×
Ad

ದಲಿತ ಗ್ರಾ.ಪಂ. ಅಧ್ಯಕ್ಷೆಯ ಪತಿಯ ಜೀವಂತ ದಹನ, ಮೂವರು ಆರೋಪಿಗಳ ಬಂಧನ

Update: 2020-10-30 22:11 IST
ಸಾಂದರ್ಭಿಕ ಚಿತ್ರ

ಲಕ್ನೋ, ಅ. 29: ದಲಿತ ಗ್ರಾ.ಪಂ. ಅಧ್ಯಕ್ಷೆಯ ಪತಿಯನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ಸಾಯಿಸಿರುವ ಘಟನೆ ಉತ್ತರಪ್ರದೇಶದ ಅಮೇಠಿ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ಜಿಲ್ಲೆಯ ಮುನ್ಶಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂದೋಯಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂದೋಯಿಯಾ ಗ್ರಾಮದ ನಿವಾಸಿ ಅರ್ಜುನ್ ಕೋರಿ (40) ಅವರು ಗ್ರಾಮದ ಮನೆಯೊಂದರ ಕಂಪೌಂಡ್ ಒಳಗೆ ಗುರುವಾರ ರಾತ್ರಿ 10.30ಕ್ಕೆ ಸುಟ್ಟು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿರೋಧಿಗಳು ಅರ್ಜುನ್ ಕೋರಿಯ ಹತ್ಯೆ ನಡೆಸಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ. ಈ ನಡುವೆ ದಲಿತ ಗ್ರಾ.ಪಂ. ಮುಖ್ಯಸ್ಥೆ ಹಾಗೂ ಅರ್ಜುನ್ ಕೋರಿಯ ಪತ್ನಿ, ಐವರು ತನ್ನ ಪತಿ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ.

‘‘ನಾವು ನಿನ್ನೆ ರಾತ್ರಿ ಮಾಹಿತಿ ಸ್ವೀಕರಿಸಿದೆವು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅರ್ಜುನ್ ಕೋರಿ ಅವರನ್ನು ಚಿಕಿತ್ಸೆಗಾಗಿ ಸುಲ್ತಾನ್‌ಪುರಕ್ಕೆ ಕಳುಹಿಸಲಾಯಿತು. ಅನಂತರ ಲಕ್ನೋಗೆ ಕರೆದೊಯ್ಯಲು ಸಲಹೆ ನೀಡಲಾಯಿತು. ಇಂದು ಬೆಳಗ್ಗೆ ಲಕ್ನೋಗೆ ಕರೆದೊಯ್ಯುತ್ತಿರುವ ಸಂದರ್ಭ ಅವರು ಮೃತಪಟ್ಟಿದ್ದಾರೆ’’ ಎಂದು ಅಮೇಠಿ ಪೊಲೀಸ್ ಅಧೀಕ್ಷಕ ದಿನೇಶ್ ಸಿಂಗ್ ಹೇಳಿದ್ದಾರೆ. ಅರ್ಜುನ್ ಅವರಿಗೆ ಬೆಂಕಿ ಹಚ್ಚಿದ್ದಾರೋ ಅಥವಾ ಅವರು ಆಕಸ್ಮಿಕವಾಗಿ ಗಾಯಗೊಂಡಿದ್ದಾರೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಅಯೋಧ್ಯೆ ವಲಯದ ಐಜಿಪಿ ಸುನೀಲ್ ಗುಪ್ತಾ ಹೇಳಿದ್ದಾರೆ. ಅರ್ಜುನ್ ಕೋರಿ ಅವರ ಹತ್ಯೆ ಆರೋಪಿಗಳ ಐವರ ಹೆಸರನ್ನು ಕುಟುಂಬ ತಿಳಿಸಿದ ಬಳಿಕ ಪ್ರಕರಣ ಪೊಲೀಸರು ದಾಖಲಿಸಿದ್ದಾರೆ. ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅರ್ಜುನ್ ಕೋರಿ ಅವರ ನಿವಾಸಕ್ಕೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News