ಮುಂಗೇರ್ ಘರ್ಷಣೆ: ಬಿಹಾರ ಸರಕಾರ ವಜಾಕ್ಕೆ ಮಹಾಮೈತ್ರಿಕೂಟ ಆಗ್ರಹ

Update: 2020-10-28 15:59 GMT

ಪಾಟ್ನ, ಅ.28: ಬಿಹಾರದ ಮುಂಗೇರ್‌ನಲ್ಲಿ ದುರ್ಗಾದೇವಿಯ ಮೂರ್ತಿಯ ಜಲಸ್ಥಂಭನ ವಿಷಯದಲ್ಲಿ ಉಂಟಾದ ಮಾತಿನ ಚಕಮಕಿ ಹಾಗೂ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಪ್ರಕರಣದ ಬಗ್ಗೆ ಹೈಕೋರ್ಟ್ ನಿಗಾದಲ್ಲಿ ತನಿಖೆ ನಡೆಸಬೇಕು ಹಾಗೂ ರಾಜ್ಯ ಸರಕಾರವನ್ನು ವಜಾಗೊಳಿಸಬೇಕು ಎಂದು ಬಿಹಾರದ ಮಹಾಮೈತ್ರಿಕೂಟ ಒತ್ತಾಯಿಸಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್, ಪೊಲೀಸರ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಹಲವರು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪೊಲೀಸರು ಹೀಗೆ ನಿಷ್ಕರುಣೆಯಿಂದ ವರ್ತಿಸಬಹುದೇ? ಈ ಘರ್ಷಣೆಯಲ್ಲಿ ಬಿಹಾರದ ಅವಳಿ ಇಂಜಿನ್‌ನ ಸರಕಾರದ ಪಾತ್ರ ಖಂಡಿತವಾಗಿಯೂ ಇದೆ. ತಕ್ಷಣ ಡಿಎಸ್‌ಪಿ ಮತ್ತು ಎಸ್‌ಪಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಇದೇ ಸಂದರ್ಭ ಮಾತನಾಡಿದ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ, ಬಿಹಾರದಲ್ಲಿ ‘ನಿರ್ದಯ್ ಕುಮಾರ್ ಮತ್ತು ನಿರ್ಮಮ್(ಕ್ರೂರಿ) ಮೋದಿಯ ಆಡಳಿತವಿದೆ. ತಕ್ಷಣ ರಾಜ್ಯ ಸರಕಾರವನ್ನು ವಜಾಗೊಳಿಸಬೇಕು’ ಎಂದು ಹೇಳಿದರು.

ಮುಂಗೇರ್ ಪ್ರಕರಣದಲ್ಲಿ ಜನರಲ್ ಡಯರ್‌ನ ಪಾತ್ರ ನಿರ್ವಹಿಸಿದ ನಿತೀಶ್ ಕುಮಾರ್ ಹಿಂಸಾಚಾರಕ್ಕೆ ಹೊಣೆಯಾಗಿದ್ದಾರೆ ಎಂದು ಲೋಕಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News