×
Ad

ತನ್ನ ಕಾರನ್ನು ಮಾರಾಟ ಮಾಡಿ ನಂತರ ಅದನ್ನು ತಾನೇ ಕದ್ದ ವ್ಯಕ್ತಿಯ ಬಂಧನ

Update: 2020-10-30 14:57 IST

ಹೊಸದಿಲ್ಲಿ: ಇ-ಕಾಮರ್ಸ್ ತಾಣದ ಮೂಲಕ ತನ್ನದೇ ಕಾರನ್ನು ಮಾರಾಟ ಮಾಡಿದ ನೊಯ್ಡಾದ ವ್ಯಕ್ತಿಯೊಬ್ಬ ನಂತರ ಅದನ್ನು ತಾನೇ ಕಳವು ಮಾಡಿದ ವಿಚಿತ್ರ ಘಟನೆ ವರದಿಯಾಗಿದೆ. ಈ ಪ್ರಕರಣ ಸಂಬಂಧ 28 ವರ್ಷದ ಮನೋತ್ತಮ್ ತ್ಯಾಗಿ ಎಂಬ ಆರೋಪಿಯನ್ನು ಬಂಧಿಸಲಾಗಿದೆ.

ಜಿತೆ ಯಾದವ್ ಎಂಬ ಹೆಸರಿನ ವ್ಯಕ್ತಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ಸೆಕೆಂಡ್ ಹ್ಯಾಂಡ್ ಮಾರುತಿ ಸ್ವಿಫ್ಟ್ ಕಾರು ಮಾರಾಟಕ್ಕಿದೆಯೆಂಬ ಜಾಹೀರಾತು ನೋಡಿ ಮಾರಾಟಗಾರನನ್ನು ಸಂಪರ್ಕಿಸಿ ರೂ. 2.60 ಲಕ್ಷಕ್ಕೆ ಕಾರು ಖರೀದಿಸಲು ಒಪ್ಪಿದ್ದ. ಆಗ ಕಾರು ಮಾರಾಟ ಮಾಡಿದ ಮನೋತ್ತಮ್ ತ್ಯಾಗಿ ವಾಹನದ ಮೂಲ ದಾಖಲೆ ಪತ್ರಗಳು ಹಾಗೂ ಒಂದು ಕೀಯನ್ನು ತನ್ನ ಬಳಿಯೇ ಇರಿಸಿಕೊಂಡನಲ್ಲದೆ ಮುಂದೊಂದು ದಿನ ಅದನ್ನು ನೀಡುವುದಾಗಿ ಹೇಳಿದ್ದ. ಯಾದವ್ ರೂ. 2.10 ಲಕ್ಷ ಪಾವತಿಸಿ ಉಳಿದ ಹಣವನ್ನು ದಾಖಲೆಪತ್ರಗಳು ಹಾಗೂ ಇನ್ನೊಂದು ಕೀ ನೀಡಿದ ನಂತರ ನೀಡುವುದಾಗಿ ಹೇಳಿದ.

ಮರುದಿನ ಸೆಕ್ಟರ್ 12ರಲ್ಲಿರುವ ತನ್ನ ಕಚೇರಿಗೆ ತೆರಳಿದ್ದ ಯಾದವ್ ಕಾರನ್ನು ತನ್ನ ಕಚೇರಿಯ ಹೊರಗಡೆ ಪಾರ್ಕ್ ಮಾಡಿದ್ದ. ಆದರೆ ಅಲ್ಲಿಂದ ಕಾರು ಕಳವಾಗಿತ್ತು. ತನಿಖೆ ನಡೆಸಿದ್ದ ಪೊಲೀಸರಿಗೆ ಕಾರಿನಲ್ಲಿ ಜಿಪಿಎಸ್ ಅಳವಡಿಸಿರುವುದು ಹಾಗೂ ಈ ಮೂಲಕ ಮೂಲ ಮಾಲಕ ಯಾದವ್ ಚಲನವಲನದ ಮೇಲೆ ನಿಗಾ ಇಟ್ಟು ನಂತರ ತನ್ನಲ್ಲಿದ್ದ ಇನ್ನೊಂದು ಕೀ ಬಳಸಿ ವಾಹನ ಕದ್ದಿರುವುದು ಪತ್ತೆಯಾಗಿತ್ತು. ನಂತರ ಆತನನ್ನು ಬಂಧಿಸಲಾಯಿತು. ಆತ ಇದೇ ರೀತಿ ಹಲವರಿಗೆ ವಂಚಿಸಿದ್ದಾನೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News