುಂಡು ಹಾರಿಸಿದ್ದಾರೆ. ಯುವತಿ ತೀವ್ರ ರಕ್ತಸ್ರಾವದಿಂದಾಗಿ ಕೆಳಗೆ ಬಿದ್ದದ್ದಾಳೆ. ಬಳಿಕ ಇಬ್ಬರು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಭಯಾನಕ ದ್ಯಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

  ಯುವತಿಗೆ ಗುಂಡಿಕ್ಕಿರುವ ಆರೋಪಿ ತೌಫೀಕ್, ನಿಕಿತಾ ತೋಮರ್‌ರೊಂದಿಗೆ 10ನೇ ತರಗತಿಯ ತನಕ ಒಟ್ಟಿಗೆ ಅಧ್ಯಯನ ಮಾಡಿದ್ದ. ಇಬ್ಬರು ಪರಸ್ಪರ ಪರಿಚಿತರಾಗಿದ್ದು, 2018ರಲ್ಲಿ ನಿಕಿತಾಳನ್ನು ಅಪಹರಿಸಿದ್ದ ಎಂದು ಮೂಲಗಳು ತಿಳಿಸಿವೆ. ಅಪಹರಣ ಘಟನೆಯ ವೇಳೆ ಯುವತಿಯ ಕುಟುಂಬ ಮೊದಲಿಗೆ ಎಫ್‌ಐಆರ್ ದಾಖಲಿಸಿತ್ತು. ನಂತರ ಸಾಮಾಜಿಕ ಕಳಂಕದ ಭೀತಿಯಲ್ಲಿ, ಮಗಳ ಹೆಸರನ್ನು ಉಳಿಸುವ ಉದ್ದೇಶದಿಂದ ಪ್ರಕರಣ ಹಿಂಪಡೆದುಕೊಂಡಿತ್ತು. ಆದರೆ ಆರೋಪಿ ಮಾತ್ರ ಯುವತಿಗೆ ಕಿರುಕುಳವನ್ನು ನೀಡುತ್ತಲೇ ಇದ್ದ ಎನ್ನಲಾಗಿದೆ. ನಿಕಿತಾ ಸೆಕ್ಟರ್ 23ರಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. 

ಬಲ್ಲಬಗಢದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಹೇಳಿದ್ದಾರೆ. ಮೃತ ಯುವತಿಯ ಕುಟುಂಬದವರಿಗೆ ನ್ಯಾಯ ಒದಗಿಸಲಾಗುವುದು. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದ್ದು ಈ ತಂಡ ತ್ವರಿತ ತನಿಖೆ ನಡೆಸಿ ವರದಿ ಒಪ್ಪಿಸಲಿದೆ ಎಂದು ರಾಜ್ಯದ ಗೃಹಸಚಿವ ಅನಿಲ್ ವಿಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News