ನ.5ರೊಳಗೆ ಸಾಲಗಾರರ ಖಾತೆಗಳಿಗೆ ಚಕ್ರಬಡ್ಡಿ ಮೊತ್ತವನ್ನು ಮರು ಜಮಾ ಮಾಡುವಂತೆ ಬ್ಯಾಂಕುಗಳಿಗೆ ನಿರ್ದೇಶ

Update: 2020-10-27 16:03 GMT

ಹೊಸದಿಲ್ಲಿ,ಅ.27: ಕೊರೋನ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರು ತಿಂಗಳ ಅವಧಿಯ ಆರ್‌ಬಿಐನ ಸಾಲ ಮರುಪಾವತಿ ಸ್ತಂಭನ ಯೋಜನೆಯಡಿ ಎರಡು ಕೋ.ರೂ.ವರೆಗಿನ ಸಾಲಗಳ ಮೇಲೆ ಸಂಗ್ರಹಿಸಲಾಗಿದ್ದ ಚಕ್ರಬಡ್ಡಿಯನ್ನು ಅರ್ಹ ಸಾಲಗಾರರ ಖಾತೆಗಳಿಗೆ ನ.5ರೊಳಗೆ ಮರು ಜಮಾ ಮಾಡುವಂತೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ಸಾಲಗಳನ್ನು ನೀಡಿರುವ ಸಂಸ್ಥೆಗಳು ಸಾಲಗಾರರ ಖಾತೆಗಳಿಗೆ 2020,ಮಾ.1ರಿಂದ 2020,ಆ.31ರವರೆಗಿನ ಅವಧಿಯ ಚಕ್ರಬಡ್ಡಿ ಮತ್ತು ಸರಳಬಡ್ಡಿ ನಡುವಿನ ವ್ಯತ್ಯಾಸವನ್ನು ಜಮಾ ಮಾಡಿದ ಬಳಿಕ ಕೇಂದ್ರದಿಂದ ಅದನ್ನು ಪಡೆದುಕೊಳ್ಳಲಿವೆ. ಇದಕ್ಕಾಗಿ ಎಸ್‌ಬಿಐ ಅನ್ನು ನೋಡಲ್ ಏಜೆನ್ಸಿಯಾಗಿ ನೇಮಕಗೊಳಿಸಲಾಗಿದೆ ಎಂದು ವಿತ್ತ ಸಚಿವಾಲಯವು ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.

ಸಾಲ ಸ್ತಂಭನ ಅವಧಿಗೆ ಸಂಬಂಧಿಸಿದಂತೆ ಚಕ್ರಬಡ್ಡಿ ಮನ್ನಾ ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.

ಆರ್‌ಬಿಐನ ಸಾಲ ಮರುಪಾವತಿ ಸ್ತಂಭನ ಯೋಜನೆಯಡಿ ಎರಡು ಕೋ.ರೂ.ವರೆಗಿನ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾವನ್ನು ಸರಕಾರವು ಸಾಧ್ಯವಾದಷ್ಟು ಶೀಘ್ರ ಅನುಷ್ಠಾನಿಸಬೇಕು ಎಂದು ಅ.14ರಂದು ವಿಚಾರಣೆ ಸಂದರ್ಭ ತಿಳಿಸಿದ್ದ ಸರ್ವೋಚ್ಚ ನ್ಯಾಯಾಲಯವು, ಶ್ರೀಸಾಮಾನ್ಯನ ದೀಪಾವಳಿ ಸರಕಾರದ ಕೈಗಳಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News