ಬೆಂಗಳೂರಿನ ಸಂಸ್ಥೆಗೆ 9 ಸಾವಿರ ಕೋಟಿ ಪರಿಹಾರ ನೀಡಲು ಇಸ್ರೋ ಗೆ ಅಮೆರಿಕ ಕೋರ್ಟ್ ಆದೇಶ

Update: 2020-10-30 17:26 GMT

ವಾಶಿಂಗ್ಟನ್, ಅ. 30: ಬೆಂಗಳೂರಿನ ಕಂಪೆನಿ ದೇವಾಸ್ ಮಲ್ಟಿಮೀಡಿಯಕ್ಕೆ 1.2 ಬಿಲಿಯ ಡಾಲರ್ (ಸುಮಾರು 8,935 ಕೋಟಿ ರೂಪಾಯಿ) ಪರಿಹಾರ ನೀಡುವಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಾಣಿಜ್ಯ ಘಟಕ ಅಂತರಿಕ್ಷ್ ಕಾರ್ಪೊರೇಶನ್‌ಗೆ ಅಮೆರಿಕದ ನ್ಯಾಯಾಲಯವೊಂದು ಸೂಚಿಸಿದೆ.

ದೇವಾಸ್ ಮಲ್ಟಿಮೀಡಿಯ ಕಂಪೆನಿ ಜೊತೆಗೆ 2005ರಲ್ಲಿ ಮಾಡಿಕೊಂಡಿರುವ ಉಪಗ್ರಹ ಒಪ್ಪಂದವನ್ನು ರದ್ದುಪಡಿಸಿರುವುದಕ್ಕಾಗಿ ಅಂತರಿಕ್ಷ್ ಕಾರ್ಪೊರೇಶನ್ ಈ ಪರಿಹಾರ ನೀಡಬೇಕಾಗಿದೆ.

2005 ಜನವರಿಯಲ್ಲಿ ಏರ್ಪಟ್ಟ ಒಪ್ಪಂದದಂತೆ, ಎರಡು ಉಪಗ್ರಹಗಳನ್ನು ನಿರ್ಮಿಸಿ, ಉಡಾಯಿಸಿ ಹಾಗೂ ನಿರ್ವಹಿಸಲು ಹಾಗೂ 70 ಮೆಗಾ ಹರ್ಟ್ಸ್ ಎಸ್-ಬ್ಯಾಂಡ್ ಸ್ಪೆಕ್ಟ್ರಮನ್ನು ದೇವಾಸ್‌ಗೆ ಒದಗಿಸಲು ಅಂತರಿಕ್ಷ್ ಒಪ್ಪಿಕೊಂಡಿತ್ತು. ಈ ಸ್ಪೆಕ್ಟ್ರಮನ್ನು ಬಳಸಿಕೊಂಡು ಭಾರತದಾದ್ಯಂತ ಹೈಬ್ರಿಡ್ ಉಪಗ್ರಹ ಮತ್ತು ಭೂ ಸಂಪರ್ಕ ಸೇವೆಗಳನ್ನು ನೀಡಲು ದೇವಾಸ್ ಬಯಸಿತ್ತು.

ಆದರೆ, ಈ ಒಪ್ಪಂದವನ್ನು ಅಂತರಿಕ್ಷ್ 2011 ಫೆಬ್ರವರಿಯಲ್ಲಿ ರದ್ದುಪಡಿಸಿತು. ಮುಂದಿನ ಹಲವಾರು ವರ್ಷಗಳಲ್ಲಿ ದೇವಾಸ್ ಕಂಪೆನಿಯು ಭಾರತದಲ್ಲಿ ಹಲವಾರು ನ್ಯಾಯಾಲಯಗಳ ಮೊರೆ ಹೋಯಿತು.

 ಅವೆುರಿಕದ ಸಿಯಾಟಲ್ ಜಿಲ್ಲೆಯ ನ್ಯಾಯಾಧೀಶ ಥಾಮಸ್ ಎಸ್. ಝಿಲ್ಲಿ ಅಕ್ಟೋಬರ್ 27ರಂದು ಆದೇಶವೊಂದನ್ನು ಹೊರಡಿಸಿ, ಅಂತರಿಕ್ಷ್ ಕಾರ್ಪೊರೇಶನ್ ದೇವಾಸ್ ಮಲ್ಟಿಮೀಡಿಯಕ್ಕೆ 562.5 ಮಿಲಿಯ ಡಾಲರ್ (ಸುಮಾರು 4,188 ಕೋಟಿ ರೂಪಾಯಿ) ಪರಿಹಾರ ಮತ್ತು ಅದಕ್ಕೆ ಬಡ್ಡಿಯಾಗಿ ಒಟ್ಟು 1.2 ಬಿಲಿಯ ಡಾಲರ್ ಮೊತ್ತ ಪಾವತಿಸಬೇಕು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News