ಎಲ್‌ಟಿಸಿ ನಗದು ವೋಚರ್ ಐಟಿ ವಿನಾಯಿತಿ ಖಾಸಗಿ ನೌಕರರಿಗೂ ವಿಸ್ತರಣೆ

Update: 2020-10-30 17:13 GMT

ಹೊಸದಿಲ್ಲಿ,ಅ.30: ಕೇಂದ್ರ ಸರಕಾರಿ ನೌಕರರ ಎಲ್‌ಟಿಸಿ ನಗದು ವೋಚರ್ ಯೋಜನೆಗೆ ಘೋಷಿಸಲಾಗಿದ್ದ ಆದಾಯ ತೆರಿಗೆ ವಿನಾಯಿತಿಯನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯು ಗುರುವಾರ ರಾಜ್ಯ ಸರಕಾರಿ ಹಾಗೂ ಸರಕಾರ ಸ್ವಾಮ್ಯದ ಸಂಸ್ಥೆಗಳು ಹಾಗೂ ಖಾಸಗಿ ವಲಯದ ನೌಕರರಿಗೂ ವಿಸ್ತರಿಸಿದೆ.

   ಕೇಂದ್ರ ಸರಕಾರೇತರ ನೌಕರರಲ್ಲಿ ಪ್ರತಿ ವ್ಯಕ್ತಿಗೆ ಗರಿಷ್ಠ 36 ಸಾವಿರ ರೂ.ವರೆಗಿನ ರಜಾ ಪ್ರವಾಸ ರಿಯಾಯಿತಿ (ಎಲ್‌ಟಿಸಿ)ಗೆ ಆದಾಯ ತೆರಿಗೆ ವಿನಾಯಿತಿ ದೊರೆಯಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ತಿಳಿಸಿದೆ.

  ರಾಜ್ಯ ಸರಕಾರದ ಉದ್ಯೋಗಿಗಳು, ಸಾರ್ವಜನಿಕ ರಂಗದ ಉದ್ದಿಮೆಗಳು, ಬ್ಯಾಂಕ್‌ಗಳು ಹಾಗೂ ಖಾಸಗಿ ವಲಯದ ನೌಕರರನ್ನು ಕೇಂದ್ರ ಸರಕಾರೇತರ ಉದ್ಯೋಗಿಗಳೆಂದು ಪರಿಗಣಿಸಲಾಗುತ್ತಿದೆ.

  ಎಲ್‌ಟಿಸಿ ನಗದು ವೋಚರ್ ಯೋಜನೆಯಡಿ ಪ್ರಯಾಣದರವು ತೆರಿಗೆ ರಹಿತವಾಗಿರುತ್ತದೆ. ವಿಮಾನ ಅಥವಾ ರೈಲು ಪ್ರಯಾಣ ದರವು ದಿನದ ಲೆಕ್ಕದಲ್ಲಿ ಮರುಪಾವತಿಯಾಗಲಿದೆ ಹಾಗೂ 10 ದಿನಗಳ ರಜೆ ಸಹಿತ ವೇತನ ದೊರೆಯಲಿದೆ. ಪ್ರತಿ ವ್ಯಕ್ತಿಗೆ ಗರಿಷ್ಠ 36 ಸಾವಿರ ರೂ.ವರೆಗಿನ ಮೊತ್ತಕ್ಕೆ ತೆರಿಗೆ ವಿನಾಯಿತಿ ಲಭ್ಯವಾಗಲಿದೆ.

  ಎಲ್‌ಟಿಸಿ ದರಕ್ಕಿಂತ ಮೂರು ಪಟ್ಟು ಹೆಚ್ಚು ಮೌಲ್ಯದ ಹಾಗೂ ಶೇ.12ಕ್ಕಿಂತ ಅಧಿಕ ಜಿಎಸ್‌ಟಿ ತೆರಿಗೆಯಿರುವ ಉತ್ಪನ್ನ ಅಥವಾ ಸೇವೆಯನ್ನು ನೋಂದಾಯಿತ ಮಳಿಗೆಗಳು ಅಥವಾ ಸೇವಾದಾರರಿಂದ ಬಳಸಿಕೊಳ್ಳಬೇಕು. ಒಂದು ಬಾರಿ ರಜೆ ಎನ್‌ಕ್ಯಾಶ್‌ಮೆಂಟ್ ಪಡೆಯಬಹುದಾಗಿದೆ.

 ಕೋವಿಡ್-19 ಲಾಕ್‌ಡೌನ್‌ನಿಂದ ಹಾನಿಗೀಡಾದ ಆರ್ಥಿಕತೆಗೆ ಚೈತನ್ಯ ನೀಡುವ ಉದ್ದೇಶದಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಸರಕಾರಿ ನೌಕರ ರಜಾಕಾಲದ ಪ್ರವಾಸ ಹಾಗೂ ಆ ಅವಧಿಯಲ್ಲಿ ಅವರು ಖರೀದಿಸುವ ವಸ್ತುಗಳು ಹಾಗೂ ಸೇವೆಗೆ ತೆರಿಗೆ ವಿನಾಯಿತಿಗಳನ್ನು ಘೋಷಿಸಿದ್ದರು. ಇದೀಗ ಈ ಸೌಲಭ್ಯವನ್ನು ರಾಜ್ಯ ನೌಕರರು ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಖಾಸಗಿ ರಂಗಕ್ಕೆ ವಿಸ್ತರಿಸಿರುವುದರಿಂದ ದೇಶದ ದೊಡ್ಡ ಸಂಖ್ಯೆಯ ಉದ್ಯೋಗಸ್ಥರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News