ಅಯೋಧ್ಯೆ ಕುರಿತು ನಿತೀಶ್ ಕುಮಾರ್ ವ್ಯಂಗ್ಯವನ್ನು ನೆನಪಿಸಿ ಕುಟುಕಿದ ಪ್ರಧಾನಿ ಮೋದಿ

Update: 2020-10-28 08:13 GMT

ದರ್ಭಾಂಗ :  ಬಿಹಾರದ  ಮಿಥಿಲಾದಲ್ಲಿ ಇಂದು ತಮ್ಮ  ಎರಡನೇ ಹಂತದ ಚುನಾವಣಾ ರ್ಯಾಲಿಯೊಂದರಲ್ಲಿ  ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಭಾಷಣದ ಆರಂಭದಲ್ಲಿ  ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಹೊಗಳಿದ್ದರೂ ನಂತರ  ಅಯೋಧ್ಯೆ ರಾಮ ಮಂದಿರ ಕುರಿತಂತೆ  ಈ ಮೊದಲು ನಿತೀಶ್ ಹೇಳಿದ್ದ ವ್ಯಂಗ್ಯದ ಮಾತುಗಳನ್ನು ನೆನಪಿಸಿದರು. ಈ ಮೂಲಕ ಪ್ರಧಾನಿ ಅವರು ನಿತೀಶ್ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿದರು ಎಂದು  ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

``ಶತಮಾನಗಳ ತಪಸ್ಸಿನ ನಂತರ ಕೊನೆಗೂ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ನಮ್ಮಲ್ಲಿ ತಾರೀಕಿನ ಕುರಿತು ಕೇಳುತ್ತಿದ್ದ ರಾಜಕಾರಣಿಗಳು ಈಗ ಅನಿವಾರ್ಯವಾಗಿ ಹೊಗಳುವಂತಾಗಿದೆ. ಇದು ಬಿಜೆಪಿ, ಎನ್‍ಡಿಎ ಹೆಗ್ಗುರುತು, ನಾವು ಹೇಳಿದಂತೆ ಮಾಡುತ್ತೇವೆ,'' ಎಂದು ಪ್ರಧಾನಿ ಹೇಳಿದರು.

ವೇದಿಕೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಸಮ್ಮುಖದಲ್ಲಿಯೇ ಪ್ರಧಾನಿ ಆಡಿದ ಈ ಮಾತುಗಳು 2015ರಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿಯನ್ನು ಟೀಕಿಸಿ ನೀಡಿದ ಹೇಳಿಕೆಯನ್ನು ಹಲವರು ನೆನಪು ಮಾಡುವಂತಾಗಿದೆ. ಆಗ ಲಾಲು ಪ್ರಸಾದ್ ಯಾದವ್ ಹಾಗೂ ಕಾಂಗ್ರೆಸ್ ಜತೆಗಿದ್ದ  ನಿತೀಶ್ ಬಿಜೆಪಿಯನ್ನು ಟೀಕಿಸುತ್ತಾ ``ಬಿಜೆಪಿ ಹಾಗೂ ಆರೆಸ್ಸೆಸ್ ಮಂದಿ ``ರಾಮ್ ಲಲ್ಲಾ ಹಮ್ ಆಯೇಂಗೆ, ಮಂದಿರ್ ವಹೀ ಬನಾಯೇಂಗೆ ಪರ್ ತಾರೀಖ್ ನಹೀಂ ಬತಾಯೇಂಗೆ,'' (ರಾಮ್ ಲಲ್ಲಾ ನಾವು ಬರುತ್ತೇವೆ, ಮಂದಿರ ಅಲ್ಲಿಯೇ ನಿರ್ಮಿಸುತ್ತೇವೆ ಆದರೆ ತಾರೀಕು ನೀಡುವುದಿಲ್ಲ),'' ಎಂದಿದ್ದರು.

ಆದರೆ ಬುಧವಾರದ ತಮ್ಮ ಭಾಷಣದಲ್ಲಿ ತಮ್ಮ ಅಚ್ಚರಿಯ ಹೇಳಿಕೆಗಿಂತ ಮುಂಚೆ ನಿತೀಶ್‍ರನ್ನು ಹಾಡಿ ಹೊಗಳಿದ ಮೋದಿ ``ಬಿಹಾರ ನಿತೀಶ್ ಜಿ ಅವರ ನಾಯಕತ್ವದಲ್ಲಿ ಕಳೆದ 15 ವರ್ಷಗಳಲ್ಲಿ ಪ್ರಗತಿ ಕಂಡಿದೆ,'' ಎಂದರು. ಅವರನ್ನು ಭಾವಿ ಮುಖ್ಯಮಂತ್ರಿ ಎಂದು ಬಣ್ಣಿಸಿದ ಪ್ರಧಾನಿ, ಬಿಹಾರದ ಆರ್ಥಿಕ ಪ್ರಗತಿಯ ಶ್ರೇಯಸ್ಸನ್ನು ಅವರಿಗೆ ಸಲ್ಲಿಸಿದರು.

ಏತ್ಮಧ್ಯೆ ಬಿಹಾರದ 71 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಬಿಗಿ ಭದ್ರತೆ ಹಾಗೂ ಕೋವಿಡ್ -19 ಮಾರ್ಗಸೂಚಿಯೊಂದಿಗೆ ಮತದಾನ ನಡೆಯುತ್ತಿದೆ.  ಈ ವಿಧಾನಸಭೆಯ 1 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯವನ್ನು ಎರಡು ಕೋಟಿಗೂ ಅಧಿಕ ಮತದಾರರು ಬುಧವಾರ ನಿರ್ಧರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News