ಪ್ರಧಾನಿಯಿಂದ ಸಬರಮತಿ ಜಲ ವಿಮಾನ ಸೇವೆ ಉದ್ಘಾಟನೆ

Update: 2020-10-31 16:36 GMT

ಕೆವಾಡಿಯಾ (ಗುಜರಾತ್), ಅ. 31: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ಜಲವಿಮಾನ ಸೇವೆಯನ್ನು ಗುಜರಾತ್‌ನ ಕೆವಾಡಿಯದಲ್ಲಿ ಶನಿವಾರ ಉದ್ಘಾಟಿಸಿದರು. ಅಲ್ಲದೆ, ಉದ್ಘಾಟನಾ ವಿಮಾನದಲ್ಲಿ ಅವರು ಕೆವಾಡಿಯದ ಸರ್ದಾರ್ ಸರೋವರದಿಂದ ಅಹ್ಮದಾಬಾದ್‌ನ ಸಬರಮತಿ ನದಿ ದಡದ ವರೆಗೆ ಪ್ರಯಾಣಿಸಿದರು. ಸರ್ದಾರ್ ವಲ್ಲಭಾಭಾಯಿ ಅವರ 145ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಕೆವಾಡಿಯದಲ್ಲಿರುವ ಏಕತಾ ಪ್ರತಿಮೆಯಿಂದ 200 ಕಿ.ಮೀ. ದೂರದಲ್ಲಿರುವ ಸಬರಮತಿ ದಡಕ್ಕೆ 45 ನಿಮಿಷಗಳ ಜಲ ವಿಮಾನ ಸೇವೆ ಆರಂಭಿಸಲಾಯಿತು. ಸ್ಪೈಸ್ ಜೆಟ್ ವಾಯು ಯಾನ ಸಂಸ್ಥೆ ಈ ಸೇವೆ ಆರಂಭಿಸಿದೆ.

ಸರ್ದಾರ್ ವಲ್ಲಭಾಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಸರ್ದಾರ್ ಸರೋವರದಿಂದ ಸಬರಮತಿ ದಡಕ್ಕೆ ಜಲ ವಿಮಾನ ಸೇವೆ ಕೂಡ ಆರಂಭಿಸಲಾಗದೆ. ಏಕತೆಯ ಪ್ರತಿಮೆ ವೀಕ್ಷಿಸಲು ಜನರನ್ನು ಇನ್ನು ಮುಂದೆ ಈ ಜಲ ವಿಮಾನ ಸೇವೆ ಬಳಸಬಹುದು. ಈ ಎಲ್ಲ ಪ್ರಯತ್ನಗಳು ಈ ಪ್ರದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದರು. ಪ್ರತಿದಿನ ಸೇವೆ ನೀಡಲಿರುವ ಈ ವಿಮಾನಗಳು ನಿರ್ಗಮನ ಹಾಗೂ ಆಗಮನಕ್ಕೆ ವಿಧಿಸುವ ಟಿಕೆಟ್‌ನ ದರ 1,400 ರೂಪಾಯಿ.

 ಈ ಜಲ ವಿಮಾನದ ಸೇವೆ ಬಳಸುವವರಿಗೆ ಕೆವಾಡಿಯದಲ್ಲಿ ಇರುವ ಸರ್ದಾರ್ ವಲ್ಲಭಾಭಾಯಿ ಪಟೇಲ್ ಪ್ರತಿಮೆ ಆಕರ್ಷಣೀಯವಾಗಿ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ. ಕಾರ್ಯಕ್ರಮದಲ್ಲಿ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News