ಚೀನಾಕ್ಕೆ ಸಡ್ಡು ಹೊಡೆದ ಭಾರತ-ಅಮೆರಿಕ ಪ್ರಮುಖ ರಕ್ಷಣಾ ಒಪ್ಪಂದಕ್ಕೆ ಅಂಕಿತ

Update: 2020-10-27 16:11 GMT

  ಹೊಸದಿಲ್ಲಿ,ಅ.27: ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಮಂಗಳವಾರ ಇಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ.ಎಸ್ಪರ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರೊಂದಿಗೆ ಮೂರನೇ ಆವೃತ್ತಿಯ 2+2 ಮಾತುಕತೆಗಳನ್ನು ನಡೆಸಿದ್ದು,ಈ ಸಂದರ್ಭ ಬಹು ನಿರೀಕ್ಷಿತ ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ (ಬಿಇಸಿಎ)ಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿದವು. ಈ ಒಪ್ಪಂದದಡಿ ಭಾರತಕ್ಕೆ ಅಮೆರಿಕದಿಂದ ವರ್ಗೀಕೃತ ಭೂವ್ಯೋಮ ದತ್ತಾಂಶ ಮತ್ತು ಮಿಲಿಟರಿ ಪ್ರಾಮುಖ್ಯದ ಸೂಕ್ಷ್ಮ ಮಾಹಿತಿಗಳು ಲಭ್ಯವಾಗಲಿವೆ.

ಹೈದರಾಬಾದ್ ಭವನದಲ್ಲಿ ನಡೆದ ಉನ್ನತ ಮಟ್ಟದ ಮಾತುಕತೆಗಳ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜನಾಥ ಸಿಂಗ್ ಅವರು,‘ಹಲವಾರು ಪ್ರಮುಖ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿದ್ದೇವೆ. ಬಿಇಸಿಎಗೆ ಸಹಿ ಹಾಕಿದ್ದು ಮಹತ್ವದ ಹೆಜ್ಜೆಯಾಗಿದೆ. ಅಮೆರಿಕದೊಂದಿಗೆ ನಮ್ಮ ಮಿಲಿಟರಿ ಸಹಕಾರವು ಉತ್ತಮವಾಗಿ ಮುನ್ನಡೆಯುತ್ತಿದೆ. ರಕ್ಷಣಾ ಉಪಕರಣಗಳ ಜಂಟಿ ಅಭಿವೃದ್ಧಿಗಾಗಿ ಯೋಜನೆಗಳನ್ನು ನಾವು ಗುರುತಿಸಿದ್ದೇವೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವ ನಮ್ಮ ಬದ್ಧತೆಯನ್ನು ನಾವು ಮರುದೃಢೀಕರಿಸಿದ್ದೇವೆ ’ಎಂದು ತಿಳಿಸಿದರು.

ಬಿಇಸಿಎ ಅಮೆರಿಕವು ಭಾರತದೊಂದಿಗೆ ಮಾಡಿಕೊಂಡಿರುವ ನಾಲ್ಕನೇ ಮತ್ತು ಅಂತಿಮ ‘ಬುನಾದಿ’ ಒಡಂಬಡಿಕೆಯಾಗಿದ್ದು,ಅಮೆರಿಕದ ಮಿಲಿಟರಿ ಉಪಗ್ರಹಗಳಿಂದ ನಿಖರವಾದ ದತ್ತಾಂಶಗಳು ಮತ್ತು ಭೂಪ್ರದೇಶಗಳ ಚಿತ್ರಗಳನ್ನು ಪಡೆದುಕೊಳ್ಳಲು ಭಾರತಕ್ಕೆ ಅವಕಾಶ ಕಲ್ಪಿಸಲಿದೆ. ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಒಪ್ಪಂದವು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿಯ ಸ್ಥಿತಿಯ ಕುರಿತೂ ಸಭೆಯಲ್ಲಿ ಚರ್ಚಿಸಲಾಗಿದೆ. ರಾಷ್ಟ್ರೀಯ ಭದ್ರತೆ ಕುರಿತು ಉಭಯ ರಾಷ್ಟ್ರಗಳ ನಡುವೆ ಹೆಚ್ಚಿನ ಸಹಮತ ಮೂಡಿದೆ. ಇಂಡೋ-ಪೆಸಿಫಿಕ್ ಪ್ರದೇಶವು ಚರ್ಚೆಗಳಲ್ಲಿ ಆದ್ಯತೆ ಪಡೆದುಕೊಂಡಿತ್ತು ಎಂದು ಎಸ್.ಜೈಶಂಕರ್ ತಿಳಿಸಿದರು.

  ಚೀನಾ ಪ್ರದೇಶದಲ್ಲಿ ತನ್ನ ಆರ್ಥಿಕ ಮತ್ತು ಮಿಲಿಟರಿ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ರಕ್ಷಣಾ ಮತ್ತು ಭದ್ರತಾ ಸಹಭಾಗಿತ್ವವು ಇಂಡೋ-ಪೆಸಿಫಿಕ್‌ನಲ್ಲಿಯ ಸ್ಥಿತಿಯ ಮೇಲೆ ಕಣ್ಣಿರಿಸಲಿದೆ. ಒಪ್ಪಂದದಡಿ ಅಮೆರಿಕವು ಒದಗಿಸಲಿರುವ ಸೂಕ್ಷ್ಮ ಉಪಗ್ರಹ ಮತ್ತು ಸೆನ್ಸರ್ ದತ್ತಾಂಶಗಳಿಂದ ಭಾರತಕ್ಕೆ ಹಿಂದು ಮಹಾಸಾಗರದಲ್ಲಿ ಚೀನಿ ಯುದ್ಧ ನೌಕೆಗಳ ಮೇಲೆ ನಿಕಟ ನಿಗಾಯಿರಿಸಲು ಸಾಧ್ಯವಾಗಲಿದೆ ಎಂದು ಎಸ್ಪರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರೆ,ತನ್ನ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳುವ ಭಾರತದ ಪ್ರಯತ್ನಗಳಿಗೆ ಅಮೆರಿಕದ ಬೆಂಬಲವನ್ನು ವ್ಯಕ್ತಪಡಿಸಿದ ಪಾಂಪಿಯೊ,‘ಭಾರತದ ಸಾರ್ವಭೌಮತ್ವಕ್ಕೆ ಬೆದರಿಕೆಗಳನ್ನು ಎದುರಿಸಲು ನಾವು ಅದರ ಜೊತೆಯಾಗಿ ನಿಲ್ಲಲಿದ್ದೇವೆ ’ ಎಂದು ಹೇಳಿದರು.

ಉಭಯ ದೇಶಗಳ ಹಿರಿಯ ಮಿಲಿಟರಿ ಮತ್ತು ಭದ್ರತಾ ಅಧಿಕಾರಿಗಳು ಮಾತುಕತೆ ವೇಳೆ ಉಪಸ್ಥಿತರಿದ್ದು,ತಮ್ಮ ನಾಯಕರಿಗೆ ನೆರವಾದರು.

ಪೂರ್ವ ಲಡಾಖ್‌ನಲ್ಲಿ ಚೀನಾ ಮತ್ತು ಭಾರತಗಳ ನಡುವಿನ ಗಡಿ ಬಿಕ್ಕಟ್ಟಿನ ಉದ್ವಿಗ್ನ ಸ್ಥಿತಿ,ವ್ಯಾಪಾರ ಸುಂಕ ಸೇರಿದಂತೆ ಹಲವಾರು ವಿಷಯಗಳಲ್ಲಿ ಚೀನಾ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ವಿವಾದಗಳು ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮಿಲಿಟರಿಯ ಆಕ್ರಮಣಕಾರಿ ಚಲನವಲನಗಳ ನಡುವೆ ಇಂದಿನ ಮಾತುಕತೆಗಳು ನಡೆದಿವೆ.

 ಸಭೆಗೆ ಮುನ್ನ ಪಾಂಪಿಯೊ ಮತ್ತು ಎಸ್ಪರ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನೂ ಭೇಟಿಯಾಗಿದ್ದರು. ರಚನಾತ್ಮಕ ಮಾತುಕತೆಗಳನ್ನು ನಡೆಸಿದ ಅವರು ವ್ಯೂಹಾತ್ಮಕ ಮಹತ್ವದ ಹಲವಾರು ವಿಷಯಗಳು ಮತ್ತು ಸವಾಲುಗಳ ಬಗ್ಗೆ ಚರ್ಚಿಸಿದರು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಬೆಳಿಗ್ಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದ ಪಾಂಪಿಯೊ ಮತ್ತು ಎಸ್ಪರ್ ಹುತಾತ್ಮ ಯೋಧರಿಗೆ ಗೌರವಗಳನ್ನು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News