ಮಧ್ಯಪ್ರದೇಶ ಉಪಚುನಾವಣೆ: ಬಿಜೆಪಿಯ ಇಮಾರ್ತಿ ದೇವಿಗೆ ನೋಟಿಸ್

Update: 2020-10-27 16:40 GMT

ಹೊಸದಿಲ್ಲಿ, ಅ.27: ಮಧ್ಯಪ್ರದೇಶದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಯ ಇಮಾರ್ತಿ ದೇವಿ ತನ್ನ ರಾಜಕೀಯ ಪ್ರತಿಸ್ಪರ್ಧಿ ಮತ್ತು ಅವರ ಕುಟುಂಬದ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ. 

ರಾಜಕೀಯ ಇದಿರಾಳಿಯ ಹೆಸರೆತ್ತದೆ ಟೀಕಿಸಿದ್ದ ಇಮಾರ್ತಿ ದೇವಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬಳಿಕ ಆ ವ್ಯಕ್ತಿ ಹುಚ್ಚನಾಗಿದ್ದಾರೆ. ಅವರ ತಾಯಿ ಮತ್ತು ಸಹೋದರಿ ಬಹುಷಃ ಬಂಗಾಳದ ‘ಐಟಂ’ ಆಗಿರಬಹುದು ಎಂದು ಹೇಳಿದ್ದು, ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿ ಇಮಾರ್ತಿ ದೇವಿಗೆ ನೋಟಿಸ್ ಜಾರಿಗೊಳಿಸಿದ್ದು 48 ಗಂಟೆಯೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ. ಇದಕ್ಕೆ ತಪ್ಪಿದರೆ, ಅವರ ಅಭಿಪ್ರಾಯ ಪಡೆಯದೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇಮಾರ್ತಿ ದೇವಿ ಮಧ್ಯಪ್ರದೇಶ ಸರಕಾರದ ಸಚಿವರಾಗಿದ್ದಾರೆ. ಕಳೆದ ವಾರ ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಕಮಲನಾಥ್, ಇಮಾರ್ತಿ ದೇವಿಯನ್ನು ‘ಐಟಂ’ ಎಂದು ಲೇವಡಿ ಮಾಡಿದ್ದರು. ಈ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಇಂತಹ ಪದಗಳನ್ನು ಬಳಸದಂತೆ ಕಮಲನಾಥ್‌ಗೆ ಸಲಹೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News