ಪಂಜಾಬ್ ಬಳಿಕ ಕೇಂದ್ರದ ಕೃಷಿ ಕಾಯ್ದೆ ತಿರಸ್ಕರಿಸಿ ಮಸೂದೆ ಮಂಡಿಸಿದ ಇನ್ನೊಂದು ರಾಜ್ಯ

Update: 2020-10-31 14:22 GMT

ಜೈಪುರ, ಅ. 31: ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದ ಕೃಷಿ ಕಾಯ್ದೆಯನ್ನು ತಿರಸ್ಕರಿಸಿ ರಾಜಸ್ಥಾನ ಸರಕಾರ ಶನಿವಾರ ವಿಧಾನ ಸಭೆಯಲ್ಲಿ ಮೂರು ಮಸೂದೆಗಳನ್ನು ಮಂಡಿಸಿತು. ಪಂಜಾಬ್ ವಿಧಾನ ಸಭೆ ಈ ತಿಂಗಳ ಆರಂಭದಲ್ಲಿ ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾಯ್ದೆಗೆ ವಿರುದ್ಧ ನಿಲುವಳಿ ಅಂಗೀಕರಿಸಿದ ಹಾಗೂ ಕೃಷಿ ಕಾಯ್ದೆಗೆ ಪ್ರತಿಯಾಗಿ ನಾಲ್ಕು ಮಸೂದೆಗಳನ್ನು ಸರ್ವಸಮ್ಮತವಾಗಿ ಅಂಗೀಕರಿಸಿದ ಬಳಿಕ ರಾಜಸ್ಥಾನ ಕೂಡ ಈ ದಾರಿಯಲ್ಲಿ ಸಾಗಿದೆ.

ಪಂಜಾಬ್ ವಿಧಾನ ಸಭೆಯಲ್ಲಿ ಬಿಜೆಪಿ ಶಾಸಕರು ಭಾಗಿಯಾಗಿ 5 ಗಂಟೆಗಳ ಕಾಲ ಚರ್ಚೆ ನಡೆಸಿದ ಬಳಿಕ ಈ ತಿಂಗಳ ಆರಂಭದಲ್ಲಿ ಮಸೂದೆ ಅಂಗೀಕರಿಸಲಾಗಿತ್ತು. ರಾಜಸ್ಥಾನದ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ದರಿವಾಲ್ ಅವರು ಅವಶ್ಯಕ ಸಾಮಾಗ್ರಿ (ವಿಶೇಷ ನಿಯಮ ಹಾಗೂ ರಾಜಸ್ಥಾನ ತಿದ್ದುಪಡಿ) ಮಸೂದೆ-2020, ಬೆಲೆ ಖಾತರಿ ಹಾಗೂ ಕೃಷಿ ಸೇವೆಗಳಲ್ಲಿ ರೈತರ (ಸಶಕ್ತೀಕರಣ ಹಾಗೂ ರಕ್ಷಣೆ) ಒಪ್ಪಂದ ಮಸೂದೆ-2020 ಹಾಗೂ ರೈತರ ಉತ್ಪಾದನೆ ವ್ಯಾಪಾರ ಹಾಗೂ ವಾಣಿಜ್ಯ (ಪ್ರಚಾರ ಹಾಗೂ ಸಹಾಯ) ಮಸೂದೆ-2020 ಅನ್ನು ಮಂಡಿಸಿದರು.

ವಿಧಾನ ಸಭೆಯ ಮೊದಲ ಅಧಿವೇಶದಲ್ಲಿ ಅವರು ಕಾರ್ಯ ವಿಧಾನ ಸಂಹಿತೆ (ರಾಜಸ್ಥಾನ ತಿದ್ದುಪಡಿ)ಮಸೂದೆ-2020ಯನ್ನು ಕೂಡ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News