ಈರುಳ್ಳಿ ದಾಸ್ತಾನು ಮಿತಿ ಏರಿಕೆ ಮಾಡುವಂತೆ ಕೇಂದ್ರಕ್ಕೆ ಉದ್ಧವ್ ಠಾಕ್ರೆ ಆಗ್ರಹ

Update: 2020-10-31 16:29 GMT

ಮುಂಬೈ, ಅ. 31: ರೈತರಿಂದ ನೇರವಾಗಿ ಈರುಳ್ಳಿ ಖರೀದಿಸುವ ರಾಜ್ಯದ ಸಗಟು ವ್ಯಾಪಾರಿಗಳ ಈರುಳ್ಳಿ ದಾಸ್ತಾನು ಮಿತಿಯನ್ನು 1,500 ಮೆಟ್ರಿಕ್ ಟನ್‌ಗೆ ಏರಿಕೆ ಮಾಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಹಾಗೂ ಪಡಿತರ ವಿತರಣೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಅಕ್ಟೋಬರ್ 30ರಂದು ಪತ್ರ ಬರೆದಿರುವ ಉದ್ಧವ್ ಠಾಕ್ರೆ, 25 ಮೆಟ್ರಿಕ್ ಟನ್‌ಗಳ ಸೀಮಿತ ಮಿತಿಯ ಕಾರಣಕ್ಕೆ ಸಗಟು ವ್ಯಾಪಾರಿಗಳು ಕೃಷಿಕರಿಂದ ಈರುಳ್ಳಿ ಖರೀದಿಸುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ‘‘ಇದು ರೈತರಿಂದ ಗ್ರಾಹಕರಿಗೆ ಪೂರೈಕೆ ಸರಪಣಿಯನ್ನು ಸ್ಥಗಿತಗೊಳಿಸುತ್ತದೆ. ಇದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ’’ ಎಂದು ಅವರು ಹೇಳಿದ್ದಾರೆ. ಖಾರೀಫ್ ನೀರುಳ್ಳಿ ಸಾಮಾನ್ಯವಾಗಿ ನವೆಂಬರ್ ಮೊದಲ ವಾರದಲ್ಲಿ ಬರಲು ಆರಂಭವಾಗುತ್ತದೆ. ಈ ಈರುಳ್ಳಿ ಬೇಗನೆ ಕೊಳೆತು ಹೋಗುತ್ತದೆ. ದಾಸ್ತಾನು ಇರಿಸುವ ಪ್ರಸಕ್ತ ಮಿತಿಯಿಂದಾಗಿ ವ್ಯಾಪಾರಿಗಳು ಈ ಈರುಳ್ಳಿಯನ್ನು ಖರೀದಿಸದೇ ಇದ್ದರೆ, ಮಹಾರಾಷ್ಟ್ರದ ರೈತರು ದೊಡ್ಡ ನಷ್ಟ ಅನುಭವಿಸಲಿದ್ದಾರೆ ಎಂದು ಅವರು ಹೇಳಿದರು.

ಕೊರೋನದಿಂದಾಗಿ ಕಳೆದ 6 ತಿಂಗಳಿಂದ ಈರುಳ್ಳಿ ಬೆಳೆಗಾರರು ಸಾಕಷ್ಟು ಸಂಕಷ್ಟ ಅನುಭವಿಸದ್ದಾರೆ ಎಂದು ಹೇಳಿರುವ ಉದ್ಧವ್ ಠಾಕ್ರೆ, ಈರುಳ್ಳಿ ದಾಸ್ತಾನು ಮಿತಿಯನ್ನು 1,500 ಮೆಟ್ರಿಕ್ ಟನ್‌ಗಳಿಗೆ ಏರಿಕೆ ಮಾಡುವಂತೆ ಆಗ್ರಹಿಸಿದ್ದಾರೆ. ಸಗಟು ವ್ಯಾಪಾರಿಗಳಿಗೆ 25 ಮೆಟ್ರಿಕ್ ಟನ್ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ 2 ಮೆಟ್ರಿಕ್ ಟನ್ ದಾಸ್ತಾನು ಮಿತಿ ಈರುಳ್ಳಿ ಬೆಳೆಗಾರರು ಹಾಗೂ ವ್ಯಾಪಾರಿಗಳ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News