ನಿರ್ಮಲಾ ಸೀತಾರಾಮನ್ ಜೊತೆ ಕಾರ್ಯ ನಿರ್ವಹಣೆ ಆರ್ಥಿಕ ಸುಧಾರಣೆಗೆ ಪೂರಕವಲ್ಲ ಎಂದನಿಸಿತ್ತು

Update: 2020-10-31 16:40 GMT

ಹೊಸದಿಲ್ಲಿ,ಅ.31: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಧಿಕಾರ ಸ್ವೀಕರಿಸಿದ ಒಂದು ತಿಂಗಳಲ್ಲೇ ಆಗ ವಿತ್ತಕಾರ್ಯದರ್ಶಿಯಾಗಿದ್ದ ತಾನು ಇಲಾಖೆಯಿಂದ ನಿರ್ಗಮಿಸಬೇಕೆಂದು ಬಯಸಿದ್ದರು ಎಂದು ಸುಭಾಷ ಚಂದ್ರ ಗರ್ಗ್ ಅವರು ಆರೋಪಿಸಿದ್ದಾರೆ.

ಸೀತಾರಾಮನ್ ಜೊತೆ ಕಾರ್ಯ ನಿರ್ವಹಿಸುವುದು ಕಷ್ಟವಾಗಲಿದೆ ಮತ್ತು ಅದು ಭಾರತದ 10 ಲಕ್ಷ ಕೋಟಿ ಡಾ.ಆರ್ಥಿಕತೆಯನ್ನು ನಿರ್ಮಿಸುವ ಗುರಿಸಾಧನೆಗಾಗಿ ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಲು ಪೂರಕವಾಗುವುದಿಲ್ಲ ಎನ್ನುವುದು ಆರಂಭದಲ್ಲೇ ಸ್ಪಷ್ಟವಾಗಿತ್ತು ಎಂದು ಗರ್ಗ್ ಶನಿವಾರ ಪ್ರಕಟಗೊಂಡ ಬ್ಲಾಗ್‌ನಲ್ಲಿ ಹೇಳಿದ್ದಾರೆ.

ಆರ್ಥಿಕ ನೀತಿ ವಿಷಯಗಳು ಮತ್ತು ತನ್ನೊಂದಿಗೆ ಕೆಲಸ ಮಾಡುವ ಅಧಿಕಾರಿಗಳ ಕುರಿತು ಸೀತಾರಾಮನ್ ವಿಭಿನ್ನ ವ್ಯಕ್ತಿತ್ವ,ಜ್ಞಾನ,ಕೌಶಲ ಮತ್ತು ನಿಲುವನ್ನು ಹೊಂದಿದ್ದರು ಎಂದಿರುವ ಗರ್ಗ್,ಅವರು ತನ್ನ ಬಗ್ಗೆ ಕೆಲವೊಂದು ಪೂರ್ವಗ್ರಹಗಳನ್ನು ಹೊತ್ತುಕೊಂಡೇ ಬಂದಿದ್ದರು,ಇದಕ್ಕೆ ಕಾರಣಗಳು ತನಗೆ ಇನ್ನೂ ಸ್ಪಷ್ಟವಾಗಿಲ್ಲ. ಅವರಿಗೆ ತನ್ನಲ್ಲಿ ವಿಶ್ವಾಸವಿದ್ದಂತಿರಲಿಲ್ಲ,ಅವರಿಗೆ ತನ್ನೊಂದಿಗೆ ಕೆಲಸ ಮಾಡುವುದೂ ಇಷ್ಟವಿರಲಿಲ್ಲ ಎಂದಿದ್ದಾರೆ.

1983ರ ಬ್ಯಾಚ್‌ನ ರಾಜಸ್ಥಾನ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದ ಗರ್ಗ್ ಇದೇ ಮೊದಲ ಬಾರಿಗೆ ಸೀತಾರಾಮನ್‌ರನ್ನು ದೂರಿದ್ದಾರೆ. ಈ ಹಿಂದೆ ತನ್ನ ದಿಢೀರ್ ಸ್ವಯಂ ನಿವೃತ್ತಿಯ ಕುರಿತು ಮಾತನಾಡುವಾಗ ಗರ್ಗ್,ತನ್ನ ಕೆಲವು ನಿರ್ಧಾರಗಳು ತನ್ನ ಮೇಲಿನವರಿಗೆ ಇಷ್ಟವಾಗಿಲ್ಲದಿರಬಹುದು ಎಂದು ಹೇಳಿದ್ದರು.

2017 ಜೂನ್‌ನಲ್ಲಿ ವಿತ್ತ ಸಚಿವಾಲಯದಲ್ಲಿ ಕಾರ್ಯದರ್ಶಿ(ಆರ್ಥಿಕ ವ್ಯವಹಾರಗಳು)ಯಾಗಿ ನಿಯೋಜಿತರಾಗಿದ್ದ ಗರ್ಗ್ 2019 ಮಾರ್ಚ್‌ನಲ್ಲಿ ವಿತ್ತ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಅದೇ ವರ್ಷದ ಜುಲೈನಲ್ಲಿ ವಿದ್ಯುತ್ ಸಚಿವಾಲಯಕ್ಕೆ ಎತ್ತಂಗಡಿಯಾಗಿದ್ದ ಅವರು 2019 ಅಕ್ಟೋಬರ್‌ನಲ್ಲಿ ಐಎಎಸ್ ಸೇವೆಗೆ ರಾಜೀನಾಮೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News