ಚೀನಾದ ನಕ್ಷೆಯಲ್ಲಿ ಲೇಹ್, ಜಮ್ಮು-ಕಾಶ್ಮೀರ: ಭಾರತದ ಕ್ಷಮೆ ಯಾಚಿಸಿದ ಟ್ವಿಟರ್

Update: 2020-10-29 16:48 GMT

ಹೊಸದಿಲ್ಲಿ, ಅ.29: ಲೇಹ್ ಮತ್ತು ಜಮ್ಮು-ಕಾಶ್ಮೀರವನ್ನು ಚೀನಾದ ಪ್ರದೇಶವೆಂದು ತೋರಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಟ್ವಿಟರ್ ಗುರುವಾರ ಮೌಖಿಕವಾಗಿ ಕ್ಷಮೆಯಾಚಿಸಿದೆ. ವೈಯಕ್ತಿಕ ದತ್ತಾಂಶ ರಕ್ಷಣೆಗಾಗಿನ ಜಂಟಿ ಸಂಸದೀಯ ಸಮಿತಿಯೆದುರು ಗುರುವಾರ ಹಾಜರಾದ ಟ್ವಿಟರ್ ಸಂಸ್ಥೆಯ ವಕ್ತಾರರು ಕ್ಷಮೆ ಯಾಚಿಸಿದರು.

ಟ್ವಿಟರ್‌ನಲ್ಲಿ ಪ್ರಕಟವಾದ ನಕ್ಷೆಯ ಬಗ್ಗೆ ತೀವ್ರ ಅಸಮಾಧಾನ ಸೂಚಿಸಿದ ಸಮಿತಿ, ಲಿಖಿತವಾಗಿ ಕ್ಷಮಾಪಣೆ ಪತ್ರ ಸಲ್ಲಿಸುವಂತೆ ಹಾಗೂ ಪ್ರಕರಣದ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಭಾರತ ಸರಕಾರದೊಂದಿಗೆ ಕಾರ್ಯನಿರ್ವಹಿಸಲು ತಾವು ಬದ್ಧರಾಗಿದ್ದೇವೆ ಮತ್ತು ಈ ಪ್ರಕರಣದ ಸೂಕ್ಷ್ಮತೆಯನ್ನು ಗೌರವಿಸುತ್ತೇವೆ ಎಂದು ಟ್ವಿಟರ್ ವಕ್ತಾರರು ಹೇಳಿದ್ದಾರೆ. ಟ್ವಿಟರ್ ಪ್ರಕಟಿಸಿದ್ದ ನಕ್ಷೆಯು ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಅಗೌರವ ಸೂಚಿಸಿದಂತಾಗಿದೆ ಮತ್ತು ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿತ್ತು. ಅಕ್ಟೋಬರ್ 22ರಂದು ಟ್ವಿಟರ್‌ನ ಸಿಇಒ ಜಾಕ್ ಡೋರ್ಸೆಗೆ ಪತ್ರ ಬರೆದಿದ್ದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ಇಂತಹ ನಡೆಯು ಓರ್ವ ಮಧ್ಯವರ್ತಿಯಾಗಿ ಟ್ವಿಟರ್‌ನ ತಟಸ್ಥತೆ ಮತ್ತು ನ್ಯಾಯಸಮ್ಮತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು ಈ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News