ಗಂಗಾ ಜಲಾನಯನ ಪ್ರದೇಶದಲ್ಲಿ ಕಳೆದ ಮೂರು ದಶಕಗಳಲ್ಲಿ ಆರ್ಸೆನಿಕ್ ಮಿಶ್ರಿತ ನೀರಿನಿಂದ 10 ಲಕ್ಷಕ್ಕೂ ಅಧಿಕ ಜನರ ಸಾವು

Update: 2020-10-28 16:35 GMT
image courtesy : Umesh Kumar Ray 

ಹೊಸದಿಲ್ಲಿ, ಅ.28: ಗಂಗಾನದಿಯ ಜಲಾನಯನ ಪ್ರದೇಶದಲ್ಲಿಯ ಎಷ್ಟೋ ಗ್ರಾಮಗಳಲ್ಲಿ ವಿಧವೆಯರೇ ಹೆಚ್ಚಾಗಿದ್ದಾರೆ. ಅವರ ಗಂಡಂದಿರೆಲ್ಲ ವರ್ಷಗಳಿಂದ ಆರ್ಸೆನಿಕ್ ಮಿಶ್ರಿತ ನೀರನ್ನು ಕುಡಿದು ಸಾವನ್ನಪ್ಪಿದ್ದಾರೆ. ಈ ಪ್ರದೇಶಕ್ಕೆ ಮದುವೆಯಾಗಿ ಬರುವ ಹೆಣ್ಣುಮಕ್ಕಳೂ ನಂತರ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಕುಡಿಯುವ ನೀರಿನಲ್ಲಿ ಆರ್ಸೆನಿಕ್ ಸೇರಿರುವುದರಿಂದ ಕಳೆದ 30 ವರ್ಷಗಳಲ್ಲಿ ಭಾರತದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎನ್ನುತ್ತಾರೆ ಇನ್ನರ್ ವಾಯ್ಸ್ ಫೌಂಡೇಷನ್ (ಐವಿಎಫ್)ನ ಸ್ಥಾಪಕ ಸೌರಭ್ ಸಿಂಗ್. ಈ ಸಂಸ್ಥೆಯು ಆರ್ಸೆನಿಕ್ ಮಿಶ್ರಿತ ನೀರಿನ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುತ್ತಿದೆ. ಈ ಬಗ್ಗೆ ಕಪಿಲ್ ಕಾಜಲ್ ಅವರು ಬರೆದ ವಿಶೇಷ ತನಿಖಾ ವರದಿಯನ್ನು thethirdpole.net ಪ್ರಕಟಿಸಿದೆ.

ಗಂಗಾ ಜಲಾನಯನ ಪ್ರದೇಶದ ಅಂತರ್ಜಲದಲ್ಲಿ ಆರ್ಸೆನಿಕ್ ನೈಸರ್ಗಿಕವಾಗಿ ಬೆರೆತುಕೊಂಡಿದೆ. ಇದರ ಜೊತೆಗೆ ಕೈಗಾರಿಕಾ ಮಾಲಿನ್ಯ ಮತ್ತು ಗಣಿಗಾರಿಕೆಯಿಂದಲೂ ಸಾಕಷ್ಟು ಆರ್ಸೆನಿಕ್ ಅಂತರ್ಜಲದಲ್ಲಿ ಸೇರುತ್ತಿದೆ. ಆರ್ಸೆನಿಕ್ ಮಿಶ್ರಿತ ನೀರಿನಿಂದ ಭಾರತದ ಅಂದಾಜು ಐದು ಕೋಟಿ ಜನರು ಮಾತ್ರವಲ್ಲ,ನೆರೆಯ ಬಾಂಗ್ಲಾದೇಶ,ನೇಪಾಳ ಮತ್ತು ಟಿಬೆಟ್‌ಗಳ ಕೆಲವು ಭಾಗಗಳ ಜನರೂ ಪೀಡಿತರಾಗಿದ್ದಾರೆ. ಕೆಲವು ಪ್ರದೇಶಗಳಲ್ಲಿ ನೀರಿನಲ್ಲಿ ಆರ್ಸೆನಿಕ್ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆಯು ಸುರಕ್ಷಿತವೆಂದು ಶಿಫಾರಸು ಮಾಡಿರುವ ಮಟ್ಟದ 300ಕ್ಕೂ ಹೆಚ್ಚು ಪಟ್ಟನ್ನು ತಲುಪಿದೆ. ಅಂತರ್ಜಲದ ಅತಿಯಾದ ಬಳಕೆಯಿಂದ ಆರ್ಸೆನಿಕ್ ಪ್ರಭಾವವು ಕೃಷಿ ಬೆಳೆಗಳನ್ನೂ ಕಾಡುತ್ತಿದೆ.

ಆರ್ಸೆನಿಕ್ ಸಮಸ್ಯೆಯು ಉತ್ತರಪ್ರದೇಶ,ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿಯ ಗ್ರಾಮಗಳಲ್ಲಿ ಬದುಕನ್ನು ದುರ್ಭರವಾಗಿಸಿದೆ. ಗಂಗಾ ನದಿಯ ದಂಡೆಯುದ್ದಕ್ಕೂ ಇರುವ ಗ್ರಾಮಗಳಲ್ಲಿನ ಮಿಲಿಯಗಟ್ಟಲೆ ಜನರು ಚರ್ಮರೋಗ, ಮೂತ್ರಪಿಂಡ, ಯಕೃತ್ತು ಮತ್ತು ಹೃದಯ ರೋಗಗಳಿಂದ ನರಳುತ್ತಿದ್ದಾರೆ. ಕೊಳವೆ ಬಾವಿಗಳು ಮತ್ತು ನಲ್ಲಿ ನೀರಿನಲ್ಲಿಯೂ ಆರ್ಸೆನಿಕ್ ಮಿಶ್ರಣಗೊಂಡಿರುವುದರಿಂದ ಹಲವು ಸಮಯದಿಂದ ಈ ನೀರನ್ನು ಸೇವಿಸುತ್ತಿರುವ ಈ ಜನರು ನರಶಾಸ್ತ್ರೀಯ ರೋಗಗಳು ಮತ್ತು ಕ್ಯಾನ್ಸರ್‌ಗೂ ಗುರಿಯಾಗುತ್ತಿದ್ದಾರೆ. ಇಲ್ಲಿ ನವಜಾತ ಶಿಶುಗಳು ಸಾಯುವ ಪ್ರಕರಣಗಳೂ ಹೆಚ್ಚುತ್ತಿವೆ.

ತನ್ನ 28 ವರ್ಷಗಳ (1988ರಿಂದ 2016)ಅಧ್ಯಯನದ ಅಂಗವಾಗಿ ಐವಿಎಫ್ ಚರ್ಮರೋಗದಿಂದ ಬಳಲುತ್ತಿದ್ದ 33 ಗ್ರಾಮಗಳ 1,194 ಜನರನ್ನು 10 ವರ್ಷಗಳ ಬಳಿಕ ಮರು ತಪಾಸಣೆ ನಡೆಸಿತ್ತು. ಈ ಪೈಕಿ ಶೇ.14ರಷ್ಟು ಜನರು ಗುಣವಾಗದ ಅಲ್ಸರ್‌ಗಳಿಂದ ಸಾವನ್ನಪ್ಪಿದ್ದರೆ,ಶೇ.48ರಷ್ಟು ಆರ್ಸೆನಿಕ್ ರೋಗಿಗಳು ಬೊವೆನ್ಸ್ ಕಾಯಿಲೆ ಮತ್ತು ಇತರ ಕ್ಯಾನ್ಸರ್‌ಗಳಿಂದ ಬಳಲುತ್ತಿರುವುದು ಪತ್ತೆಯಾಗಿತ್ತು.

ಪ.ಬಂಗಾಳದಲ್ಲಿ 1980ರ ದಶಕದ ಆರಂಭದಲ್ಲಿ ಮೊದಲ ಬಾರಿಗೆ ಆರ್ಸೆನಿಕ್ ಕಲಬೆರಕೆ ಪತ್ತೆಯಾಗಿತ್ತು. ಈ ಬಗ್ಗೆ ಗಮನ ಹರಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸರಕಾರವನ್ನು ಆದೇಶಿಸಿತ್ತು. ಹಲವಾರು ಎನ್‌ಜಿಒಗಳೂ ಈ ಬಗ್ಗೆ ಸರಕಾರದ ಗಮನವನ್ನು ಸೆಳೆಯಲು ಪ್ರಯತ್ನಿಸಿದ್ದವು. ಆದರೆ ಆಡಳಿತ ಯಂತ್ರವು ಈ ಬಗ್ಗೆ ಎಳ್ಳಷ್ಟೂ ತಲೆ ಕೆಡಿಸಿಕೊಂಡಿಲ್ಲ ಮತ್ತು ಗ್ರಾಮೀಣ ಜನರಿಗೆ ಈ ವಿಷಯುಕ್ತ ನೀರನ್ನು ಕುಡಿಯುವುದನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ.

ಭಾರತದ ನ್ಯಾಷನಲ್ ಹೆಲ್ತ್ ಪ್ರೊಫೈಲ್ 2019ರಂತೆ ಉತ್ತರ ಪ್ರದೇಶದ 17,ಬಿಹಾರದ 11 ಮತ್ತು ಪ.ಬಂಗಾಳದ 9 ಜಿಲ್ಲೆಗಳಲ್ಲಿ ನೀರಿನಲ್ಲಿ ಅತ್ಯಧಿಕ ಆರ್ಸೆನಿಕ್ ಇರುವುದು ಪತ್ತೆಯಾಗಿದೆ.

ಆರ್ಸೆನಿಕ್‌ಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಚರ್ಮದ ಸಮಸ್ಯೆಗಳ ಜೊತೆಗೆ ನರಮಂಡಲ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗೆ ಹಾನಿಯುಂಟಾಗುತ್ತದೆ. ಹೃದಯ ರಕ್ತನಾಳಗಳ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಧುಮೇಹ,ಉಸಿರಾಟ ಕಾಯಿಲೆ ಮತ್ತು ಜಠರಗರುಳು ರೋಗಗಳು,ಕ್ಯಾನ್ಸರ್ ಉಂಟಾಗುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯು ಹೇಳಿದೆ.

ಆರ್ಸೆನಿಕ್ ಮಿಶ್ರಿತ ನೀರಿನ ಸೇವನೆ ಈ ಗ್ರಾಮಗಳ ಲಕ್ಷಾಂತರ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಿದೆ. ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತಗೊಂಡಿದೆ. ಹಲವಾರು ಯುವಕರು ಸೇನೆ ಮತ್ತು ಅರೆ ಸೇನಾಪಡೆಗಳಿಗೆ ಸೇರಲು ಪ್ರಯತ್ನಿಸುತ್ತಿದ್ದರಾದರೂ ಅವರ ದೇಹದಲ್ಲಿ ಸೇರಿಕೊಂಡಿರುವ ಆರ್ಸೆನಿಕ್ ಅವರು ಪ್ರತಿಬಾರಿಯೂ ತಿರಸ್ಕೃತಗೊಳ್ಳುವಂತೆ ಮಾಡುತ್ತಿದೆ. ಇಲ್ಲಿಯ ಮಹಿಳೆಯರಲ್ಲಿ ಗರ್ಭಪಾತದ ಅಪಾಯ ಆರು ಪಟ್ಟು ಹೆಚ್ಚಾಗಿದೆ. ಮೃತಶಿಶುಗಳ ಜನನ,ಅವಧಿಗೆ ಮುನ್ನವೇ ಹೆರಿಗೆ,ಕಡಿಮೆ ತೂಕ,ನವಜಾತ ಶಿಶುಗಳ ಸಾವು ಇವೆಲ್ಲ ಇಲ್ಲಿ ಸಾಮಾನ್ಯವಾಗಿವೆ.

ಪೀಡಿತ ಪ್ರದೇಶಗಳ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ತಾವು ಪ್ರಯತ್ನಿಸುತ್ತಿದ್ದೇವೆ ಎಂದು ಈ ರಾಜ್ಯಗಳ ಸಂಬಂಧಿಸಿದ ಇಲಾಖೆಗಳು ಹೇಳಿಕೊಂಡಿವೆ. 2024ರ ವೇಳೆಗೆ ಎಲ್ಲ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಒದಗಿಸುವ ಉದ್ದೇಶದ ಜಲಜೀವನ ಮಿಷನ್ ಅಡಿ ಪ.ಬಂಗಾಳದ ಗ್ರಾಮೀಣ ಪ್ರದೇಶಗಳಲ್ಲಿಯ ಕೇವಲ ಶೇ.2.56 ಮತ್ತು ಉತ್ತರ ಪ್ರದೇಶದ ಶೇ.5.62 ಕುಟುಂಬಗಳಿಗೆ ಈ ಭಾಗ್ಯ ಪ್ರಾಪ್ತವಾಗಿದೆ. ಅಚ್ಚರಿಯೆಂಬಂತೆ ಬಿಹಾರದಲ್ಲಿ ಶೇ.52ರಷ್ಟು ಕುಟುಂಬಗಳಿಗೆ ನಲ್ಲಿ ನೀರಿನ ಸೌಲಭ್ಯ ದೊರಕಿದೆ.

ಈ ನತದೃಷ್ಟ ಗ್ರಾಮಗಳ ಅದೆಷ್ಟೋ ಕುಟುಂಬಗಳಲ್ಲಿ ವಯೋವೃದ್ಧರಿಂದ ಹಿಡಿದು ಕಂದಮ್ಮನವರೆಗೂ ಆರ್ಸೆನಿಕ್‌ನಿಂದ ಪೀಡಿತರಾಗಿದ್ದಾರೆ. ಅನಾರೋಗ್ಯದಿಂದ ವೈದ್ಯರ ಬಳಿ ತೆರಳಿದಾಗ ಸುರಕ್ಷಿತ ನೀರನ್ನು ಸೇವಿಸುವಂತೆ ಅವರು ಶಿಫಾರಸು ಮಾಡುತ್ತಾರೆ. ಆದರೆ ಈ ಜನರಿಗೆ ಆ ಭಾಗ್ಯ ಎಲ್ಲಿದೆ? ಹೀಗಾಗಿ ಆರ್ಸೆನಿಕ್ ನೀರನ್ನೇ ಕುಡಿಯುತ್ತಿದ್ದಾರೆ. ಬಹುಶಃ ಮುಂದಿನ ಪೀಳಿಗೆಗಳಿಗೂ ಇದು ಬಳುವಳಿಯಾಗಬಹುದೇನೋ?

ಈ ವರದಿಯ ಇಂಗ್ಲೀಷ್ ಮೂಲ ವರದಿಯನ್ನು ಈ ವೆಬ್ ಸೈಟ್ ನಲ್ಲಿ   thethirdpole.net  ಓದಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News