ಕೋವಿಡ್-19 ಎಫೆಕ್ಟ್: ಹೊಸ ಬದುಕು ಬಯಸುವ ಲೈಂಗಿಕ ಕಾರ್ಯಕರ್ತೆಯರಿಗೆ ಸಾಲದ ಹೊರೆ ಅಡ್ಡಿ

Update: 2020-10-30 17:03 GMT

ಕೋಲ್ಕತಾ,ಅ.30: ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಏಶ್ಯದ ಅತಿ ದೊಡ್ಡ ಕೆಂಪುದೀಪದ ಪ್ರದೇಶವಾದ ಪಶ್ಚಿಮ ಬಂಗಾಳದ ಸೋನಾಗಾಚಿಯ ಶೇ.89ರಷ್ಟು ಲೈಂಗಿಕ ಕಾರ್ಯಕರ್ತೆಯರು, ಸಾಲದ ಸುಳಿಗೆ ಸಿಲುಕಿದ್ದಾರೆಂದು ಸಮೀಕ್ಷಾ ವರದಿಯೊಂದು ಬಹಿರಂಗಪಡಿಸಿದೆ.

ಮಾನವಕಳ್ಳ ಸಾಗಣೆ ವಿರೋಧಿ ಸಂಸ್ಥೆ ಎಂಬ ಎನ್‌ಜಿಓ ಈ ಸಮೀಕ್ಷೆಯನ್ನು ನಡೆಸಿತ್ತು. ಕೋವಿಡ್-19 ಸಾಂಕ್ರಾಮಿಕದ ಬಳಿಕ ಶೇ.73ರಷ್ಟು ಲೈಂಗಿಕ ಕಾರ್ಯಕರ್ತೆಯರು ತಮ್ಮ ಕಸುಬನ್ನು ತೊರೆಯಲು ಬಯಸುತ್ತಿದ್ದು, ಜೀವನೋಪಾಯಕ್ಕೆ ಬೇರೆ ದಾರಿ ಹುಡುಕತೊಡಗಿದ್ದಾರೆ. ಆದರೆ ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಜೀವನ ನಿರ್ವಹಣೆಗಾಗಿ ಭಾರೀ ಮೊತ್ತದ ಸಾಲಗಳನ್ನು ಪಡೆದುಕೊಂಡಿರುವುದರಿಂದ ಅವರಿಗೆ ಹಾಗೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಸಮೀಕ್ಷೆಯು ತಿಳಿಸಿದೆ.

‘ಕೋವಿಡ್-19 ಸಾಂಕ್ರಾಮಿಕದ ಹಾವಳಿಯಿಂದಾಗಿ ಸೋನಾಗಾಚಿಯ ಶೇ.89ರಷ್ಟು ಲೈಂಗಿಕ ಕಾರ್ಯಕರ್ತೆಯರು ಸಾಲದ ಜೀತಕ್ಕೆ ಸಿಲುಕಿದ್ದಾರೆ. ಅವರಲ್ಲಿ ಶೇ.81ರಷ್ಟು ಮಂದಿ ಅನೌಪಚಾರಿಕ ವಲಯದಿಂದ ಅದರಲ್ಲೂ ವಿಶೇಷವಾಗಿ ಸಾಲಿಗರು, ವೇಶ್ಯಾವಾಟಿಕೆಯ ಮಾಲಕರು, ಮತ್ತಿತರರಿಂದ ಸಾಲಗಳನ್ನು ಪಡೆದುಕೊಂಡಿರುವುದರಿಂದ ಅವರು ಸುಲಭವಾಗಿ ಶೋಷಣೆಗೆ ತುತ್ತಾಗುವಂತಾಗಿದೆ. ಶೇ.73ರಷ್ಟು ಲೈಂಗಿಕ ಕಾರ್ಯಕರ್ತೆಯರ, ವೇಶ್ಯಾವೃತ್ತಿಯನ್ನು ತೊರೆಯಲು ಬಯಸುತ್ತಿದ್ದಾರೆ. ಕೋಲ್ಕತಾದ ಸೋನಾಗಾಚಿಯಲ್ಲಿ 7 ಸಾವಿರಕ್ಕೂ ಅಧಿಕ ಲೈಂಗಿಕ ಕಾರ್ಯಕರ್ತೆಯರಿದ್ದಾರೆಂದು ಅಂದಾಜಿಸಲಾಗಿದೆ. ಮಾರ್ಚ್ ತಿಂಗಳಿಂದ ಅವರಿಗೆ ವ್ಯವಹಾರವಿಲ್ಲದೆ ಇರುವುದರಿಂದ ಆದಾಯ ಮೂಲವು ನಷ್ಟವಾಗಿತ್ತು. ಜುಲೈ ತಿಂಗಳಿನಿಂದೀಚೆಗೆ ಸೋನಾಗಾಚಿಯಲ್ಲಿ ಶೇ.65ರಷ್ಟು ವ್ಯವಹಾರಗಳು ಪುನಾರಂಭಗೊಂಡಿವೆ. ಈ ಸಮೀಕ್ಷೆಯಲ್ಲಿ ಶೇ.98ರಷ್ಟು ಲೈಂಗಿಕ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

 ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಲೈಂಗಿಕ ಕಾರ್ಯಕರ್ತೆಯರು ವ್ಯಾಪಕವಾದ ಹಣಕಾಸು ಒತ್ತಡಕ್ಕೆ ಸಿಲುಕಿದ್ದಾರೆಂದು, ಅವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಎನ್‌ಜಿಓ ಸಂಸ್ಥೆ ದರ್ಬಾರ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News