ಯೋಧರ ಸುರಕ್ಷತೆ ನಿರೀಕ್ಷಿಸಿದ್ದಕ್ಕೆ ನಾವು ಕ್ಷಮೆ ಕೋರಬೇಕೇ?: ಪುಲ್ವಾಮ ಕುರಿತು ಬಿಜೆಪಿಗೆ ಶಶಿ ತರೂರ್ ತಿರುಗೇಟು

Update: 2020-10-31 15:25 GMT
ಫೈಲ್ ಚಿತ್ರ

ಹೊಸದಿಲ್ಲಿ,ಅ.31: ಕಳೆದ ವರ್ಷದ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡಿದ್ದ ಭಯೋತ್ಪಾದಕ ದಾಳಿಯ ಬಗ್ಗೆ ತನ್ನ ಹೇಳಿಕೆಗಳಿಗಾಗಿ ಕಾಂಗ್ರೆಸ್ ಕ್ಷಮೆಯನ್ನು ಯಾಚಿಸಬೇಕು ಎಂಬ ಬಿಜೆಪಿಯ ಆಗ್ರಹಕ್ಕೆ ತಿರುಗೇಟು ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು,ಸರಕಾರದಿಂದ ಯೋಧರ ಸುರಕ್ಷತೆಯನ್ನು ನಿರೀಕ್ಷಿಸಿದ್ದಕ್ಕೆ ನಾವು ಕ್ಷಮೆ ಕೋರಬೇಕೇ ಎಂದು ಪ್ರಶ್ನಿಸಿದ್ದಾರೆ.

 ‘ಕಾಂಗ್ರೆಸ್ ಪಕ್ಷವು ಕ್ಷಮೆ ಕೋರಬೇಕು ಎಂದು ಏಕೆ ಬಯಸಲಾಗಿದೆ ಎನ್ನುವುದು ನನಗಿನ್ನೂ ಅರ್ಥವಾಗಿಲ್ಲ ’ಎಂದು ಟ್ವೀಟಿಸಿರುವ ತರೂರ,ಸರಕಾರದಿಂದ ಯೋಧರ ಸುರಕ್ಷತೆಯನ್ನು ನಿರೀಕ್ಷಿಸಿದ್ದಕ್ಕಾಗಿಯೇ,ರಾಷ್ಟ್ರೀಯ ದುರಂತವನ್ನು ರಾಜಕೀಕರಿಸುವ ಬದಲು ರಾಷ್ಟ್ರಪ್ರೇಮವನ್ನು ಮೆರೆದಿದ್ದಕ್ಕಾಗಿಯೇ ಅಥವಾ ಹುತಾತ್ಮ ಯೋಧರ ಕುಟುಂಬಗಳಿಗೆ ಸಂತಾಪಗಳನ್ನು ವ್ಯಕ್ತಪಡಿಸಿದ್ದಕ್ಕಾಗಿಯೇ? ಏಕಾಗಿ ಕಾಂಗ್ರೆಸ್ ಕ್ಷಮೆಯನ್ನು ಯಾಚಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನವೇ ನಡೆಸಿತ್ತು ಎಂದು ಆ ದೇಶದ ಸಚಿವ ಫವಾದ್ ಚೌಧರಿ ಅವರು ಗುರುವಾರ ಸಂಸತ್ತಿನಲ್ಲಿ ಹೇಳಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ದಾಳಿಗಳನ್ನು ನಡೆಸುತ್ತಿದ್ದಾರೆ.

ಶನಿವಾರ ಬೆಳಿಗ್ಗೆ ಗುಜರಾತಿನ ಕೇವಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 145ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಮೋದಿ,ಪ್ರತಿಪಕ್ಷಗಳು ಪುಲ್ವಾಮಾ ದಾಳಿಯ ಬಳಿಕ ಅದನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳಲು ಯತ್ನಿಸಿದ್ದವು ಎಂದು ಆರೋಪಿಸಿದ್ದರು. ಪಾಕಿಸ್ತಾನಿ ಸಚಿವರ ಹೇಳಿಕೆಯು ಸತ್ಯವನ್ನು ಬಯಲುಗೊಳಿಸಿದೆ ಮತ್ತು ಕೇಂದ್ರದ ಟೀಕಾಕಾರರ ಸದ್ದಡಗಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶುಕ್ರವಾರ ಹೇಳಿದ್ದರು. ಪುಲ್ವಾಮಾ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ‘ಒಳಸಂಚು ಸಿದ್ಧಾಂತಗಳ’ ಬಗ್ಗೆ ಮಾತನಾಡಿದ್ದಕ್ಕಾಗಿ ಕಾಂಗ್ರೆಸ್ ಕ್ಷಮೆ ಯಾಚಿಸಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಆಗ್ರಹಿಸಿದ್ದರು.

ಬಿಜೆಪಿ ವಕ್ತಾರ ಸಂಬಿತ ಪಾತ್ರಾ ಮತ್ತು ಪಕ್ಷದ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರೂ ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News